ಹ್ಯೂಸ್ಟನ್[ಸೆ.23]: ಹೌಡಿ ಮೋದಿ ಸಮಾವೇಶ ಇಡೀ ವಿಶ್ವದ ಗಮನ ಸೆಳೆದಿದೆ. ಒಂದೆಡೆ ಇದು ಮೋದಿ ಹಾಗೂ ಟ್ರಂಪ್ ನಡುವಿನ ಸ್ನೇಹವೆಷ್ಟು ಆಳವಿದೆ ಎಂಬುವುದನ್ನು ಬಹಿರಂಗಪಡಿಸಿದರೆ, ಅತ್ತ ಮೋದಿ ಭಾಷಣವೂ ಭಾರೀ ಸದ್ದು ಮಾಡಿದೆ. ಆದರೆ ಇವೆಲ್ಲದರ ನಡುವೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ಡಾಲರ್ ಸೆಲ್ಫೀ ಒಂದು ಭಾರೀ ಸೌಂಡ್ ಮಾಡುತ್ತಿದೆ. ಪುಟ್ಟ ಹುಡುಗನೊಬ್ಬ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಟ್ರಂಪ್ ಬಳಿ ಮನವಿ ಮಾಡಿಕೊಂಡು ತೆಗೆಸಿಕೊಂಡ ಸೆಲ್ಫೀ ಎಲ್ಲರ ಮನ ಗೆದ್ದಿದೆ. ಹೀಗಿರುವಾಗ ವಿಶ್ವದ ಗಮನಸೆಳೆದ ಬಾಲಕ ಕನ್ನಡಿಗ ಎಂಬುವುದು ಮತ್ತೊಂದು ಹೆಮ್ಮೆಯ ವಿಚಾರ.

ಹೌದು ವಿಶ್ವದ ದಿಗ್ಗಜರಾದ ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ರೊಂದಿಗೆ ನಿಂತು ಬಾಲಕನೊಬ್ಬ ತೆಗೆಸಿಕೊಂಡ ಸೆಲ್ಫಿ ಶತಮಾನದ ಸೆಲ್ಪೀ ಎನ್ನುವ ಮಟ್ಟಿಗೆ ಪ್ರಾಮುಖ್ಯತೆ ಪಡೆದಿದೆ. ಸದ್ಯ ಆ ಬಾಲಕ ಯಾರು ಎಂಬುವುದು ಬಹಿರಂಗವಾಗಿದೆ. 9 ವರ್ಷದ ಆ ಅದೃಷ್ಟವಂತ ಬಾಲಕ ಕರ್ನಾಟಕದ ಶಿರಸಿ ಮೂಲದ ಪ್ರಭಾಕರ ಹೆಗಡೆ, ಮೇಧಾ ಹೆಗಡೆ ದಂಪತಿಯ ಪುತ್ರ ಸಾತ್ವಿಕ್ ಹೆಗಡೆ

ಭಾನುವಾರ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನಡೆಸಿಕೊಟ್ಟಿ ಹೈಸ್ಕೂಲ್ ಬಾಲಕ ಸಾತ್ವಿಕ್ ಬಳಿಕ ಮೋದಿ ಹಾಗೂ ಟ್ರಂಪ್ ಸಿಕ್ಕಾ ಸೆಲ್ಫಿಗೆ ವಿನಂತಿಸಿದ್ದ. ಇಬ್ಬರೂ ದಿಗ್ಗಜರು ಖುಷಿಖುಷಿಯಾಗಿಯೇ ಈತನ ಹೆಗಲ ಮೇಲೆ ಕೈ ಹಾಕಿ ಪೋಸ್ ಕೊಟ್ಟಿದ್ದು ಆ ವಿಡಿಯೋ ಹಾಗೂ ಸೆಲ್ಫಿ ಪೋಟೋ ಇದೀಗ ವೈರಲ್ ಆಗಿದೆ.

ಬಾಲಕ ಯಾರು ಪತ್ತೆ ಹಚ್ಚಿ: ಬಿಜೆಪಿ ಸಂಸದನ ಚಾಲೆಂಜ್

ಈ ಲಕ್ಕಿ ಹುಡುಗನ ಸೆಲ್ಫೀ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಟ್ವೀಟ್ ಒಂದನ್ನು ಮಾಡುತ್ತಾ 'ಆ ಸೆಲ್ಫೀಯಲ್ಲಿರುವ ಬಾಲಕನನ್ನು ಪತ್ತೆ ಹಚ್ಚಬಹುದಾ? ಸೋಶಿಯಲ್ ಮೀಡಿಯಾದಲ್ಲಿ ನಾವೆಷ್ಟು ಪರಿಚಿತರೆಂದು ತಿಳಿಯುತ್ತದೆ’ ಎಂದಿದ್ದಾರೆ. ಸದ್ಯ ಬಾಲಕ ಯಾರೆಂಬುವುದು ಪತ್ತೆಯಾಗಿದ್ದು, ಆತ ನಮ್ಮ ಕರ್ನಾಟಕದ ಕುವರ ಎಂಬುವುದು ಮತ್ತಷ್ಟು ಖುಷಿ ಕೊಡುವ ವಿಚಾರ.