ನವದೆಹಲಿ :  ಕಾವೇರಿ ಮತ್ತದರ ಉಪನದಿಗಳು ತಮಿಳುನಾಡಲ್ಲೇ ಹೆಚ್ಚು ಮಲಿನಗೊಂಡಿದ್ದು ಅದಕ್ಕೆ ಕರ್ನಾಟಕವನ್ನು ಹೊಣೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವ ಕರ್ನಾಟಕವು ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಲು ಮನವಿ ಮಾಡಿದೆ.

ರಾಜ್ಯದ ಪರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಈ ಪ್ರಮಾಣ ಪತ್ರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು, ತಮಿಳುನಾಡಿನ ತರ್ಕದಲ್ಲಿ ಯಾವುದೇ ಹುರುಳಿಲ್ಲ, ಹಾಗೆಯೇ ಜಂಟಿ ಮಾಲಿನ್ಯ ನಿಯಂತ್ರಣ ಸಮಿತಿಯ ವರದಿಯಲ್ಲಿಯೂ ವ್ಯತಿರಿಕ್ತ ಮತ್ತು ಸಂಶಯಾತ್ಮಕ ಅಂಶಗಳನ್ನು ಒಳಗೊಂಡಿದೆ ಎಂದು ವಾದಿಸಿದೆ.

ಕರ್ನಾಟಕವು ಕಾವೇರಿ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳಿಂದ ಮಲಿನ ನೀರನ್ನು ತನಗೆ ಬಿಡುತ್ತಿದೆ. ಇದರಿಂದ ಭಾರಿ ಹಾನಿಯಾಗಿದ್ದು, ಕರ್ನಾಟಕ ಶುದ್ಧ ನೀರನ್ನು ನೀಡುವಂತೆ ಸೂಚಿಸಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಪರಿಶೀಲಿಸಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನೇತೃತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಒಳಗೊಂಡ ಜಂಟಿ ಸಮಿತಿಯೊಂದನ್ನು ರಚಿಸಿ ತಮಿಳುನಾಡಿನ ದೂರನ್ನು ಪರಿಶೀಲಿಸುವಂತೆ ಸೂಚಿಸಿತ್ತು. 

ಈ ಹಿನ್ನೆಲೆಯಲ್ಲಿ 2017ರ ಸೆಪ್ಟೆಂಬರ್‌ನಿಂದ 2018ರ ಮೇವರೆಗೆ ಕಾವೇರಿ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳನ್ನು ಪರಿಶೀಲಿಸಿದ ಜಂಟಿ ಸಮಿತಿಯು ಜುಲೈಯಲ್ಲಿ ಸುಪ್ರೀಂ ಕೋರ್ಟ್‌ಗೆ ನೀಡಿದ್ದ ವರದಿಯಲ್ಲಿ ದಕ್ಷಿಣ ಪಿನಾಕಿನಿ ಸಂಪೂರ್ಣವಾಗಿ ಮಲಿನಗೊಂಡಿದೆ. ಆದರೆ ಕಾವೇರಿ ಮತ್ತು ಅರ್ಕಾವತಿಗಳು ಅಂಶಿಕವಾಗಿ ಮಲಿನಗೊಳ್ಳುತ್ತಿವೆ ಎಂದು ಹೇಳಿತ್ತು. ಅಷ್ಟೇ ಅಲ್ಲದೇ ತಮಿಳುನಾಡಿಗೆ ಶುದ್ಧ ನೀರು ನೀಡುವ ಬಾಧ್ಯತೆ ಕರ್ನಾಟಕದ ಮೇಲಿದೆ ಎಂದು ಹೇಳಿತ್ತು. ಈ ವರದಿಗೆ ಸೋಮವಾರ ಕರ್ನಾಟಕ ತನ್ನ ಪ್ರತಿಕ್ರಿಯೆಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿದೆ.

ಬೆಂಗಳೂರಿನ ಕೆಳಭಾಗದಲ್ಲಿರುವ ಕನಕಪುರದಲ್ಲಿ ಕಾವೇರಿ ನದಿಗೆ ಅರ್ಕಾವತಿ ಸೇರುತ್ತದೆ. ನಮೂನೆ ಸಂಗ್ರಹಕ್ಕೆ ಆಯ್ದುಕೊಂಡಿರುವ ಅಜ್ಜಿಬೋರೆಯು ಕನಕಪುರದ ಕೆಳಭಾಗದಲ್ಲಿದೆ. ಅಷ್ಟರಲ್ಲಿ ಅರ್ಕಾವತಿಯ ತ್ಯಾಜ್ಯ, ಮಲಿನ ಕಾವೇರಿಯನ್ನು ಸೇರಿರುತ್ತದೆ. ಆದರೂ ನಮೂನೆ ಸಂಗ್ರಹ ಮತ್ತು ಅದರಲ್ಲಿನ ಮಲಿನತೆಯ ಪ್ರಮಾಣವನ್ನು ಪರಿಗಣಿಸಿದಾಗ ಕರ್ನಾಟಕವು ಸ್ವಲ್ಪ ಪ್ರಮಾಣದಲ್ಲಿ ಎಡವಿದೆ. ಅದರೆ ಯಾವುದೇ ಹಾನಿಯನ್ನು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದೆ.

