ಶ್ರೀನಗರ(ಅ.26): ಸಿಆರ್‌ಪಿಎಫ್ ನೆಲೆ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ, ಕನಿಷ್ಠ ಆರು ಯೋಧರು ಗಾಯಗೊಂಡಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ, ಉಗ್ರರು ಏಕಾಏಕಿ ಗ್ರೆನೇಡ್ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.   ಘಟನೆಯಲ್ಲಿ ಆರು ಸಿಆರ್‌ಪಿಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. 370ನೇ ವಿಧಿ ರದ್ದತಿ ಬಳಿಕ ಶಾಂತವಾಗಿದ್ದ ಕಾಶ್ಮೀರದಲ್ಲಿ, ಕರ್ಫ್ಯೂ ಹಿಂಪಡೆದ ಬಳಿಕ ಉಗ್ರರು ಮತ್ತೆ ಚುರುಕುಗೊಂಡಿದ್ದಾರೆ.

ದೀಪಾವಳಿಗೂ ಮುನ್ನಾದಿನವೇ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಉಗ್ರರ ಶೋಧ ಕಾರ್ಯ ಮುಂದುವರೆದಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.