ಹುಬ್ಬಳ್ಳಿ :  ಬೆಂಗಳೂರಿನಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನ ಬೋಗಿ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ಮರದ ಕೊಂಬೆಯೊಂದು ಬಿದ್ದು, ಸುಮಾರು ಒಂದು ಗಂಟೆ ಸಂಚಾರ ಸ್ಥಗಿತಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಈ ರೈಲಿನಲ್ಲಿ ಶಾಸಕ ಸಿ.ಸಿ.ಪಾಟೀಲ್‌ ಸೇರಿದಂತೆ ಕೆಲ ಶಾಸಕರಿದ್ದು, ಅದೃಷ್ಟವಶಾತ್‌ ಪ್ರಯಾಣಿಕರಾರ‍ಯರಿಗೂ ಹಾನಿಯಾಗಿಲ್ಲ.

ರಾತ್ರಿ 9.15ಕ್ಕೆ ಬೆಂಗಳೂರಿನಿಂದ ಹೊರಟ ರೈಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮುದ್ದಲಿಂಗನಹಳ್ಳಿ ಗೇಟ್‌ ಬಳಿ ಸಾಗುತ್ತಿದ್ದಾಗ ಭಾರೀ ಗಾಳಿ-ಮಳೆಗೆ ಮರವೊಂದರ ಕೊಂಬೆ ಕೊನೇ ಬೋಗಿ ಮೇಲೆ ಬಿದ್ದಿದೆ. ಇದರಿಂದ ರೈಲಿನಲ್ಲಿ ದಿಢೀರ್‌ ಲೈಟ್‌ಗಳು ಬಂದ್‌ ಆಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಸಿಬ್ಬಂದಿ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿದ ಬಳಿಕ ರೈಲು ಹುಬ್ಬಳ್ಳಿ ಕಡೆಗೆ ಹೊರಟಿತು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಘಟನೆ ಕುರಿತು ರೈಲಿನಲ್ಲಿದ್ದ ನರಗುಂದ ಶಾಸಕ ಸಿ.ಸಿ.ಪಾಟೀಲ್‌ ಪತ್ರಿಕೆಯೊಂದಿಗೆ ಮಾತನಾಡಿ, ರಾತ್ರಿ 10.30ರ ಸುಮಾರಿಗೆ ಮರದ ಕೊಂಬೆಯೊಂದು ರೈಲಿನ ಕೊನೇ ಬೋಗಿ ಮೇಲೆ ಬಿದ್ದಿದೆ. ಇದರಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು. ಈ ಘಟನೆಯಿಂದ ದಿಢೀರ್‌ ರೈಲಿನಲ್ಲಿ ಕತ್ತಲಾರವರಿಸಿ, ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು ಎಂದು ಮಾಹಿತಿ ನೀಡಿದರು.