ಬೆಂಗಳೂರು :  ಸಿದ್ಧ ಉಡುಪು ಸಂಗ್ರಹಿಸಿದ್ದ ಗೋದಾಮು ವೊಂದರಲ್ಲಿ ಆಕಸ್ಮಿಕವಾಗಿ ಕಬ್ಬಿಣದ ರಾರ‍ಯಕ್‌ಗಳು ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ನಗರ ಹೊರವಲಯದ ಕಾಡುಗೋಡಿ ಸಮೀಪ ನಡೆದಿದೆ.

ಶೀಗೇಹಳ್ಳಿಯಲ್ಲಿರುವ ಹೋಲ್‌ಸೇಲ್‌ ಲಾಜಿಸ್ಟಿಕ್ಸ್‌ನ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಮಹದೇವಪುರ ವ್ಯಾಪ್ತಿಯ ಕೊಳತ್ತೂರಿನ ಫಾರೂಕ್‌(22), ಒರಿಸ್ಸಾ ಮೂಲದ ಸುಭಾಷ್‌(25) ಹಾಗೂ ಜ್ಞಾನ ದರ್ಶನ್‌ (30) ಮೃತಪಟ್ಟಿದ್ದಾರೆ. ಇನ್ನುಳಿದಂತೆ ನೇಪಾಳದ ಕುಲ್‌ದೀಪ್‌, ಬಾಹುಬಲಿ, ಕೊಲ್ಕತ್ತಾದ ಜಾನ್‌ರಾಮ್‌, ಚೆನ್ನಸಂದ್ರದ ನಾರಾಯಣಸ್ವಾಮಿ ಅವರಿಗೆ ಸಣ್ಣಪುಟ್ಟಪೆಟ್ಟಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿರುವ ರಮಾಕಾಂತ್‌ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಎಲ್ಲಾ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಆ ಸಂಸ್ಥೆಯ (ಬ್ಯುಸಿನೆಸ್‌) ಮುಖ್ಯಸ್ಥ ಅಜಯ್‌ ಹಾಗೂ ಗೋದಾಮಿನ ನಿರ್ವಾಹಕ ಅಮಾನುಲ್ಲಾ ಬಂಧಿತರಾಗಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ರಾರ‍ಯಕ್‌ಗಳು ತಳಭಾಗದಲ್ಲಿ ಸೂಕ್ತವಾಗಿ ಆಧಾರವಿಲ್ಲದೆ ಕುಸಿದಿವೆ. ಆಗ ಅವುಗಳಡಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಕೂಡಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಹಾಗೂ ಅಗ್ನಿಶಾಮಕ ದಳಗಳು ಕಾರ್ಯಾಚರಣೆಗಿಳಿದವು. ಕೊನೆಗೆ ಐವರು ಕಾರ್ಮಿಕರನ್ನು ಕಾಪಾಡಿದ ರಕ್ಷಣಾ ಪಡೆಗಳು, ಬಳಿಕ ಗಾಯಾಳುಗಳನ್ನು ಆಸ್ಪತ್ರೆ ಸೇರಿಸಿವೆ.

