Asianet Suvarna News Asianet Suvarna News

ಐಫೋನ್ ಎಕ್ಸ್ ಕೊಳ್ಳಬೇಕೆ? ಅದಕ್ಕೂ ಮುನ್ನ ಸ್ಮಾರ್ಟ್ ಮನಿ ಬಗ್ಗೆ ಯೋಚಿಸಿ

ಲಕ್ಷಾಂತರ ರೂಪಾಯಿ ಚೆಲ್ಲುವ ಮುನ್ನ ಸಾಕಷ್ಟು ಯೋಚಿಸಬೇಕಾಗುತ್ತದೆ. ಬಹಳ ಮುಖ್ಯವಾದ ಕೆಲ ಅಗತ್ಯಗಳನ್ನು ನೀವು ಪೂರೈಸಿದ್ದೀರಾ ಎಂಬುದನ್ನು ಯೋಚಿಸಿ. ಐಫೋನ್ ಎಕ್ಸ್'ನ ಬೆಲೆಗಿಂತ ಕಡಿಮೆ ಹಣಕ್ಕೆ ಅತ್ಯಗತ್ಯವಾಗಿರುವ ಹಾಗೂ ಒಳ್ಳೊಳ್ಳೆಯ ಹೂಡಿಕೆ ಅವಕಾಶಗಳಿರುವುದನ್ನು ತಿಳಿದುಕೊಂಡಿರಿ.

think about smart money before buying iphone x

ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಮಾರ್ಟ್'ಫೋನ್ ಸಂಸ್ಥೆಯಿಂದ ಈ ವಾರ ಹೊಸ ತಲೆಮಾರಿನ ಫೋನ್'ಗಳು ಬಿಡುಗಡೆಯಾಗಿವೆ. ಐಫೋನ್ ಎಕ್ಸ್'ನ ಟಾಪ್ ಎಂಡ್ 256 ಜಿಬಿ ಮಾಡೆಲ್'ನ ಫೋನು 1,02,000 ರೂಪಾಯಿ ಬೆಲೆಯೊಂದಿಗೆ ಮಾರುಕಟ್ಟೆಗೆ ಬಂದಿದೆ. ಇದು ಸದ್ಯಕ್ಕೆ ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್'ಫೋನ್ ಎನಿಸಿದೆ.

ಬಹಳ ಸುಂದರವಾಗಿರುವ ಹೊಸ ಫೋನು ನಿಮಗೆ ಸಂತೋಷ, ಸಮಾಧಾನ ತರುವುದರಲ್ಲಿ ಅನುಮಾನವೇ ಇಲ್ಲ. ಹೊಸ ಫೀಚರ್'ಗಳು, ಸ್ನೇಹಿತರಿಂದ ಪ್ರಶಂಸೆ ಇತ್ಯಾದಿಗಳು ನಿಮಗೆ ಬಳವಳಿಯಾಗಿ ಬರುತ್ತವೆ. ಒಳ್ಳೆಯ ಸ್ಮಾರ್ಟ್'ಫೋನ್ ಇದ್ದರೆ ಇಂದಿನ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು. ಸೆಲ್ಫೀ ಕೆಮರಾಗಳು, ಇಮೋಜಿಗಳಂತಹ ಹಲವು ಫೀಚರ್'ಗಳು ನಮ್ಮನ್ನು ಆಕರ್ಷಿಸುತ್ತವೆ. ಮೊಬೈಲ್ ಪೇಮೆಂಟ್'ಗಳು, ಕ್ಯಾಬ್ ಬುಕಿಂಗ್ ಇತ್ಯಾದಿ ಸೇವೆಗಳನ್ನು ಬೆರಳತುದಿಗೆ ತರುತ್ತವೆ. ನಮ್ಮ ಫೋನ್ ಸುತ್ತಲೇ ನಮ್ಮ ಜಗತ್ತು ಇರುತ್ತದೆ. ಇದೆಲ್ಲವೂ ಹೌದು. ಆದರೆ, ಬಂಡವಾಳ ಹೂಡಿಕೆ ದೃಷ್ಟಿಯಿಂದ ಇಷ್ಟೊಂದು ದುಬಾರಿ ಫೋನನ್ನು ನೋಡಿದಾಗ ಹೇಗಿರುತ್ತದೆ?

ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಒಂದಲ್ಲ ಒಂದು ದಿನ ಮೌಲ್ಯ ಕಳೆದುಕೊಳ್ಳುವ ಆಸ್ತಿಯಾಗಿರುತ್ತವೆ. ನೀವು ಅದನ್ನು ಖರೀದಿಸಿದ ಕ್ಷಣದಿಂದಲೇ ಅದರ ಬೆಲೆ ನಶಿಸಲು ಆರಂಭವಾಗಿಬಿಡುತ್ತದೆ. ಇನ್ನೊಂದೆಡೆ, ರಿಯಲ್ ಎಸ್ಟೇಟ್, ಮ್ಯುಚುವಲ್ ಫಂಡ್, ಚಿನ್ನ ಇತ್ಯಾದಿ ಮೌಲ್ಯವರ್ಧನೆಯ ಆಸ್ತಿಗಳ ಮೂಲಕ ನಾವು ಸಂಪತ್ತು ಹೆಚ್ಚಿಸಬಹುದು. ಮೌಲ್ಯನಷ್ಟದ ಆಸ್ತಿಗಳು ಕೆಲವೊಮ್ಮೆ ನಮಗೆ ಅಗತ್ಯವಾಗಿರಬಹುದು. ಆದರೆ, ಲಕ್ಷಾಂತರ ರೂಪಾಯಿ ಚೆಲ್ಲುವ ಮುನ್ನ ಸಾಕಷ್ಟು ಯೋಚಿಸಬೇಕಾಗುತ್ತದೆ. ಬಹಳ ಮುಖ್ಯವಾದ ಕೆಲ ಅಗತ್ಯಗಳನ್ನು ನೀವು ಪೂರೈಸಿದ್ದೀರಾ ಎಂಬುದನ್ನು ಯೋಚಿಸಿ. ಐಫೋನ್ ಎಕ್ಸ್'ನ ಬೆಲೆಗಿಂತ ಕಡಿಮೆ ಹಣಕ್ಕೆ ಅತ್ಯಗತ್ಯವಾಗಿರುವ ಹಾಗೂ ಒಳ್ಳೊಳ್ಳೆಯ ಹೂಡಿಕೆ ಅವಕಾಶಗಳಿರುವುದನ್ನು ತಿಳಿದುಕೊಂಡಿರಿ.

2 ಕೋಟಿ ರೂ ಜೀವ ವಿಮೆ:
ನಿಮ್ಮನ್ನು ನಂಬಿಕೊಂಡಿರುವ ಜನರಿದ್ದಾಗ(ಕುಟುಂಬದ ಸದಸ್ಯರು) ಅವರಿಗೆ ನೀವು ಒಳ್ಳೆಯ ಜೀವ ವಿಮೆ ಖರೀದಿಸುವುದು ನಿಮ್ಮ ಜವಾಬ್ದಾರಿ. ನೀವು ಸಂಬಳ ಪಡೆಯುವ, ಯಾವುದೇ ಧೂಮಪಾನದ ಚಟವಿಲ್ಲದ 30 ವರ್ಷ ಪ್ರಾಯದ ಪುರುಷನಾಗಿದ್ದರೆ 30 ವರ್ಷದ ಅವಧಿಗೆ 2 ಕೋಟಿ ರೂ ಇನ್ಷೂರೆನ್ಸ್ ಪಾಲಿಸಿ ಖರೀದಿಸಬಹುದಾಗಿದೆ. ಕೇವಲ 21 ಸಾವಿರ ರೂಪಾಯಿ ಪ್ರೀಮಿಯಮ್'ನಿಂದ ಇಂಥ ಪಾಲಿಸಿಗಳು ಪ್ರಾರಂಭವಾಗುತ್ತವೆ. ಅಪ್ಪ, ಅಮ್ಮ, ಸಂಗಾತಿ, ಮಕ್ಕಳು ಇರುವ ಕುಟುಂಬ ನಿಮ್ಮದಾಗಿದ್ದರೆ ಇಂಥ ಇನ್ಷೂರೆನ್ಸ್ ಪಾಲಿಸಿ ಮೊದಲ ಆದ್ಯತೆ ಆಗಿರಬೇಕು. ನಿಮ್ಮ ಪ್ರೀತಿಪಾತ್ರರಿಗೆ ಭದ್ರತೆ ಒದಗಿಸಲು, ಬಾಡಿಗೆ, ಇಎಂಐ, ಶಿಕ್ಷಣ ಮೊದಲಾದವಕ್ಕೆ ಪೂರೈಸುವಷ್ಟು ಪ್ರಮಾಣದಲ್ಲಿ ಹಣ ಒದಗಿಸುವ ಜೀವ ವಿಮೆ ಪಾಲಿಸಿ ಮಾಡಿಸುವುದನ್ನು ನೀವು ಖಚಿತಪಡಿಸಿಕೊಳ್ಳಿ.

