Asianet Suvarna News Asianet Suvarna News

ಖಾಲಿ ಕೈ ಹುಡುಗ ಲಕ್ಷಾಧೀಶ್ವರನಾಗಿ ಬೆಳೆದಿದ್ದು ಹೇಗೆ? ರೋಚಕವಾದ ಕಥೆಯಿದು

31 ವರ್ಷದ ಹಿಂದೆ ಖಾಲಿ ಕೈಯಲ್ಲಿ ಬಂದ ಹುಡುಗನೋರ್ವ ಲಕ್ಷಾಧೀಶರನಾಗಿ ಬೆಳೆದ ಕತೆಯಿದು. ಅಂದು ತುತ್ತು ಅನ್ನಕ್ಕಾಗಿ ಹಗಲು-ರಾತ್ರಿಯೆನ್ನದೇ ದುಡಿಯುತ್ತಿದ್ದ ಆ ಬಾಲಕ ಇಂದು ನೂರಾರು ಮಂದಿಗೆ ಆಶ್ರಯ ನೀಡಿದ್ದಾನೆ. ಹಬ್ಬದ ದಿನದಂದು ನಮ್ಮ ಬಾಯಿಯನ್ನು ಸಿಹಿಯನ್ನಾಗಿಸಿದ ಹೋಳಿಗೆಯೇ ನೂರಾರು ಆಸೆಗಳನ್ನು ತುಂಬಿಕೊಂಡಿದ್ದ ಆ ಬಾಲಕನ ಬದುಕನ್ನೇ ಸಿಹಿಯನ್ನಾಗಿಸಿದೆ.

This Guy Become  Business Hero
  • Facebook
  • Twitter
  • Whatsapp

31 ವರ್ಷದ ಹಿಂದೆ ಖಾಲಿ ಕೈಯಲ್ಲಿ ಬಂದ ಹುಡುಗನೋರ್ವ ಲಕ್ಷಾಧೀಶರನಾಗಿ ಬೆಳೆದ ಕತೆಯಿದು. ಅಂದು ತುತ್ತು ಅನ್ನಕ್ಕಾಗಿ ಹಗಲು-ರಾತ್ರಿಯೆನ್ನದೇ ದುಡಿಯುತ್ತಿದ್ದ ಆ ಬಾಲಕ ಇಂದು ನೂರಾರು ಮಂದಿಗೆ ಆಶ್ರಯ ನೀಡಿದ್ದಾನೆ. ಹಬ್ಬದ ದಿನದಂದು ನಮ್ಮ ಬಾಯಿಯನ್ನು ಸಿಹಿಯನ್ನಾಗಿಸಿದ ಹೋಳಿಗೆಯೇ ನೂರಾರು ಆಸೆಗಳನ್ನು ತುಂಬಿಕೊಂಡಿದ್ದ ಆ ಬಾಲಕನ ಬದುಕನ್ನೇ ಸಿಹಿಯನ್ನಾಗಿಸಿದೆ.

ಕೆಲ ವರ್ಷಗಳ ಹಿಂದೆ ಬರೀ ಭಾಸ್ಕರ್ ಆಗಿದ್ದ ಆತ, ಇಂದು ಮನೆ ಹೋಳಿಗೆ ಭಾಸ್ಕರ್ ಎಂದೇ ಖ್ಯಾತರಾಗಿದ್ದಾರೆ.
20 ಸಾವಿರ 20 ಲಕ್ಷವಾಗಿ ಬೆಳೆದದ್ದು ಹೇಗೆ?
31  ವರ್ಷಗಳ ಹಿಂದೆ ಉದ್ಯೋಗವರಸಿ ಬೆಂಗಳೂರಿಗೆ ಬಂದಿಳಿದಿದ್ದ ಭಾಸ್ಕರ್ ನಾಲ್ಕು ವರ್ಷ ಅನೇಕ ಹೋಟೆಲ್‌ಗಳಲ್ಲಿ ಕೆಲಸ ಮಾಡಿದರು. ಆಗ ವೇಣುಗೋಪಾಲ್ ಎಂಬುವರ ಪರಿಚಯವಾಯ್ತು. ಆ ಕಾಲದಲ್ಲೇ ವೇಣುಗೋಪಾಲ್ ಅವರು, ಮನೆಯಲ್ಲೇ ಹೋಳಿಗೆ ತಯಾರಿಸಿ ಮನೆ ಮನೆಗೆ ಹೋಗಿ ಮಾರಾಟ ಮಾಡುತ್ತಿದ್ದರು. ಇದರಿಂದ ಉತ್ತೇಜಿತರಾದ ಭಾಸ್ಕರ್, ಹೋಟೆಲ್ ಕೆಲಸಕ್ಕೆ ಗುಡ್‌ಬೈ ಹೇಳಿ 1998 ರಲ್ಲಿ ವೇಣುಗೋಪಾಲ್‌ರ ಬಳಿ ಕೆಲಸಕ್ಕೆ ಸೇರಿದರು. ಅಲ್ಲಿ ಹೋಳಿಗೆ ಮಾಡುವ ಕಲೆ ಕರಗತ ಮಾಡಿಕೊಳ್ಳಲು ಒಂದೂವರೆ ವರ್ಷ  ಬೇಕಾಯ್ತು. ಕೊನೆಗೆ ತಮ್ಮ ಮಾರ್ಗದರ್ಶಕರಾದ ರಾಘವೇಂದ್ರ ಐತಾಳ್ ಸೂಚನೆ ಮೇರೆಗೆ  ತಾವೇ ಸ್ವತಃ ಹೋಳಿಗೆ ಮಾಡಿ ಮಾರಾಟ ಮಾಡಲು ನಿರ್ಧರಿಸಿದರು.