ಅಧಿಕ ಭಾರದಿಂದ ಕುಸಿತ :  ಶೀಗೇಹಳ್ಳಿಯಲ್ಲಿ ಸ್ಥಳೀಯ ನಿವಾಸಿ ಮಂಜುನಾಥ್‌ ಅವರು ಎರಡು ಎಕರೆ ವಿಶಾಲ ಪ್ರದೇಶದಲ್ಲಿ ಗೋದಾಮು ನಿರ್ಮಿಸಿದ್ದಾರೆ. ಇದನ್ನು ಬಟ್ಟೆಮತ್ತು ಪ್ಲಾಸ್ಟಿಕ್‌ ಉತ್ಪನ್ನಗಳ ಸಗಟು ವ್ಯಾಪಾರಿ ಸಂಸ್ಥೆಯಾದ ಹೋಲಿ ಸೋಲ್‌ ಲಾಜಿಸ್ಟಿಕ್ಸ್‌ಗೆ ಎರಡು ವರ್ಷಗಳ ಹಿಂದೆ ಅವರು ಬಾಡಿಗೆ ಕೊಟ್ಟಿದ್ದಾರೆ. ಇಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳ ಸಿದ್ಧ ಉಡುಪುಗಳು, ಪ್ಲಾಸ್ಟಿಕ್‌ ಹಾಗೂ ಪಾದರಕ್ಷೆಗಳನ್ನು ಸಂಗ್ರಹಿಸಿ ಬಳಿಕ ಅವುಗಳ ನಗರದ ಪ್ರಮುಖ ಮಾಲ್‌ ಹಾಗೂ ಮಾರಾಟ ಮಳಿಗೆಗಳಿಗೆ ಆ ಲಾಜಿಸ್ಟಿಕ್ಸ್‌ ಸಂಸ್ಥೆ ಪೂರೈಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಗೋದಾಮಿನೊಳಗೆ 30 ಅಡಿ ಎತ್ತರದ ರಾರ‍ಯಕ್‌ಗಳನ್ನು ಅಳವಡಿಸಲಾಗಿದ್ದು, ಅವುಗಳಲ್ಲಿ ಉತ್ಪನ್ನಗಳನ್ನು ಇಡಲಾಗಿದೆ. ಲಾಜಿಸ್ಟಿಕ್‌ನಲ್ಲಿ ಸುಮಾರು 60 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಎರಡು ತಂಡಗಳಲ್ಲಿ ಪಾಳಿಯ ಮೇರೆಗೆ ಕೆಲಸ ಮಾಡುತ್ತಾರೆ. ಅದರಂತೆ ಗುರುವಾರ ಮಧ್ಯಾಹ್ನ 30 ಜನರು ಕೆಲಸ ಮಾಡುತ್ತಿದ್ದರು. ರಾರ‍ಯಕ್‌ಗಳನ್ನು ಅಳವಡಿಕೆ ಕ್ರಮದಲ್ಲಿನ ಲೋಪವೇ ಈ ಘಟನೆ ಕಾರಣವಾಗಿದೆ. ರಾರ‍ಯಕ್‌ಗಳ ಮೇಲೆ ಅವುಗಳ ಸಾಮರ್ಥ್ಯಕ್ಕಿಂತ ಅಧಿಕ ಭಾರದ ವಸ್ತುಗಳನ್ನು ಇಟ್ಟಿದ್ದರು. ಇದರಿಂದ ಮಧ್ಯಾಹ್ನ 12.30ರ ಸುಮಾರಿಗೆ ರಾರ‍ಯಕ್‌ಗಳು ಹಠಾತ್ತಾಗಿ ವಾಲಿಕೊಂಡಿವೆ. ಆಗ ಅವುಗಳಡಿ ಎಂಟು ಮಂದಿ ಕಾರ್ಮಿಕರು ಸಿಲುಕಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಕೂಡಲೇ ಇತರೆ ಕಾರ್ಮಿಕರು, ಸಂಕಷ್ಟದಲ್ಲಿ ಸಿಲುಕಿದ ಸಹೋದ್ಯೋಗಿಗಳ ರಕ್ಷಣೆಗೆ ಧಾವಿಸಿದ್ದಾರೆ. ಅಷ್ಟರಲ್ಲಿ ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ದಳಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದವು. ಆಗ ರಮಾಕಾಂತ್‌ನನ್ನು ಪ್ರಾಣಪಾಯದಿಂದ ಕಾಪಾಡಿದ ರಕ್ಷಣಾ ಪಡೆಗಳು, ಬಳಿಕ ಹಂತ ಹಂತವಾಗಿ ರಾರ‍ಯಕ್‌ಗಳನ್ನು ಸರಿಸಿ ಅವುಗಳಡಿ ಸಿಲುಕಿದ್ದ ಕಾರ್ಮಿಕರನ್ನು ಹೊರಗೆ ಎಳೆದರು. ರಾತ್ರಿ 9.30ವರೆಗೆ ತಮ್ಮ ಶೋಧ ಕಾರ್ಯಾಚರಣೆ ಮುಕ್ತಾಯಗೊಳಿಸಿವೆ. ಆದರೆ ಗಾಯಾಳುಗಳ ಪೈಕಿ ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನುಳಿದವರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ಬಂಧನ:  ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಉದ್ದೇಶ ಪೂರ್ವಕವಲ್ಲದ ಕೊಲೆ (ಐಪಿಸಿ 304) ಹಾಗೂ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರಿ ಪ್ರಾಣಹಾನಿಗೆ ಕಾರಣರಾದ (ಐಪಿಸಿ 304ಎ) ಆರೋಪಗಳಡಿ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಲಾಜಿಸ್ಟಿಕ್ಸ್‌ ಸಂಸ್ಥೆಯ ವ್ಯವಹಾರಿಕ ವಿಭಾಗದ ಮುಖ್ಯಸ್ಥ ಅಜಯ್‌ ಹಾಗೂ ಗೋದಾಮು ನಿರ್ವಾಹಕ ಅಮಾನುಲ್ಲಾನನ್ನು ಬಂಧಿಸಲಾಗಿದೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್‌ ಅಹದ್‌ ತಿಳಿಸಿದ್ದಾರೆ.

