ಬೆಂಗಳೂರು :  ತೃತೀಯ ಲಿಂಗಿಗಳಿಗೆ ಬದುಕು ಕಟ್ಟಿಕೊಳ್ಳಲು ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ನಟ ಚೇತನ್‌ ಹೇಳಿದರು.

ಒಂದೆಡೆ ಸಂಸ್ಥೆ ನಗರದ ಮಿಷನ್‌ ರಸ್ತೆಯ ಎಸ್‌ಸಿಎಂ ಹೌಸ್‌ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಐಪಿಸಿ ಸೆಕ್ಷನ್‌ 377 ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ವರದಿಯ ಕನ್ನಡಾನುವಾದ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ತೃತೀಯ ಲಿಂಗಿಗಳು ಭಿಕ್ಷಾಟನೆ ಮಾಡುವುದನ್ನು ಅಪರಾಧದ ಪರಿಧಿಗೆ ಒಳಪಡಿಸುವುದಾದರೆ, ಆ ಸಮುದಾಯದ ಬದುಕಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಶಿಕ್ಷಣ, ರಾಜಕೀಯ, ಉದ್ಯೋಗ ಮೊದಲಾದ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಬೇಕು. ಕಾನೂನಿನ ರಕ್ಷಣೆ ಜತೆಗೆ ಸಮಾಜದಲ್ಲಿ ಸಮಾನತೆ ಕಲ್ಪಿಸಬೇಕು ಎಂದರು.

ಇಂದು ದೇಶದ ಅಪಾಯಕಾರಿ ಸಂದರ್ಭದಲ್ಲಿದೆ, ಸಮಾಜದಲ್ಲಿ ಬದಲಾವಣೆ ತರಲು ಜಾತ್ಯಾತೀತತೆ, ಸಾಮಾಜಿಕ ನ್ಯಾಯ, ಸಮಾನತೆ ಪ್ರತಿಪಾದಿಸಿದ ಬುದ್ಧ, ಬಸವ, ಅಂಬೇಡ್ಕರ್‌, ಜ್ಯೋತಿಬಾಪುಲೆ, ಕುವೆಂಪು ಅವರ ಸಿದ್ಧಾಂತಗಳ ನೆಲೆಯಲ್ಲಿ ಎಲ್ಲ ಪ್ರಗತಿಪರ ಶಕ್ತಿಗಳು ಒಗ್ಗೂಡಿ ಹೋರಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ ರಾವ್‌ ಮಾತನಾಡಿ, ತೃತೀಯ ಲಿಂಗಿಗಳ ಸಮುದಾಯದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಆ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮನಸುಗಳ ಅಗತ್ಯವಿದೆ ಎಂದರು.

ಇದೇ ವೇಳೆ ಕೆಲ ತೃತೀಯ ಲಿಂಗಿಗಳು, ನಮಗೆ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಾರೆ. ದೂರು ಸ್ವೀಕರಿಸುವುದಿಲ್ಲ. ತುಚ್ಚವಾಗಿ ನಡೆಸಿಕೊಳ್ಳುತ್ತಾರೆ ಎಂದು ಭಾಸ್ಕರ್‌ ರಾವ್‌ ಎದುರು ದೂರು ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಭಾಸ್ಕರ್‌ ರಾವ್‌ ಅವರು, ಬಹುತೇಕರಿಗೆ ಲಿಂಗ ಸೂಕ್ಷ್ಮತೆ ಕುರಿತು ಅರಿವು ಮೂಡಿಸಲಾಗಿದೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಅಕೈ ಪದ್ಮಸಾಲಿ, ಬಳ್ಳಾರಿ ನಗರ ಪಾಲಿಕೆ ಸದಸ್ಯೆ ತೃತೀಯ ಲಿಂಗಿ ಪರ್ವಿನ್‌, ಅನುವಾದಕ ಕಾರ್ತಿಕ್‌, ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥಗೌಡ, ಹೈಕೋರ್ಟ್‌ ವಕೀಲರಾದ ಜೈನ್‌ ಕೊಠಾರಿ ಮತ್ತಿತರರು ಉಪಸ್ಥಿತರಿದ್ದರು.