Asianet Suvarna News Asianet Suvarna News

ತಾಜ್‌ಮಹಲ್'ಗೆ ಈ ಗತಿ ಬಂದಿರುವುದಕ್ಕೆ ಕಾರಣಗಳು ಇಲ್ಲಿವೆ

ತಾಜ್‌ಮಹಲ್ ತನ್ನ ಬಣ್ಣ ಕಳೆದುಕೊಳ್ಳುತ್ತಿರುವ ಬಗ್ಗೆ ಸುಪ್ರಿಂಕೋರ್ಟ್ ಪದೇ ಪದೇ ಕಳವಳ ವ್ಯಕ್ತಪಡಿಸುತ್ತಿದೆ. ತಾಜ್‌ಮಹಲ್ ಸಂರಕ್ಷಣೆ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿರುವ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ, ‘ಒಂದೋ ಕೆಡವಿ ಇಲ್ಲವಾದಲ್ಲಿ ಸಂರಕ್ಷಿಸಿ’ ಎಂದು ಹೇಳಿದೆ. ಅಷ್ಟಕ್ಕೂ ತಾಜ್‌ಮಹಲ್ ಏನಾಗಿದೆ? ಪ್ರೇಮಸ್ಮಾರಕ ‘ತನ್ನತನ’ವನ್ನು ಕಳೆದುಕೊಳ್ಳಲು ಕಾರಣ ಏನು? ಸುಪ್ರೀಂ ಏಕಿಷ್ಟು ಆತಂಕಗೊಂಡಿದೆ? ಈ ಕುರಿತ ಮಾಹಿತಿ ಇಲ್ಲಿದೆ.

The Reasons of Taj Mahal is turning Col our down
Author
Bengaluru, First Published Jul 14, 2018, 4:39 PM IST