ಪುಟ್ಟ ಮನೆಯಲ್ಲೇ ಹೋಳಿಗೆ ಉದ್ಯಮ ಸಾಲಸೋಲ ಮಾಡಿ 20, 000 ಹೊಂಚಿದ ಭಾಸ್ಕರ್ ಅದನ್ನೇ ಮೂಲ ಬಂಡವಾಳವನ್ನಾಗಿ ಮಾಡಿಕೊಂಡು, ಬೆಂಗಳೂರಿನ ಮುನೇಶ್ವರ್  ಬ್ಲಾಕ್‌ನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಸಣ್ಣದಾಗಿ ಹೋಳಿಗೆ ಉದ್ಯಮ ಆರಂಭಿಸಿದರು. 5 ರಿಂದ 10 ಹೋಳಿಗೆಗಳನ್ನು  ಪ್ಯಾಕೆಟ್ ಮಾಡಿ ಅಂಗಡಿಗಳಿಗೆ, ಮನೆಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದರು. 8 ವರ್ಷ ಹೀಗೆ ಸೈಕಲ್ ಹೊಡೆದ ಭಾಸ್ಕರ್ ಅವರಿಗೆ ಏನಾದರೂ ಹೊಸತು ಮಾಡಬೇಕು  ಎಂಬ ಚಿಂತೆ ಸದಾ ಕಾಡುತ್ತಿತ್ತು. ಕೊನೆಗೆ ಸದಾ ಜನರಿಂದ ಗಿಜಿಗುಡುವ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿ ಓಮ್ನಿ  ಕಾರೊಂದನ್ನು ನಿಲ್ಲಿಸಿಕೊಂಡು ಮೊಬೈಲ್ ಕ್ಯಾಂಟೀನ್ ರೀತಿಯಲ್ಲಿ ಬಿಸಿಬಿಸಿ ಹೋಳಿಗೆ ಮಾರಲು ನಿರ್ಧರಿಸಿದರು.  ಹೋಳಿಗೆಗೇ ಮನೆ ಭಾಸ್ಕರ್ ಅವರಿಗೆ ಡಿವಿಜಿ ರಸ್ತೆಯಲ್ಲಿ ಅಂಗಡಿಯೊಂದು ಬಾಡಿಗೆಗೆ ಸಿಕ್ಕಿತು. ಅಲ್ಲೇ 2013 ರಲ್ಲಿ ‘ಮನೆ ಹೋಳಿಗೆ’ ಶಾಪ್ ಆರಂಭವಾಯಿತು. ಆರಂಭದಲ್ಲಿ 10 ರಿಂದ 12 ಮಂದಿಯನ್ನು ಕೆಲಸಕ್ಕೆ ಇಟ್ಟುಕೊಂಡು ಭಾಸ್ಕರ್ ಅಂಗಡಿಯನ್ನು ಆರಂಭಿಸಿದರು. ಅಂಗಡಿಯ ಮಾಲೀಕ ಸಂಜಯ್ ಪ್ರಭಾಕರ್ ಅವರು, ಸ್ವಚ್ಛತೆ, ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿ, ಆಧುನಿಕವಾಗಿ ಬೆಳೆಸುವಂತೆ ಸಲಹೆ ನೀಡಿದರು. ಅವರ ಮಾತನ್ನು ಚಾಚುತಪ್ಪದೇ ಫಲಿಸಿದ ಭಾಸ್ಕರ್‌ಗೆ ಕೊನೆಗೂ ಅದೃಷ್ಟ ಕೈ ಹಿಡಿಯಿತು. ಆರೇ ತಿಂಗಳಲ್ಲಿ  ನಿರೀಕ್ಷೆಗೂ ಮೀರಿ ವಹಿವಾಟು ಅವರ ಕೈ ಹಿಡಿಯಿತು. ಇದರಿಂದ ಪ್ರೇರೇಪಿತರಾದ ಭಾಸ್ಕರ್, ಅದೇ ಅಂಗಡಿ ಪಕ್ಕದಲ್ಲಿ ಕರ್ಜಿಕಾಯಿ, ಕಜ್ಜಾಯ, ಸಜ್ಜಪ್ಪ, ಚಕ್ಕುಲಿ, ನಿಪ್ಪಟ್ಟು, ಮದ್ದೂರು ವಡೆ, ಅಂಬೋಡೆ, ಖಾರ, ಉಪ್ಪಿನಕಾಯಿ, ಸಂಬಾರ್ ಪುಡಿ ಹೀಗೆ ಕಾಂಡಿಮೆಂಟ್ಸ್ ತಿನಿಸುಗಳ ಮಾರಾಟವನ್ನು ಆರಂಭಿಸಿದರು. ನೋಡನೋಡುತ್ತಿದ್ದಂತೆ  ಡಿವಿಜಿ ರಸ್ತೆಯ ಜತೆಗೆ ಜಯನಗರ, ಕತ್ರಿಗುಪ್ಪೆ ಹಾಗೂ ರಾಜರಾಜೇಶ್ವರಿನಗರದಲ್ಲೂ ಶಾಖೆಗಳನ್ನು ತೆರೆದರು. ಶೀಘ್ರದಲ್ಲೇ ಮಲ್ಲೇಶ್ವರಂನಲ್ಲೂ ಶಾಖೆ ಆರಂಭಿಸುವ ಜತೆಗೆ ಆರ್ಡರ್ ತೆಗೆದುಕೊಂಡು ಮನೆ ಮನೆಗೂ ಹೋಳಿಗೆ ತಲುಪಿಸಲು ಯೋಜನೆ ರೂಪಿಸಿದ್ದಾರೆ. ಅಂದು 20 ಸಾವಿರದಲ್ಲಿ ಆರಂಭಗೊಂಡ ಸಣ್ಣ ಉದ್ಯಮದ ಆದಾಯ ಇಂದು ತಿಂಗಳಿಗೆ 20 ಲಕ್ಷವನ್ನು ಮೀರಿದೆ. 100 ರಿಂದ 11o ಮಂದಿಗೆ ಕೆಲಸ ನೀಡಿದೆ. ಈಗ ಬೆಂಗಳೂರಿನಲ್ಲಿ ಮನೆ ಹೋಳಿಗೆಯ ಒಟ್ಟು ನಾಲ್ಕು ಶಾಪ್ ಗಳಿದ್ದು, ಇನ್ನೊಂದು ಮಳಿಗೆಯನ್ನು ಮಲ್ಲೇಶ್ವರಂನಲ್ಲಿ ಆರಂಭಿಸುವ ಯೋಜನೆ ಇದೆ.