5 ಲಕ್ಷ ಆರೋಗ್ಯ ವಿಮೆ:
ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯ ವಿಮೆ ಹೊಂದಿರಬೇಕು. ಆದರೆ, ಸಮೀಕ್ಷೆಯೊಂದರ ಪ್ರಕಾರ ದೇಶದ ಶೇ.80 ಜನರು ಆರೋಗ್ಯ ವಿಮೆಯನ್ನೇ ಹೊಂದಿಲ್ಲವಂತೆ. ಇನ್ನೂ ಅಚ್ಚರಿಯ ವಿಷಯವೆಂದರೆ ಶೇ.66ರಷ್ಟು ಶ್ರೀಮಂತರೂ ಕೂಡ ಆರೋಗ್ಯ ವಿಮೆ ಹೊಂದಿಲ್ಲದಿರುವುದು ತಿಳಿದುಬಂದಿದೆ. ಆರೋಗ್ಯ ವಿಮೆ ಎಷ್ಟು ಅಗತ್ಯ ಎಂಬ ಬಗ್ಗೆ ಜನಕ್ಕೆ ಅರಿವಿನ ಕೊರತೆ ಇರುವುದು ಇದರಿಂದ ಗೊತ್ತಾಗುತ್ತದೆ. ಆಸ್ಪತ್ರೆಗೆ ದಾಖಲಾದಾಗ ನಿಮ್ಮ ಉಳಿತಾಯದ ಹಣ ಯದ್ವಾತದ್ವಾ ಖರ್ಚಾಗಿ ಹೋಗುವುದನ್ನು ಹೆಲ್ತ್ ಇನ್ಷೂರೆನ್ಸ್ ಮೂಲಕ ತಪ್ಪಿಸಬಹುದು. ನೀವು 30 ವರ್ಷ ಪ್ರಾಯದ ವಿವಾಹಿತ ಹಾಗೂ ಒಂದು ಮಗುವಿನ ತಂದೆಯಾಗಿದ್ದರೆ 5 ಲಕ್ಷ ರೂ ಮೌಲ್ಯದ ಫ್ಯಾಮಿಲಿ ಫ್ಲೋಟರ್ ಇನ್ಷೂರೆನ್ಸ್ ಪ್ಲಾನ್ ಖರೀದಿಸಬಹುದು. ಇದರ ವಾರ್ಷಿಕ ಪ್ರೀಮಿಯಮ್'ಗಳು ಕೇವಲ 11,500 ರೂಪಾಯಿಯಿಂದ ಪ್ರಾರಂಭವಾಗುತ್ತವೆ.

ನಿಮ್ಮೊಬ್ಬರಿಗೆ ಮಾತ್ರ ಆರೋಗ್ಯ ವಿಮೆ ಮಾಡಿಸುವುದಾದಲ್ಲಿ ಪ್ರೀಮಿಯಮ್ ಬೆಲೆ ಇನ್ನೂ ಕಡಿಮೆ ಇರುತ್ತದೆ. ನೀವು ಈ ಹಿಂದೆಯೇ ಹೆಲ್ತ್ ಇನ್ಷೂರೆನ್ಸ್'ವೊಂದನ್ನು ಮಾಡಿಸಿದ್ದು, ಆರೋಗ್ಯ ಸಮಸ್ಯೆ ಕಾಡುವ ವಯಸ್ಸಿಗೆ ಸಮೀಪಿಸುತ್ತಿದ್ದಲ್ಲಿ ಸೂಕ್ತ ಟಾಪ್-ಅಪ್ ವಿಮೆಯನ್ನೂ ಖರೀದಿಸಬಹುದಾಗಿದೆ.