ತಾಜ್‌ಮಹಲ್‌ನಲ್ಲಿ ಏನಾಗಿದೆ?
ವಿಶ್ವ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ತನ್ನ ಮೂಲ ಬಿಳಿ ಬಣ್ಣದಿಂದ ಹಳದಿ, ಹಸಿರು, ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಅಷ್ಟೇ ಅಲ್ಲ, ಈ ಸ್ಮಾರಕದ ಮೇಲೆ ಪುಟ್ಟ ಪುಟ್ಟ ಕಂದು ಚುಕ್ಕೆಗಳೂ ಉಂಟಾಗಿವೆ. ನೆಲ ಸಂಪೂರ್ಣ ಕಪ್ಪಾಗಿದೆ. 1990ರಿಂದಲೂ ಈ ಬಗ್ಗೆ ದೊಡ್ಡ ಚರ್ಚೆ ಆಗುತ್ತಿದೆ. ತಾಜ್‌ಮಹಲ್ ಸಂರಕ್ಷಣೆಗಾಗಿ ಸುತ್ತಲೂ ಇರುವ ಹಲವು ಕಾರ್ಖಾನೆಗಳನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ಆಗ ಸೂಚಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಯಾವುದೇ ಬದಲಾವಣೆಗಳಾಗಲಿಲ್ಲ. ದಿನೇದಿನೇ ಮಾಲಿನ್ಯ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಮಾಲಿನ್ಯ ಹೆಚ್ಚಿದಂತೆಲ್ಲಾ ಪ್ರೇಮ ಸ್ಮಾರಕ ತನ್ನ ಬಣ್ಣ ಕಳೆದುಕೊಳ್ಳುತ್ತಿದೆ. ಭಾರತವನ್ನು ವಿಶ್ವದೊಂದಿಗೆ ಗುರುತಿಸುವ ಅದ್ಭುತ ಸ್ಮಾರಕ ತನ್ನ ಬಣ್ಣ ಕಳೆದುಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತಾಜ್‌ಗೆ ಮಡ್‌ಪ್ಯಾಕ್ ಚಿಕಿತ್ಸೆ
ಬಣ್ಣಗುಂದುತ್ತಿರುವ ತಾಜ್‌ಮಹಲ್ ಸಂರಕ್ಷಣೆಗೆ ಅಲ್ಲಿನ ಸರ್ಕಾರ ಸಾಕಷು ಪ್ರಯತ್ನ ನಡೆಸಿದೆ . ಅದರಲ್ಲಿ ‘ಮಡ್ ಥೆರಪಿ’ ಕೂಡ ಒಂದು. ಅಂದರೆ ಮಾಲಿನ್ಯದಿಂದಾಗಿ ಹಳದಿ ಬಣ್ಣಕ್ಕೆ ಪರಿವರ್ತನೆಯಾಗಿರುವ ಭಾಗಗಳಲ್ಲಿ ಮಣ್ಣನ್ನು ಹಚ್ಚಿ ಒಂದು ರಾತ್ರಿ ಹಾಗೆಯೇ ಬಿಟ್ಟು ಮರುದಿನ ಅದನ್ನು ಮೃದು ನೈಲಾನ್ ಬ್ರಷ್ ಬಳಸಿ ನೀರಿನಿಂದ ತೊಳೆದು ಸ್ವಚ್ಛಗೊಳಿಸುವ ಪ್ರಕ್ರಿಯೆಯದು. ಈ ಮಣ್ಣು ಕೊಳಕನ್ನು ಹೀರಿಕೊಳ್ಳುತ್ತದೆ. 1994ರಲ್ಲಿ ಮೊದಲಬಾರಿಗೆ ಮಡ್‌ಪ್ಯಾಕ್ ಚಿಕಿತ್ಸೆ ಮಾಡಲಾಗಿತ್ತು. ಅನಂತರ 2001 ಹಾಗೂ 2008, 2014ರಲ್ಲಿಯೂ ಈ ಮಡ್‌ಥೆರಪಿ ಮಾಡಲಾಗಿದೆ. ಆದರೆ ಪದೇ ಪದೇ ಹೀಗೆ ಮಡ್‌ಥೆರಪಿ ಮಾಡುವುದರಿಂದ ತಾಜ್ ಮಹಲ್ ಮತ್ತಷ್ಟು ಹದಗೆಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಅಲ್ಲದೆ 2008ರಲ್ಲಿ ಈ ಮಡ್‌ಪ್ಯಾಕ್ ಚಿಕಿತ್ಸೆಗೆ 16 ಲಕ್ಷ ವ್ಯಯವಾಗಿತ್ತು. ಅಲ್ಲದೆ ಈ ಪ್ರಕ್ರಿಯೆ ಸಾಕಷ್ಟು ಕಾಲವೂ ಹಿಡಿದಿತ್ತು. ಇದರಿಂದ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿತ್ತು.

