ಬೆಂಗಳೂರು (ನ. 14): ಕರ್ನಾಟಕದಲ್ಲಿ ಮಸೀದಿಯನ್ನು ಒಡೆದಾಗ ಅಲ್ಲಿ ದೇವಾಲಯವಿರುವುದು ಪತ್ತೆಯಾಗಿದೆ ಎಂಬ ಒಕ್ಕಣೆಯೊಂದಿಗೆ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಉಮಾಗೌರಿ ಹೆಸರಿನ ಟ್ವೀಟರ್ ಖಾತೆಯು ಈ ಫೋಟೋವನ್ನು ಮೊದಲು ಪೋಸ್ಟ್ ಮಾಡಿದ್ದು, ಅದರೊಂದಿಗೆ, ‘ರಸ್ತೆ ಅಗಲೀಕರಣಕ್ಕಾಗಿ ಕರ್ನಾಟಕದ ರಾಯಚೂರಿನಲ್ಲಿ ಮಸೀದಿಯನ್ನು ಕೆಡವಲಾಯಿತು. ಆಗ ಅಲ್ಲಿ ದೇವಸ್ಥಾನವಿರುವುದು ಪತ್ತೆಯಾಗಿದೆ. ಹೀಗಾಗಿ ಎಲ್ಲಾ ಮಸೀದಿಗಳನ್ನು ಕೆಡವಬೇಕಿದೆ’ ಎಂದು ಬರೆಯಲಾಗಿದೆ. ಅನಂತರ ಫೇಸ್ಬುಕ್, ವಾಟ್ಸ್‌ಆ್ಯಪ್ ಮತ್ತಿತರ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದೆ.

ಆದರೆ ನಿಜಕ್ಕೂ ರಾಯಚೂರಿನ ಮಸೀದಿ ಒಡೆಯಲಾಗಿತ್ತೇ?, ಅಲ್ಲಿ ದೇವಾಲಯ ಪತ್ತೆಯಾಗಿತ್ತೇ ಎಂದು ಪರಿಶೀಲಿಸಿದಾಗ ಇದು ಸಂಪೂರ್ಣ ಸುಳ್ಳುಸುದ್ದಿ ಎಂಬುದು ಬಯಲಾಗಿದೆ. ಹೀಗೆ ಹರಿದಾಡುತ್ತಿರುವ ಚಿತ್ರ ಕಲೆಗಾರರೊಬ್ಬರ ಡಿಜಿಟಲ್ ಕ್ರಿಯೇಶನ್. ಮೂಲ ಚಿತ್ರದ ಕೆಳಭಾಗದಲ್ಲಿ ಲೋಗೋ ಇದ್ದು ಅದರಲ್ಲಿ ‘ಚಂದ್ರ ಕಲರಿಸ್ಟ್’ ಎಂದು ಬರೆಯಲಾಗಿದೆ. ಅಲ್ಲಿಗೆ ಅದೊಂದು ಆರ್ಟಿಸ್ಟ್ ಕ್ರಿಯೇಶನ್ ಎಂಬುದು ಸ್ಪಷ್ಟ.

ಇದೇ ಫೋಟೋ 2016 ರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದೊಂದು ಡಿಜಿಟಲ್ ಕ್ರಿಯೇಶನ್ ಎಂಬುದು ಸ್ಪಷ್ಟವಾಗುತ್ತದೆ. ಅಮೆರಿಕದ ಫೋಟೋ ಸ್ಟಾಕ್
ಏಜನ್ಸಿ ‘ಶಟ್ಟರ್ ಸ್ಟಾಕ್’ ಪ್ರಕಾರ ಈ ಪೋಟೋದ ಮೂಲ ಫೋಟೋ ಚೀನಾದಲ್ಲಿರುವ ಸ್ಟೋನ್ ಬುದ್ಧ. ಇದೇ ಫೋಟೋ ತೆಗೆದುಕೊಂಡು ಚಂದ್ರಾ ಕಲರಿಸ್ಟ್ ವಿಭಿನ್ನವಾದ ಫೋಟೋವನ್ನು ಕ್ರಿಯೇಟ್ ಮಾಡಿತ್ತು. ಅದೇ
ಫೋಟೋವನ್ನು ಬಳಸಿಕೊಂಡು ರಾಯಚೂರಿನಲ್ಲಿ ಮಸೀದಿ ಒಡೆದಾಗ ದೇವಾಲಯ ಇರುವುದು ಪತ್ತೆಯಾಗಿದೆ ಎಂದು ಸುಳ್ಳುಸುದ್ದಿ ಹರಡಲಾಗಿದೆ. 

-ವೈರಲ್ ಚೆಕ್