ಮ್ಯುಚುವಲ್ ಫಂಡ್:
ಹೂಡಿಕೆಯ ತಾಣವಾಗಿ ಮ್ಯೂಚುವಲ್ ಫಂಡ್'ಗಳು ಹೆಚ್ಚೆಚ್ಚು ಜನಪ್ರಿಯವಾಗುತ್ತಿವೆ. ಬಹುತೇಕ ಮ್ಯುಚುವಲ್ ಫಂಡ್ ಸ್ಕೀಮ್'ಗಳು ಕೇವಲ 500 ರೂಪಾಯಿ ಹೂಡಿಕೆಯಿಂದ ಪ್ರಾರಂಭವಾಗುತ್ತವೆ. ನೀವು ಮಾಸಿಕವಾಗಿ ಕಂತು ಕಟ್ಟಬಹುದು, ಅಥವಾ ಒಮ್ಮೆಗೇ ಹಣ ಹೂಡಿಕೆ ಮಾಡಬಹುದು. ನಿಮಗೆ ಹಣದ ಅಗತ್ಯವಿದ್ದಾಗೆಲ್ಲಾ ಮ್ಯುಚುವಲ್ ಫಂಡ್'ನಿಂದ ಹಣ ವಾಪಸ್ ಪಡೆದುಕೊಳ್ಳಬಹುದು. ಬೇರೆ ಆಸ್ತಿ ಖರೀದಿ, ಟ್ಯಾಕ್ಸ್ ಉಳಿತಾಯ, ಬೇರೆ ಹೂಡಿಕೆಗೆ ಹಣ ಹೊಂದಿಸಲು ಇತ್ಯಾದಿ ಯಾವುದೇ ರೀತಿಯ ಹಣ ಹೊಂದಿಕೆಯ ಗುರಿ ಈಡೇರಿಸಲು ಮ್ಯುಚುವಲ್ ಫಂಡ್ ನಿಮಗೆ ಸಹಕಾರಿಯಾಗುತ್ತದೆ. ಕಳೆದ 10 ವರ್ಷಗಳನ್ನು ಗಮನಿಸಿದರೆ ಮ್ಯುಚುಯಲ್ ಫಂಡ್'ಗಳು ವಾರ್ಷಿಕ ಶೇ. 10-15ರಷ್ಟು ರಿಟರ್ನ್'ಗಳನ್ನು ನೀಡಿವೆ. ಬೇರೆ ಸಣ್ಣ ಉಳಿತಾಯ ಯೋಜನೆಗಳ ಲಾಭಕ್ಕಿಂತಲೂ ಇದು ಹೆಚ್ಚೇ ಇದೆ. ನಿಮ್ಮಲ್ಲಿ ಹೆಚ್ಚುವರಿ ನಗದು ಹಣ ಉಳಿದುಕೊಂಡಿದ್ದರೆ ಮ್ಯುಚುವಲ್ ಫಂಡ್'ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.

ನಿಮ್ಮ ಸಾಲಗಳನ್ನು ತೀರಿಸಿ:
ಕಳೆದ ಮೂರು ವರ್ಷಗಳಲ್ಲಿ ಸಾಲದ ಮೇಲಿನ ಬಡ್ಡಿ ದರಗಳು ಕಡಿಮೆಯಾಗುತ್ತಿವೆ. ಆಗಸ್ಟ್'ನಲ್ಲಿ ಬಡ್ಡಿ ದರ ಇನ್ನಷ್ಟು ಕಡಿಮೆಯಾಗಿದೆ. ಇದಕ್ಕಿಂತ ಕಡಿಮೆ ಬಡ್ಡಿದರ ಇನ್ಮುಂದೆ ಸಾಧ್ಯವಾಗದೇ ಇರಬಹುದು. ಭವಿಷ್ಯದಲ್ಲಿ ಇಷ್ಟೇ ಬಡ್ಡಿದರ ಇರುತ್ತದೆಂದು ಹೇಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮಲ್ಲಿ ಈಗಾಗಲೇ ಗೃಹಸಾಲ, ವಾಹನ ಸಾಲ ಅಥವಾ ಅಧಿಕ ಪ್ರಮಾಣದ ಬೇರಾವುದೇ ಸಾಲ ಇದ್ದರೆ ಅದನ್ನು ಪುನರ್'ಪರಿಶೀಲಿಸುವುದು ಒಳ್ಳೆಯದು. ನಿಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಸಾಲ ತೀರಿಸಲು ಬಳಸಬಹುದು. ಇದರಿಂದ ದೀರ್ಘಾವಧಿಯಲ್ಲಿ ನಿಮಗೆ ಸಾಕಷ್ಟು ಹಣದ ಉಳಿತಾಯವಾಗುತ್ತದೆ.