ತಾಜ್ ಮಹಲ್ ಪರಿಸ್ಥಿತಿ ಎಷ್ಟು ಭೀಕರವಾಗಿದೆ ?
ತಾಜ್‌ಮಹಲ್ ಇರುವ ಆಗ್ರಾ ಕೈಗಾರಿಕಾ ವಲಯಕ್ಕೆ ಸಮೀಪವಾಗಿದೆ, ಇಲ್ಲಿ ಕಳೆದ 30 ವರ್ಷಗಳಲ್ಲಿ ಮಾಲಿನ್ಯಮಟ್ಟ ತೀವ್ರವಾಗಿ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಆಗ್ರಾ ವಿಶ್ವದ ಅತ್ಯಂತ ಕಳಪೆ ವಾಯು ಹೊಂದಿರುವ ನಗರಗಳಲ್ಲಿ 8ನೇ ಸ್ಥಾನದಲ್ಲಿದೆ. ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸ್ಥಾಯಿ ಸಮಿತಿಯು 2015ರಲ್ಲಿ ಮಂಡಿಸಿದ ವರದಿಯಲ್ಲಿ ತಾಜ್ ಮಹಲ್ ಸುತ್ತಲಿನ ಮಾಲಿನ್ಯದ ಬಗ್ಗೆ ವಿವರಿಸಲಾಗಿದೆ. ಸ್ಮಾರಕಕ್ಕೆ ಅಪಾಯ ಒಡ್ಡುವಷ್ಟು ಈ ಸಮಸ್ಯೆ ಗಂಭೀರವಾಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಆಗ್ರಾದಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ, ಕೈಗಾರಿಕೆಗಳ ತಲೆ ಎತ್ತುವಿಕೆ, ತ್ಯಾಜ್ಯ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ದಶಕದಿಂದಲೂ ತಾಜ್‌ಮಹಲ್ ಬಗ್ಗೆ ಕಳವಳಗೊಂಡಿದೆ ಸುಪ್ರೀಂ
ಖ್ಯಾತ ಪರಿಸರವಾದಿ ಎಂ.ಸಿ. ಮೆಹತಾ ಅವರು ತಾಜ್ ಮಹಲ್ ಅನ್ನು ರಕ್ಷಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ 1984ರಲ್ಲಿಯೇ ಅರ್ಜಿ ಸಲ್ಲಿಸಿದ್ದರು. ಆಗ ಪರಿಸ್ಥಿತಿ ಈಗಿನಷ್ಟು ಶೋಚನೀಯವಾಗಿ ಇರಲಿಲ್ಲ. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಹಲವು ನಿರ್ದೇಶನಗಳನ್ನು ನೀಡಿತ್ತು. ತಾಜ್ ಮಹಲ್ ಮತ್ತು ಇತರ ಹಲವು ಪ್ರಮುಖ ಪುರಾತನ ಸ್ಮಾರಕಗಳಿರುವ ಆಗ್ರಾವನ್ನು ‘ಪಾರಂಪರಿಕ ನಗರ’ ಎಂದು ಘೋಷಿಸಲು ಸೂಚಿಸಿತ್ತು. ಆದರೆ ಆ ಕೆಲಸ ಆಗಲೇ ಇಲ್ಲ. ಬದಲಿಗೆ, ಪರಿಸರದ ಮೇಲೆ ದುಷ್ಪರಿಣಾಮ ಬೀರುವಂತಹ ಹಲವು ಯೋಜನೆಗಳಿಗೆ ವಿವಿಧ ಸರ್ಕಾರಗಳು ಅನುಮತಿ ನೀಡಿವೆ. ಸದ್ಯ ಸರ್ಕಾರದ ಅಲಕ್ಷ್ಯದ ಬಗ್ಗೆ ಕಿಡಿಕಾರಿರುವ ಸುಪ್ರೀಂ ಕೋರ್ಟ್ ತಾಜ್ ಮಹಲ್‌ನ ದುಃಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ವಿದೇಶಿ ಪರಿಣತರ ನೆರವು ಪಡೆಯಲು ಸುಪ್ರೀಂ ಸೂಚನೆ

