ಶಿವಪುರಿ[ಸೆ.26]: ಬೀದಿಯಲ್ಲಿ ಮಲ ವಿಸರ್ಜನೆ ಮಾಡಿದ್ದಾರೆಂದು ಆರೋಪಿಸಿ ದಲಿತ ಸಮುದಾಯಕ್ಕೆ ಸೇರಿದ ಮಕ್ಕಳನ್ನು ಗುಂಪೊಂದು ಥಳಿಸಿ ಕೊಂದ ಮೃಗೀಯ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಭಾವ್‌ಕೇದಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮುಂಜಾನೆ 6.30ರ ಹೊತ್ತಿಗೆ ಪಂಚಾಯತ್‌ ಮುಂಭಾಗದ ಬೀದಿಯಲ್ಲಿ ಮಲ ವಿಸರ್ಜನೆ ಮಾಡಿದ್ದಾರೆಂದು ಆರೋಪಿಸಿ ರೋಶನಿ ಬಾಲ್ಮಿಕಿ (12) ಹಾಗೂ ಅವಿನಾಶ್‌ ಬಾಲ್ಮಿಕಿ (10) ಎಂಬ ಮಕ್ಕಳಿಬ್ಬರನ್ನು ಮನ ಬಂದಂತೆ ಥಳಿಸಲಾಗಿದೆ. ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಹಕೀಂ ಯಾದವ್‌ ಹಾಗೂ ಆತನ ಸಹೋದರ ರಾಮೇಶ್ವರ್‌ ಯಾದವ್‌ ಎಂಬವರನ್ನು ಬಂಧಿಸಿದ್ದು, ಕೊಲೆ ಹಾಗೂ ದಲಿತ ದೌರ್ಜನ್ಯ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ತಮ್ಮನ್ನು ಗ್ರಾಮದಲ್ಲಿ ಜಾತಿ ಹೆಸರಿನಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಕೈ ಪಂಪಿನಿಂದ ಎಲ್ಲರೂ ನೀರು ತೆಗೆದ ಬಳಿಕ ನೀವು ಬಳಸಬೇಕು ಎಂದು ನಮಗೆ ಆದೇಶಿಸಲಾಗಿತ್ತು.

ಎರಡು ವರ್ಷಗಳ ಹಿಂದೆ ನನಗೂ ಆರೋಪಿಗಳಿಗೂ ಜಗಳ ನಡೆದು ನನಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು. ಅಲ್ಲದೇ ಅವರ ಮನೆಯಲ್ಲಿ ಕಡಿಮೆ ಕೂಲಿಗೆ ಕೆಲಸ ಮಾಡಲು ಹೇಳಿದ್ದರು ಎಂದು ಮೃತರ ತಂದೆ ಮನೋಜ್‌ ಬಾಲ್ಮಿಕಿ ಆರೋಪಿಸಿದ್ದಾರೆ.