ಹೊಂದಾಣಿಕೆ ಕೊರತೆಗೆ ಮಗ ಬಲಿ: ಆರೋಪ

ಗೋದಾಮಿನ ರಾರ‍ಯಕ್‌ಗಳು ಕುಸಿದು ಅಪಾಯದಲ್ಲಿ ಸಿಲುಕಿದ್ದ ಮಗನ ಸಾವಿಗೆ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ಗಳ ಕಾರ್ಯಾಚರಣೆ ನಿಧಾನವಾಗಿದ್ದೇ ಕಾರಣವಾಯಿತು ಎಂದು ಮೃತ ಕಾರ್ಮಿಕ ಫಾರೂಕ್‌ ಪೋಷಕರು ಆರೋಪಿಸಿದ್ದಾರೆ. ರಾರ‍ಯಕ್‌ಗಳಡಿಯಲ್ಲಿ ಸಿಲುಕಿದ್ದ ಫಾರೂಕ್‌, ಕರೆ ಮಾಡಿ ತನ್ನನ್ನು ರಕ್ಷಿಸುವಂತೆ ಅಂಗಲಾಚಿದ. ಸಂಕಷ್ಟದಲ್ಲಿದ್ದವನ ಆರ್ತನಾದವು ಕೇಳಿಸುತ್ತಿತ್ತು. ಆದರೆ ನಮಗೆ ಮಗನನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಪ್ಪತ್ತು ಕಾರ್ಮಿಕರ ಜೀವ ಉಳಿಸಿದ ಟೀ..!

ಗೋದಾಮಿನ ದುರಂತದಲ್ಲಿ ಸಂಭವಿಸಲಿದ್ದ ಬಹುದೊಡ್ಡ ಮಟ್ಟದ ಪ್ರಾಣಹಾನಿಯನ್ನು ಉಳಿಸಿದ್ದು ‘ಚಹಾ’ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಬೆಳಗಿನ ಪಾಳಿಯದಲ್ಲಿ 30 ಮಂದಿ ಕಾರ್ಮಿಕರ ಪೈಕಿ 8 ಮಂದಿ ಹೊರತುಪಡಿಸಿ ಉಳಿದವರೆಲ್ಲ, ಮಧ್ಯಾಹ್ನ 12ರ ಸುಮಾರಿಗೆ ಚಹಾ ಸೇವನೆಗೆ ಹೊರ ಬಂದಿದ್ದರು. ಹೀಗಾಗಿ ಅವರೆಲ್ಲರು ಸಂಕಷ್ಟದಿಂದ ಅದೃಷ್ಟವಾಶಾತ್‌ ಪಾರಾಗಿದ್ದಾರೆ. ಲಾರಿಯೊಂದು ಅನ್‌ಲೋಡ್‌ಗೆ ಬಂದಿದ್ದರಿಂದ 8 ಕಾರ್ಮಿಕರು ಗೋಡೌನ್‌ ಒಳಗೆ ಇದ್ದರು.

ಸಿಕ್ಕಿದ್ದನ್ನು ದೋಚಿದ ಜನರು!

ರಾರ‍ಯಕ್‌ಗಳು ಕುಸಿದು ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದರೂ ಮಾನವೀಯತೆ ತೋರದ ಕೆಲವು ಜನರು, ಆ ಗೋದಾಮಿನಲ್ಲಿ ಲೂಟಿಗಿಳಿದರು. ತಮಗೆ ಕೈಗೆ ಸಿಕ್ಕಿದ್ದ ಉತ್ಪನ್ನವನ್ನು ದೋಚಿ ಜನರು ಪರಾರಿಯಾದರು. ಕೆಲವರು ಪೊಲೀಸರ ಕೈಗೆ ಸಿಕ್ಕಿದ್ದು ಬಿದ್ದು ಅವಮಾನಕ್ಕೊಳಗಾದರು.

30 ಅಡಿ ಎತ್ತರ ರ್ಯಾಕ್

30 ಅಡಿ ಎತ್ತರದ  ರ್ಯಾಕ್ಗಳನ್ನು ಗೋದಾಮಿನಲ್ಲಿ ಅಳವಡಿಸಲಾಗಿತ್ತು. ಆದರೆ ಅವುಗಳಿಗೆ ತಳಭಾಗದಲ್ಲಿ ನಟ್‌ಬೋಲ್ಟ್‌ ಅಳವಡಿಸಿ ಬಿಗಿಯಾಗಿ ಕೂರಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ರಾರ‍ಯಕ್‌ಗಳು ಕುಸಿದಿವೆ ಎಂಬ ಆರೋಪಗಳು ಕೇಳಿ ಬಂದಿವೆ.