ತುರ್ತು ನಿಧಿ:
ನಮ್ಮ ಜೀವನದಲ್ಲಿ ತುರ್ತು ಸಂದರ್ಭಗಳು ಯಾವಾಗ ಬೇಕಾದರೂ ವಕ್ಕರಿಸಿಕೊಳ್ಳಬಹುದು. ಕೆಲಸ ಕಳೆದುಕೊಳ್ಳಬಹುದು, ಅಪಘಾತವಾಗಬಹುದು, ಅಥವಾ ಯಾವುದಾದರೂ ಆಸ್ತಿಗೆ ಧಕ್ಕೆಯಾಗಬಹುದು. ಇಂಥ ತುರ್ತು ಸನ್ನಿವೇಶವನ್ನು ಎದುರಿಸಲು ಪ್ರತಿಯೊಬ್ಬರು ಸಜ್ಜಾಗಿರುವುದು ಅನಿವಾರ್ಯ. ಹಾಗಾದರೆ, ಎಷ್ಟು ಹಣವನ್ನು ಎಮರ್ಜನ್ಸಿ ಫಂಡ್'ಗೆಂದು ಎತ್ತಿಡಬೇಕು? ಒಂದು ತಿಂಗಳಿನ ನಿಮ್ಮ ಮಾಮೂಲಿಯ ವರಮಾನದ 3-6 ಪಟ್ಟು ಹಣವನ್ನು ತುರ್ತು ನಿಧಿಗೆ ಮೀಸಲಿಡಬೇಕು. ಅದು ನಿಮ್ಮ ಎಲ್ಲಾ ನಿಯಮಿತ ಹಾಗೂ ಅತ್ಯಗತ್ಯ ವೆಚ್ಚಗಳನ್ನು ಭರಿಸುವಂತಿರಬೇಕು. ಅಂದರೆ, ಬಾಡಿಗೆ, ಇಎಂಐ, ಮನೆ ದಿನಸಿಗಳು, ಇನ್ಷೂರೆನ್ಸ್ ಪ್ರೀಮಿಯಮ್, ಎಲೆಕ್ಟ್ರಿಕ್ ಬಿಲ್ ಇತ್ಯಾದಿ ವೆಚ್ಚಗಳನ್ನು ಸೇರಿಸಿಕೊಂಡಿರಬೇಕು. ನಿಮ್ಮಲ್ಲಿ ಅಂಥದ್ದೊಂದು ತುರ್ತು ನಿಧಿ ಇಲ್ಲವೆಂದಾದಲ್ಲಿ ಐಫೋನ್'ಗೆಂದು ತೆಗೆದಿಟ್ಟಿರುವ ನಗದು ಹಣವನ್ನು ಎಮರ್ಜೆನ್ಸಿ ಫಂಡ್'ಗೆ ಬಳಸಿಕೊಳ್ಳಿ. ಈಗಾಗಲೇ ನೀವು ಎಮರ್ಜೆನ್ಸಿ ಫಂಡ್ ಇಟ್ಟುಕೊಂಡಿದ್ದರೆ, ನಿಮ್ಮ ಇತ್ತೀಚಿನ ವರಮಾನಕ್ಕನುಗುಣವಾಗಿ ಫಂಡ್'ಗೆ ಇನ್ನಷ್ಟು ಹಣವನ್ನು ಸೇರಿಸಿದರೆ ಒಳ್ಳೆಯದು.

ಮೇಲೆ ತಿಳಿಸಿದ ಈ ಎಲ್ಲಾ ಐಡಿಯಾಗಳೂ ಐಫೋನ್ ಎಕ್ಸ್'ನ ಬೆಲೆಯ ಒಂದು ಸಣ್ಣ ಭಾಗವಷ್ಟೇ. ಈ ಐದು ಸ್ಮಾರ್ಟ್ ಮನಿಯ ಅವಶ್ಯಕತೆಗಳನ್ನು ನೀವು ಈಡೇರಿಸಿಕೊಂಡಿಲ್ಲವಾದಲ್ಲಿ ನಿಮ್ಮ ಐಫೋನ್ ಎಕ್ಸ್ ಸ್ಮಾರ್ಟ್'ಫೋನ್ ಖರೀದಿಸುವುದನ್ನು ಪೋಸ್ಟ್'ಪೋನ್ ಮಾಡಿಕೊಳ್ಳುವುದು ಉತ್ತಮ. ನಿಮ್ಮಲ್ಲಿ ಸಮರ್ಪಕವಾದ ಇನ್ಷೂರೆನ್ಸ್ ಪಾಲಿಸಿಗಳು ಹಾಗೂ ತುರ್ತುನಿಧಿಗಳು ಇದ್ದರೆ ಮಾತ್ರ ಐಫೋನ್ ಎಕ್ಸ್'ನಂತಹ ಸ್ಮಾರ್ಟ್'ಫೋನ್'ಗಳನ್ನು ಕೊಳ್ಳಲು ಮುಂದಾಗಿ.

- ಅಧಿಲ್ ಶೆಟ್ಟಿ,
ಸಿಇಒ, ಬ್ಯಾಂಕ್'ಬಜಾರ್

Follow Us:
Download App:
  • android
  • ios