ಕಾರ್ಖಾನೆಗಳು ಹಾಗೂ ಚರ್ಮ ಸಂಸ್ಕರಣಾ ಘಟಕಗಳಿಂದ ತಾಜ್‌ಮಹಲ್‌ನಲ್ಲಿ ಉಂಟಾಗುವ ಬದಲಾವಣೆ ಬಗ್ಗೆ ಪರಿಸರವಾದಿಗಳು ಕಳೆದ ಕೆಲ ವರ್ಷಗಳಿಂದಲೂ ಎಚ್ಚರಿಸುತ್ತಲೇ ಇದ್ದಾರೆ. ಆದರೆ ಇದಕ್ಕೆ ಪರಿಸರ ಸಚಿವಾಲಯ ಹಾಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂಬುದು ಅಲ್ಲಿನ ಸರ್ಕಾರದ ಮೇಲಿರುವ ಅಪವಾದ. ಹಾಗಾಗಿಯೇ ತಾಜ್ ಸಂರಕ್ಷಣೆಗೆ ವಿದೇಶಿ ಸಂಸ್ಥೆಗಳು ಮತ್ತು ಪರಿಣತರ ನೆರವು ಯಾಕೆ ಪಡೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ವಿಶ್ವ ಪರಂಪರೆ ತಾಣವಾಗಿರುವ ತಾಜ್‌ಮಹಲ್ ಅನ್ನು ಉಳಿಸಿಕೊಳ್ಳುವ ಬಗ್ಗೆ ಅಂತಾರಾಷ್ಟ್ರೀಯ ಪರಿಣತರ ನೆರವು ಪಡೆಯುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಅಭಿಪ್ರಾಯ ಇದೆ. ಹಾಗೆಯೇ ಕೇಂದ್ರ ಪರಿಸರ ಸಚಿವಾಲಯ, ಜಲಸಂಪನ್ಮೂಲ ಸಚಿವಾಲಯ, ಉತ್ತರ ಪ್ರದೇಶದ ಕೈಗಾರಿಕಾ ಇಲಾಖೆಗಳು ತಾಜ್ ಮಹಲ್ ಅನ್ನು ಗಮನದಲ್ಲಿ ಇರಿಸಿಕೊಂಡು ಯೋಜನೆಗಳನ್ನು ರೂಪಿಸಬೇಕು. ಉತ್ತರ ದೆಹಲಿಯಲ್ಲಿ ಯಮುನಾ ಬಯೊಡೈವರ್ಸಿಟಿ ಪಾರ್ಕ್ ಇದೆ. ಈ ಪ್ರದೇಶದಲ್ಲಿ ಯಮುನಾ ಸ್ವಚ್ಛವಾಗಿ ಹರಿಯುತ್ತಿದೆ. ಜೊತೆಗೆ ಈ ಪ್ರದೇಶದಲ್ಲಿ ನದಿಯಲ್ಲಿ ಮೀನುಗಳೂ ಇವೆ. ವಲಸೆ ಹಕ್ಕಿಗಳನ್ನೂ ಅಲ್ಲಿ ಕಾಣಬಹುದು. ಇದೇ ಮಾದರಿಯನ್ನು ಆಗ್ರಾದಲ್ಲಿಯೂ ಅಳವಡಿಸಿಕೊಳ್ಳಲು ಯತ್ನಿಸಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಬಣ್ಣಗೆಡಲು ಕಾರಣವೇನು?

ವಾಯು ಮಾಲಿನ್ಯ
ತ್ಯಾಜ್ಯ ಹಾಗೂ ಹಸುವಿನ ಸಗಣಿ, ಮತ್ತಿತರ ತ್ಯಾಜ್ಯಗಳನ್ನು ಸುಡುವುರಿಂದ ಉಂಟಾಗುವ ಹೊಗೆ ನೇರವಾಗಿ ಆಗ್ರಾದ ತಾಜ್ ಮಹಲ್ ಮೇಲೆ ಪರಿಣಾಮ ಬೀರುತ್ತಿದೆ. ಆಗ್ರಾದಲ್ಲಿ ಪ್ರತಿ ದಿನ 2000 ಮೆಟ್ರಿಕ್ ಟನ್ ತಾಜ್ಯವನ್ನು ಡಂಪ್ ಮಾಡಲಾಗುತ್ತಿದೆ. ಈ ತ್ಯಾಜ್ಯಗಳ ದಹಿಸುವಿಕೆ ವೇಳೆ ಬಿಡುಗಡೆಯಾಗುವ ಧೂಳು, ಕಾರ್ಬನ್ ರಾಷ್ಟ್ರೀಯ ಸ್ಮಾರಕದ ಅಳಿವಿಗೆ ಕಾರಣವಾಗುತ್ತಿದೆ. ಅಂದಹಾಗೆ ಈ ತ್ಯಾಜ್ಯವಷ್ಟೇ ಅಲ್ಲದೆ, ಕಾರ್ಖಾನೆಗಳು ಹಾಗೂ ಅಪಾಯಕಾರಿ ಬಯೋಮೆಡಿಕಲ್ ತ್ಯಾಜ್ಯಗಳನ್ನು ನೇರವಾಗಿ ಚರಂಡಿಗಳಲ್ಲಿ ಎಸೆಯಲಾಗುತ್ತಿದೆ. ಹೀಗೆ ಚರಂಡಿಯಲ್ಲಿ ಎಸೆಯಲಾದ ತ್ಯಾಜ್ಯ ನೇರವಾಗಿ ಯಮುನಾ ನದಿ ಸೇರುತ್ತದೆ. ಅಲ್ಲದೆ ಕೈಗಾರಿಕೆಗಳಿಂದಾಗಿ ಉಂಟಾಗುವ ಮಾಲಿನ್ಯದಿಂದ ಇಲ್ಲಿ ಆಗಾಗ ‘ಅನಿಲ ಮಳೆ’ ಸುರಿಯುತ್ತದೆ. ಇದು ತಾಜ್ ಮಹಲ್ ಅನ್ನು ದುರ್ಬಲಗೊಳಿಸಿದೆ. 

ನೈಸರ್ಗಿಕ ಕಾರಣಗಳು
ತಾಜ್ ಮಹಲ್ ಸುಮಾರು 360 ವರ್ಷ ಹಳೆಯದಾದ ಸ್ಮಾರಕ. ನೂರಾರು ವರ್ಷ ಹಳೆಯದಾದ ಸ್ಮಾರಕವೊಂದು ಬಣ್ಣಗೆಡುವುದು ಸಾಮಾನ್ಯ. ತಾಜ್‌ನಲ್ಲಿರುವ ಅಮೃತ ಶಿಲೆಯು ಶುದ್ಧವಾದುದಲ್ಲ. ಅವು ಕಾಲಾನಂತರದಲ್ಲಿ ರಾಸಾಯನಿಕ ಪ್ರಕ್ರಿಯೆ ಗೊಳಗಾಗುವ ಲಕ್ಷಣಗಳನ್ನೊಳಗೊಂಡಿದೆ. ಇದೂ ಸಹ ಅಮೃತಶಿಲೆಯು ಕಂದು ವರ್ಣಕ್ಕೆ ರುಗಲು ಕಾರಣ ಎನ್ನಲಾಗುತ್ತಿದೆ. ಇದರ ಫಲಿತಾಂಶವಾಗಿ ಸುಂದರ ಸ್ಮಾರಕದ ಮೇಲೆ ಅಲ್ಲಲ್ಲಿ ಕಂಡು ಬಣ್ಣದ ಕಲೆಗಳುಂಟಾಗಿವೆ. ಅಲ್ಲದೆ ಮಳೆ ಕೂಡ ತಾಜ್ ಮಹಲ್ ಬಣ್ಣ ಕಳೆದುಕೊಳ್ಳಲು ಮತ್ತೊಂದು ಕಾರಣ.  

ಕಬ್ಬಿಣ: ಅಮೃತಶಿಲೆಯ ಮೇಲ್ಛಾವಣಿ ರಿಪೇರಿಯಲ್ಲಿ ಸರ್ಕಾರ ಕಬ್ಬಿಣವನ್ನು ಬಳಕೆ  ಮಾಡಿದೆ. ಆದರೆ ನೈಸರ್ಗಿಕವಾಗಿಯೇ ಕಾಲಾನಂತರದಲ್ಲಿ ಕಬ್ಬಿಣ ತುಕ್ಕು ಹಿಡಿಯುತ್ತದೆ. 

ಪ್ರವಾಸಿಗರು
ತಾಜ್‌ಮಹಲ್ ಬಣ್ಣಗುಂದಲು ಮತ್ತೊಂದು ಕಾರಣ ಅಲ್ಲಿನ ಪ್ರವಾಸಿಗಳು. ತಾಜ್‌ಮಹಲ್‌ಗೆ ಪ್ರತಿನಿತ್ಯ ತಾಜ್‌ಮಹಲ್‌ಗೆ 50 ಸಾವಿರ ಜನ ಭೇಟಿ ನೀಡುತ್ತಾರೆ. ಇಷ್ಟೊಂದು ಅಗಾಧ ಪ್ರಮಾಣದ ಜನರು ದಿನನಿತ್ಯ ಭೇಟಿ ನೀಡುವುದರಿಂದ ಸಹಜ ವಾಗಿಯೇ ಅಮೃತಶಿಲೆಗಳು ಹಾಳಾಗುತ್ತವೆ. ನಿತ್ಯ ಪ್ರವಾಸಿಗರ ಭೇಟಿಯಿಂದ ಒಳಭಾಗ ಹೆಚ್ಚು ತೇವಗೊಳ್ಳುತ್ತಿದೆ. ಇದರಿಂದ ಗೋಡೆಗಳ ಮೇಲೆ ಕಪ್ಪುಕಲೆಗಳುಂಟಾಗುತ್ತಿವೆ. ಪ್ರವಾಸಿಗರು ತಮ್ಮ ಬೆವೆತ ಕೈಗಳಿಂದ ಸ್ಮಾರಕದ ಗೋಡೆಯನ್ನು ಸ್ಪರ್ಶಿಸುವುದರಿಂದಲೂ ಗೋಡೆ ಹಾಳಾಗುತ್ತಿದೆ. ಅಲ್ಲದೆ ಪ್ರವಾಸಿಗರು ಬರಿಗಾಲಿನಲ್ಲಿಯೇ ಓಡಾಡುತ್ತಿರುವುದೂ ಕೂಡ ಬಣ್ಣಗೆಡಲು ಕಾರಣ.