18 ವಿವಿಧ ಬಗೆಯ ಹೋಳಿಗೆ
ಭಾಸ್ಕರ್ ಗೆಲುವಿನ ನಗೆ ಬೀರಲು ಮತ್ತೊಂದು ಕಾರಣ ಹೋಳಿಗೆಗಳಲ್ಲಿ ಹಲವು ವೆರೈಟಿ ಸೃಷ್ಟಿಸಿದ್ದು. ಮೊದಲಿಗೆ ಬೇಳೆ, ಕಾಯಿ, ಕರ್ಜೂರ, ಖೋವಾ, ಕ್ಯಾರೆಟ್, ಬಾದಾಮಿ ಹಾಗೂ ಡ್ರೈಫ್ರೂಟ್ ಹೀಗೆ 7 ಬಗೆಯ ಹೋಳಿಗೆಗಳನ್ನು ಪರಿಚಯಿಸಿದರು. ಮುಂದೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಫೈನಾಪಲ್, ಸಕ್ಕರೆ, ಸಕ್ಕರೆ-ತುಪ್ಪ, ಹಲಸು, ಮಾವು, ಖಾರಾ, ಶುಗರ್ ಲೆಸ್ ಸೇರಿದಂತೆ ಇದೀಗ 18 ಬಗೆಯ ಹೋಳಿಗೆ ಇವರ ಅಂಗಡಿಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಮಾವು, ಹಲಸು ಈ ರೀತಿಯ ಹೋಳಿಗೆಗಳನ್ನು ಋತುಗಳ ಆಧಾರದ ಮೇಲೆ ಸಿದ್ಧಗೊಳಿಸುತ್ತೇವೆ ಎನ್ನುತ್ತಾರೆ ಭಾಸ್ಕರ್. ಇವುಗಳ ಜತೆಗೆ ಮಕ್ಕಳಿಗೆ ಇಷ್ಟವಾಗುತ್ತದೆ ಎಂದು ಚಾಕೋಲೆಟ್, ಸ್ಟ್ರಾಬೆರಿ ಜತೆಗೆ ರಾಗಿ ಹೋಳಿಗೆಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎನ್ನುತ್ತಾರೆ. 

Follow Us:
Download App:
  • android
  • ios