ನವದೆಹಲಿ(ನ.3): ಮಹಾರಾಷ್ಟ್ರ ರಾಜ್ಯದ ಯಾವತ್ಮಲ್ ಅರಣ್ಯ ಪ್ರದೇಶದಲ್ಲಿ ಕಳೆದ 2 ವರ್ಷದಲ್ಲಿ 13 ಮಂದಿಯನ್ನು ತಿಂದು ಹಾಕಿದ್ದ ಅವನಿ ಎಂಬ ಹೆಣ್ಣು ಹುಲಿಯನ್ನು ಕೊನೆಗೂ ಹತ್ಯೆ ಮಾಡಲಾಗಿದೆ. 

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಹುಲಿಗೆ ಕಂಡಲ್ಲಿ ಗುಂಡು ಹಾರಿಸುವಂತೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ನ್ಯಾಯಾಲಯದ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ಹಾಗೂ ಆಕ್ರೋಶಗಳು ವ್ಯಕ್ತವಾಗಿದ್ದವು.

ಕಳೆದ 3 ತಿಂಗಳಿಂದ ಅತ್ಯಾಧುನಿಕ ತಂತ್ರಜ್ಞಾನದ ಸಾಧನಗಳೊಂದಿಗೆ ಸಜ್ಜಾಗಿದ್ದ 150ಕ್ಕೂ ಹೆಚ್ಚು ಸಿಬ್ಬಂದಿ, ಆನೆಗಳು ಮತ್ತು ತಜ್ಞ ಟ್ರ್ಯಾಕರ್ ಗಳು ಮತ್ತು ಶೂಟರ್ ಗಳು ಕೊನೆಗೂ ಅವನಿಯನ್ನು ಕೊಂದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹುಲಿಯ ಜಾಡು ಹಿಡಿಯಲು ಟ್ರ್ಯಾಪ್ ಕ್ಯಾಮೆರಾ ಹಾಗೂ ಡ್ರೋನ್ ಬಳಕೆ ಮಾಡಲಾಗಿತ್ತು. 

ಅವನಿ 2012ರಲ್ಲಿ ಮೊದಲ ಬಾರಿಗೆ ಯಾವತ್ಮಲ್ ಅರಣ್ಯದಲ್ಲಿ ಕಾಣಿಸಿಕೊಂಡಿತ್ತ. ದಟ್ಟ ಅರಣ್ಯದಲ್ಲಿ ಕಾಣಿಸಿಕೊಂಡಿದ್ದ 13 ಮಂದಿ ಮೃತದೇಹಗಳು ಪತ್ತೆಯಾಗಿದ್ದವು. 13 ಮಂದಿಯ ಪೈಕಿ 5 ಸಾವಿಗೆ ಈ ಹುಲಿಯೇ ಕಾರಣ ಎಂಬುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿತ್ತು.

ಬೆಂಗಳೂರು ಮೂಲಕ ಹೋರಾಟಗಾರ ಪ್ರೇರಣಾ ಪ್ರತಿಕ್ರಿಯೆ ನೀಡಿ, ಹುಲಿಗೆ ವಿನಾಕಾರಣ ಹಂತಕಿ ಪಟ್ಟವನ್ನು ಕಟ್ಟಲಾಗಿದೆ. 13 ಮಂದಿಯನ್ನು ಈ ಹುಲಿಯೇ ತಿಂದಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಕಿಡಿಕಾರಿದರು.