ಬೆಂಗಳೂರು(ನ.04): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ಪ್ರಧಾನಿ ನರೇಂದ್ರ ಮೋದಿ ಮನೆ ಸ್ಥಳಾಂತರ?

ದೆಹಲಿಯ ರಾಜಪಥವನ್ನು ಮರುವಿನ್ಯಾಸಗೊಳಿಸುವ ಹೊಣೆ ಹೊತ್ತಿರುವ ಗುಜರಾತ್‌ನ ಅಹಮದಾಬಾದ್‌ ಮೂಲದ ಎಚ್‌ಸಿಪಿ ಡಿಸೈನ್‌ ಸಂಸ್ಥೆಯು ಪ್ರಧಾನಿ ನಿವಾಸವನ್ನು ರಾಷ್ಟ್ರಪತಿ ಭವನದ ಹತ್ತಿರಕ್ಕೆ ಸ್ಥಳಾಂತರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಪ್ರಸ್ತುತ ಲೋಕ ಕಲ್ಯಾಣ ಮಾರ್ಗದಲ್ಲಿನ ಪ್ರಧಾನಿ ಕಚೇರಿಯನ್ನು ರಾಷ್ಟ್ರಪತಿ ಭವನ ಇರುವ ರೈಸಿನಾ ಹಿಲ್ಸ್‌ನ ಡಾಲ್‌ಹೌಸಿ ರಸ್ತೆಗೆ ಸ್ಥಳಾಂತರಿಸುವ ಬಗ್ಗೆ ವಿಸ್ತೃತ ಚರ್ಚೆ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2. ನೌಕರರ ಕೆಲಸದ ಅವಧಿ 8 ರಿಂದ 9 ಗಂಟೆಗೆ ಏರಿಕೆ?

ದೇಶದಲ್ಲಿ ಇನ್ನುಮುಂದೆ ನೌಕರರ ಕೆಲಸದ ಅವಧಿ ದಿನಕ್ಕೆ  9ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.ಇಷ್ಟು ದಿನಗಳ ಕಾಲ ದೇಶದಲ್ಲಿ ಪ್ರತಿಯೊಂದು ವಲಯದಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರ ಅವಧಿ 8 ಗಂಟೆ ಇತ್ತು. ಆದರೆ ಇನ್ನುಮುಂದೆ 9 ಗಂಟೆಗಳಾಗುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚಿಸಿರುವ ಕರಡು ವೇತನ ಸಂಹಿತೆಯಲ್ಲಿ ಈ ರೀತಿಯ ಪ್ರಸ್ತಾವನೆಯೊಂದನ್ನು ಮಾಡಲಾಗಿದೆ. 

3. U 17 ಮಹಿಳಾ ಫುಟ್ಬಾ​ಲ್‌ ವಿಶ್ವ​ಕಪ್‌ ಲೋಗೋ ಬಿಡು​ಗ​ಡೆ

2020ರ ಫಿಫಾ ಅಂಡರ್‌ 17 ಮಹಿಳಾ ಫುಟ್ಬಾಲ್‌ ವಿಶ್ವಕಪ್‌ ಅಧಿಕೃತ ಲೋಗೋ ಶನಿವಾರ ಅನಾವರಣಗೊಂಡಿತು. ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು, ಕ್ರಿಕೆಟಿಗ ಅಜಿಂಕ್ಯ ರಹಾನೆ ಹಾಗೂ ಅಂಡರ್‌ 17 ಭಾರತ ಮಹಿಳಾ ಫುಟ್ಬಾಲ್‌ ತಂಡದ ನಾಯಕಿ ಸಿಲ್ಕಿ ದೇವಿ ಉಪಸ್ಥಿತರಿದ್ದರು. ಲೋಗೋ ಮೇಲ್ಭಾಗದ ವಿನ್ಯಾಸ ಜೀವನ, ಬೆಳವಣಿಗೆ ಪ್ರತಿನಿಧಿಸುತ್ತದೆ. ಕೆಳಭಾಗದಲ್ಲಿ ದೇಶದ ಶ್ರೀಮಂತ ಜಲ ಸಂಪನ್ಮೂಲ ಪ್ರದರ್ಶಿಸಲಾ​ಗಿದೆ. ಚೆಂಡು ಹೂವಿನಂತಿರುವ ಫುಟ್ಬಾಲ್‌, ಆಟಗಾರ್ತಿಯರ ವೃತ್ತಿಜೀವನದ ಬೆಳವಣಿಗೆ ತೋರಿಸುತ್ತದೆ. ಬಲಬದಿಯ 5 ವೃತ್ತಗಳು ಆತಿಥ್ಯ ವಹಿ​ಸುವ 5 ನಗರಗಳನ್ನು ಸೂಚಿ​ಸು​ತ್ತದೆ.

4. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸದಿದ್ರೆ ರಾಜೀನಾಮೆಗೂ ಸಿದ್ಧ: ಬಿಜೆಪಿ ಶಾಸಕ

ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5 ಮೀಸಲಾತಿ ಹೆಚ್ಚಳ ಮಾಡದಿದ್ರೆ ರಾಜೀನಾಮೆಗೂ ಸಿದ್ಧ ಎಂದು ಸುರಪುರ ಶಾಸಕ ರಾಜೂಗೌಡ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ನಗರದಲ್ಲಿ ಮಾತನಾಡಿದ ಅವರು,  ಸರ್ಕಾರ ಮೀಸಲಾತಿಯನ್ನ ನೀಡುತ್ತೆ ಅನ್ನೋ ಭರವಸೆ ಇದೆ. ಈ ಹೊರಾಟ ಮೊದಲಿನಿಂದಿಲೂ ಇದೆ. ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀಗಳಗಳಿಗೆ ನಾವು ಮಾತು ನೀಡಿದ್ದೇವೆ. ಶ್ರೀಗಳು ಸೂಚಿಸಿದರೆ ರಾಜೀನಾಮೆಗೂ ಸಿದ್ಧ ಎಂದು ತಿಳಿಸಿದ್ದಾರೆ.

5. Video: ಬಿಎಸ್‌ವೈ ಆಯ್ತು ಈಗ ಬಿಜೆಪಿ ಮಾಜಿ ಶಾಸಕನ ಆಡಿಯೋ ವೈರಲ್..!

ಬೆಂಗಳೂರು/ಹಾವೇರಿ, (ನ.4): ಬಿಎಸ್‌ ಯಡಿಯೂರಪ್ಪನವರ ಆಪರೇಷನ್ ಕಮಲದ ಆಡಿಯೋ ಲೀಕ್ ಆಗಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದನ್ನೇ ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಮಾಜಿ ಶಾಸಕನ ಆಡಿಯೋ  ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹಾಗಾದ್ರೆ ಯಾರು ಆ ಮಾಜಿ ಶಾಸಕ..? ಆಡಿಯೋನಲ್ಲೇದೆ..? ವಿಡಿಯೋನಲ್ಲಿ ನೋಡಿ.

6. ವಿಶ್ವದ ಎತ್ತರದ ಕಟ್ಟಡ ಬುರ್ಜ್ ನಿಂದ ಶಾರುಖ್‌ಗೆ ಹುಟ್ಟುಹಬ್ಬದ ಶುಭಾಶಯ

ಶನಿವಾರ 54 ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್‌ನ ಪ್ರಸಿದ್ಧ ನಟ ಶಾರುಖ್‌ ಖಾನ್‌ ಅವರಿಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎನಿಸಿಕೊಂಡಿರುವ ದುಬೈನ ಬುರ್ಜ್ ಖಲೀಫಾ ವಿಶಿಷ್ಟ ಗೌರವ ಸಲ್ಲಿಸಿದೆ. ‘ಬಾಲಿವುಡ್‌ನ ಕಿಂಗ್‌ ಆಗಿರುವ ಶಾರುಖ್‌ ಖಾನ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಕಟ್ಟಡದ ಮೇಲೆ ಬೆಳಕಿನಿಂದ ಚಿತ್ರಿಸಿದೆ. ಇದೇ ವೇಳೆ ಶಾರುಖ್‌ ಅಭಿಯನದ ‘ಓಂ ಶಾಂತಿ ಓಂ’ ಸಿನಿಮಾದ ‘ಧೂಮ್‌ ತನ ತನ’ ಹಾಡನ್ನು ಖಲೀಫಾ ಬಳಿ ಇರುವ ಸಂಗೀತ ಕಾರಂಜಿ ಪ್ರದರ್ಶನಕ್ಕೆ ಬಳಸಿಕೊಂಡಿದೆ. ಇದಕ್ಕೆ ಶಾರುಖ್‌ ಧನ್ಯವಾದ ತಿಳಿಸಿದ್ದಾರೆ.

7. ‘HDK ಸರ್ಕಾರ ಉಳಿಸಿಕೊಳ್ಳಲು ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿಸಿದ್ದರು’

ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಫೋನ್ ಟ್ಯಾಪ್ ಮಾಡೋ ಬದಲು ಜನರ ಸಮಸ್ಯೆಗಳನ್ನ ಟ್ಯಾಪ್ ಮಾಡ್ಬೇಕಿತ್ತು ಎಂದು ಸುರಪುರ ಶಾಸಕ ರಾಜುಗೌಡ ಅವರು ಹೇಳಿದ್ದಾರೆ.  ಮೈತ್ರಿ ಸರಕಾರದಲ್ಲಿ ಪ್ರಸನ್ನಾಂದಪುರಿ ಸ್ವಾಮಿಜಿ ಅವರ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ. ಸರಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ‌ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

8. ಅಚ್ಚರಿಯ ಗುಮಾನಿ: ಏರ್‌ಟೆಲ್, ವೋಡಾಫೋನ್'ಗೆ ಏನ್ಮಾಡ್ಬೇಕು ಅಂತಾ ಹೇಳಿದ ಅಂಬಾನಿ!

ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿ ಅಪಾರ ಲಾಭ ಗಳಿಸಿರುವ ರಿಲಯನ್ಸ್ ಜಿಯೋ, ತನ್ನ ಪ್ರತಿಸ್ಪರ್ಧಿ ಏರ್‌ಟೆಲ್ ಹಾಗೂ ವೋಡಾಫೋನ್ ಕಂಪನಿಗಳಿಗೆ ವ್ಯಾಪಾರ ಗುಟ್ಟೊಂದನ್ನು ಹೇಳಿ ಕೊಟ್ಟಿದೆ. ಸರ್ಕಾರಕ್ಕೆ ಅಪಾರ ಪ್ರಮಾಣದ ಬಾಕಿ ಉಳಿಸಿಕೊಂಡಿರುವ ಏರ್‌ಟೆಲ್ ಹಾಗೂ ವೋಡಾಫೋನ್, ಆರ್ಥಿಕ ಪರಿಹಾರಕ್ಕಾಗಿ ಸರ್ಕಾರದತ್ತಲೇ ದೃಷ್ಟಿ ನೆಟ್ಟಿವೆ. ಆದರೆ ಆದರೆ ಆರ್ಥಿಕ ಪರಿಹಾರ ಕೊಡುವ ಸರ್ಕಾರದ ನಿರ್ಧಾರವನ್ನು ರಿಲಯನ್ಸ್ ಜಿಯೋ ವಿರೋಧಿಸಿದೆ.

9. ಮೋದಿ ಭೇಟಿ ವೇಳೆ ಮೊಬೈಲ್‌ ಕಸಿದಿದ್ದಕ್ಕೆ ಎಸ್‌ಪಿಬಿ ಆಕ್ರೋಶ

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಸ್ಟಾರ್‌ ನಟರಿಗೆ ಮಾತ್ರ ಮೊಬೈಲ್‌ ಫೋನ್‌ ಒಯ್ಯಲು ಅವಕಾಶ ನೀಡಿದ್ದಕ್ಕೆ ಗಾಯಕ ಎಸ್‌.ಬಿ. ಬಾಲಸುಬ್ರಹ್ಮಣ್ಯಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ವೇಳೆ ಕೆಲವೊಂದು ನಟರ ಮೇಲೆ ತಾರತಮ್ಯ ತೋರಲಾಗಿತ್ತು. ಗಣ್ಯರ ಕಾರ್ಯಕ್ರಮದ ವೇಳೆ ಇಬ್ಬಗೆಯ ನೀತಿಯನ್ನು ಪ್ರದರ್ಶಿಸಿರುವುದು ದಿಗ್ಭ್ರಮೆ ಉಂಟು ಮಾಡಿದೆ ಎಂದು ಎಸ್‌.ಪಿ.ಬಿ. ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ವೈರಲ್ ಆಗಿದೆ.

10. ಮಸೋರೆಯ 'ಆಕ್ಟ್‌-1978'ನಲ್ಲಿ ಬಾಂಬ್ ಆದ ಯಜ್ಞಾ ಶೆಟ್ಟಿ!

ತುಂಬಿ ಗರ್ಭಿಣಿ, ದೇಹಕ್ಕೆ ಬಾಂಬು ಸುತ್ತಿಕೊಂಡು, ಕೈಯಲ್ಲಿ ವೈರ್ ಲೆಸ್ ಜತೆಗೆ ಪಿಸ್ತೂಲು ಹಿಡಿದು ಕೂತಿರುವ ಯಜ್ಞಾ ಶೆಟ್ಟಿ ಅವರ ಲುಕ್ಕು ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೆ ಚಿತ್ರಕ್ಕಿಟ್ಟಿರುವ ಹೆಸರು ಕೂಡ ಭಿನ್ನವಾಗಿದೆ. ಇದು ಮಂಸೋರೆ ಅವರ ಮೂರನೇ ಚಿತ್ರವಾಗಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಕಥೆಗೆ ಪೂರಕವಾಗಿ ಆಕ್ಟ್-೧೯೭೮ ಎನ್ನುವ ಹೆಸರು ಇಡಲಾಗಿದೆ.ಯಜ್ಞಾಶೆಟ್ಟಿ ಸೇರಿದಂತೆ ಬಿ.ಸುರೇಶ್ ಪ್ರಮೋದ್ ಶೆಟ್ಟಿ, ಹಿರಿಯ ಕಲಾವಿದೆ ಶ್ರುತಿ, ದತ್ತಣ್ಣ, ಅಚ್ಯುತ ಕುರ್ಮಾ, ಅವಿನಾಶ್, ಶೋಭರಾಜ್, ಸುಧಾ ಬೆಳವಾಡಿ, ಕವಲುದಾರಿ ಖ್ಯಾತಿಯ ಸಂಪತ್ ಮೈತ್ರೇಯ, ಶರಣ್ಯ ಮುಂತಾದವರು ನಟಿಸಿದ್ದಾರೆ.