ಕೊಳಕು ಯಮುನಾ ನದಿ
ತಾಜ್‌ಮಹಲ್ ಸಮೀಪದಲ್ಲಿ ಹರಿಯುವ ಯಮುನಾ ನದಿ ನಿಜವಾದ ಅರ್ಥದಲ್ಲಿ ನದಿಯಾಗಿ ಉಳಿದಿಲ್ಲ. ಅಲ್ಲಿನ ಮಾಲಿನ್ಯದಿಂದಾಗಿ ಆಗ್ರಾದಲ್ಲಿ ಯಮುನಾ ನದಿಗೆ ನದಿಯ ಸ್ವರೂಪವೇ ಇಲ್ಲದಂತಾಗಿದೆ. ನದಿಯಲ್ಲಿ ತುಂಬಿರುವ ಕೊಳಕಿನ ಪರಿಣಾಮವಾಗಿ ಇಲ್ಲಿ ಇರುವ ಕ್ರಿಮಿ ಕೀಟಗಳ ಪ್ರಮಾಣಕ್ಕೆ ಮಿತಿಯೇ ಇಲ್ಲ. ಸೊಳ್ಳೆ ಮತ್ತು ಸೊಳ್ಳೆಯಂತಹ ಇತರ ಕೀಟಗಳು ರಾತ್ರಿಯಿಡೀ ತಾಜ್ ಮಹಲನ್ನು ಮುತ್ತುತ್ತವೆ. ಇವುಗಳ ಹಿಕ್ಕೆಯೂ ಸ್ಮಾರಕದ ಬಣ್ಣ ಮಾಸಲು ಕಾರಣವಾಗುತ್ತಿದೆ. ಯಮುನಾ ನದಿಯ ಪಾಚಿ ಒಣಗಿದಾಗ ಗಾಳಿಗೆ ಹಾರಿ ತಾಜ್ ಮಹಲ್‌ನ ಮೇಲೆ ಕೂರುವುದು ಇನ್ನೊಂದು ಸಮಸ್ಯೆಯಾಗಿದೆ.

ಪರಿಸರ ನಾಶ
ಆಗ್ರಾ ಸುತ್ತಮುತ್ತಲಿನ ಮರಗಳನ್ನು ಅಭಿವೃದಿಟಛಿಯ ನೆಪದಲ್ಲಿ ಕತ್ತರಿಸಲಾಗಿದೆ. ಆಗ್ರಾ ಅರೆ ಶುಷ್ಕ ಪ್ರದೇಶವಾಗಿದ್ದು, ಬೇಸಿಗೆಯಲ್ಲಿ ಬಿಸಿಲು 45 ಡಿಗ್ರಿ ಸೆಲ್ಸಿಯಸ್ ಮೀರುತ್ತದೆ. ಮರಗಿಡಗಳ ಅಡೆತಡೆಗಳಿಲ್ಲದ ಕಾರಣ ಉತ್ತರ ಭಾರತದಿಂದ ಬರುವ ಶಾಕಯುಕ್ತ ಗಾಳಿಯು ನೇರವಾಗಿ ಬೀಸುತ್ತದೆ. ಈ ಧೂಳುಯುಕ್ತ ಬಿಸಿಗಾಳಿಯು ತಾಜ್‌ಮಹಲ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

(ಕನ್ನಡಪ್ರಭ)

Follow Us:
Download App:
  • android
  • ios