ಕೋಲ್ಕತ್ತಾ(ಫೆ.10): ಬಿಜೆಪಿ ಮತ್ತು ಟಿಎಂಸಿ ನಡುವಿನ ಯುದ್ಧಭೂಮಿಯಾಗಿ ಪರಿವರ್ತನೆಯಾಗಿರುವ ಪಶ್ಚಿಮ ಬಂಗಾಳದಲ್ಲಿ ತೀವ್ರತರ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಈ ಮಧ್ಯೆ ರಾಜಕೀಯ ದ್ವೇಷಗಳು ಕೊಲೆಯಲ್ಲಿ ಅಂತ್ಯವಾಗುತ್ತಿರುವುದು ದುರ್ದೈವದ ಸಂಗತಿ  

ರಾಜಕೀಯ ತ್ವೇಷಮಯ ವಾತಾವರಣದ ತಾಣವಾಗಿರುವ ಪ.ಬಂಗಾಳದಲ್ಲಿ, ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜೀತ್ ಬಿಸ್ವಾಸ್ ಅವರನ್ನು ಕೆಲವು ಅನಾಮಿಕ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ನಾಡಿಯಾ ಜಿಲ್ಲೆಯ ಸರಸ್ವತಿ ಪೂಜಾ ಟೆಂಟ್‌ನಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಆಗುಂತಕರು ಬಿಸ್ವಾಸ್ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಕೂಡಲೇ ಬಿಸ್ವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಬಿಸ್ವಾಸ್ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಬಿಸ್ವಾಸ್ ಕೊಲೆಗೆ ಬಿಜೆಪಿಯೇ ಕಾರಣ ಎಂದು ಟಿಎಂಸಿ ಆರೋಪಿಸಿದ್ದರೆ, ಕೊಲೆಗೂ ತಮಗೂ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.