ನೀರಿನ ಗುಣಮಟ್ಟದ ಪುನಶ್ಚೇತನಕ್ಕಾಗಿನ ನದಿ ಭಾಗಗಳು ಎಂಬ ವರದಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿತ್ತು. ಈ ವರದಿಯಲ್ಲಿ ಈ ವರದಿಯಲ್ಲಿ ತಮಿಳುನಾಡಿನ ಮೆಟ್ಟೂರಿನಿಂದ ಮೈಲದುತರೈ(ಸಮುದ್ರಕ್ಕೆ ತೀರ ಹತ್ತಿರದ ಭಾಗ)ವು ಅತಿ ಮಲಿನ ಭಾಗ ಎಂದು ಪರಿಗಣಿಸಲ್ಪಟ್ಟಿದೆ. ಅಂದರೆ ಮಾಲಿನ್ಯ ನಿಯಂತ್ರಿಸಲು ತಮಿಳುನಾಡೇ ವಿಫಲವಾಗಿದೆ. ಜೊತೆಗೆ ಮೆಟ್ಟೂರು ಮತ್ತು ಮೈಲಾಡುತುರೈ ಭಾಗದಲ್ಲಿಯೇ ನದಿ ಭಾರಿ ಮಲಿನಗೊಂಡಿದೆ. ದಕ್ಷಿಣ ಪಿನಾಕಿನಿಗೆ ಸಂಬಂಧಿಸಿದಂತೆಯೂ ಕರ್ನಾಟಕದಿಂದ ಯಾವುದೇ ತೊಂದರೆ ತಮಿಳುನಾಡಿಗೆ ಆಗಿಲ್ಲ ಎಂದು ಕರ್ನಾಟಕ ಸಮರ್ಥಿಸಿಕೊಂಡಿದೆ.

ಕೇಂದ್ರಕ್ಕೂ ನೊಟೀಸ್‌ ಕೊಡಿ:

ಅಮೃತ್‌ ಯೋಜನೆ, ಮೆಗಾಸಿಟಿ ರಿವಾಲ್ವಿಂಗ್‌ ಫಂಡ್‌  ಸ್ಕೀಮ್ ಅಡಿ ಒಟ್ಟು 515 ಎಂಎಲ್ಡಿ ಸಾಮರ್ಥ್ಯದ 9 ಕೊಳಚೆ ನಿರ್ವಹಣಾ ಘಟಕ (ಎಸ್ಟಿಪಿ) ಗಳನ್ನು 2020ರೊಳಗೆ ಸ್ಥಾಪಿಸಲು ಕರ್ನಾಟಕ ಮುಂದಾಗಿದೆ. 110 ಗ್ರಾಮಗಳಲ್ಲಿ ಒಟ್ಟು 129 ಎಂಎಲ್ಡಿ ಸಾಮರ್ಥ್ಯದ 14 ಎಸ್ಟಿಪಿ ಸ್ಥಾಪಿಸುವ ಪ್ರಸ್ತಾವನೆ ಇದೆ. ಇದರಿಂದಾಗಿ ಪ್ರಸಕ್ತ ಇರುವ 1050 ಎಂಎಲ್ಡಿ ಕೊಳಚೆ ನಿರ್ವಹಣಾ ಸಾಮರ್ಥ್ಯವು 2020ರೊಳಗೆ 1575 ಎಂಎಲ್ಡಿ ಮತ್ತು 2022ರ ಹೊತ್ತಿಗೆ 1704 ಎಂಎಲ್ಡಿಗೆ ತಲುಪಲಿದೆ. ಆದರೆ ಮಹಾನಗರಗಳ ಮಾಲಿನ್ಯ ನಿರ್ವಹಣೆಯ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಧ್ಯೆ ಹಂಚಿಕೆಯಾಗಿದೆ. ಈ ಎಲ್ಲ ಯೋಜನೆಗಳು ಜಾರಿಗೆ ಬರಬೇಕಾದರೆ ಕೇಂದ್ರ ಸರ್ಕಾರ ನಿರಂತರವಾಗಿ ಅನುದಾನ ನೀಡಬೇಕು. ಆದ್ದರಿಂದ ಪ್ರಕರಣದಲ್ಲಿ ಕೇಂದ್ರಕ್ಕೂ ನೊಟೀಸ್‌ ನೀಡಬೇಕು ಎಂದು ಕರ್ನಾಟಕ ಸುಪ್ರೀಂ ಕೋರ್ಟ್‌ ಅನ್ನು ಕೋರಿದೆ.

ತಮಿಳ್ನಾಡಿಗೆ 2 ವಾರ ಸಮಯ:  ಅಂತಾರಾಜ್ಯ ಗಡಿಯಲ್ಲಿ ಹರಿಯುವ ನೀರಿನ ಗುಣಮಟ್ಟವನ್ನು ನಿಭಾಯಿಸುವ ಬಗ್ಗೆ ಭಾರತದಲ್ಲಿ ಯಾವುದೇ ಲಿಖಿತ ಕಾನೂನುಗಳಿಲ್ಲ. ತಮಿಳುನಾಡಿನ ಈ ಅರ್ಜಿ ಕಿರಿಕಿರಿ ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಕರ್ನಾಟಕ ಹೇಳಿದೆ. ನ್ಯಾ

ಎಲ್‌.ಎ.ಬೊಬ್ಡೆ ಮತ್ತು ನ್ಯಾ.  ನಾಗೇಶ್ವರ್‌ ರಾವ್‌ ಅವರನ್ನು ಒಳಗೊಂಡಿದ್ದ ನ್ಯಾಯಪೀಠದ ಮುಂದೆ ರಾಜ್ಯದ ಪರ ವಕೀಲ ವಿ.ಎನ್‌. ರಘುಪತಿ ಪ್ರಮಾಣ ಪತ್ರ ಸಲ್ಲಿಸಿದರು. ಕರ್ನಾಟಕದ ಪ್ರಮಾಣಪತ್ರಕ್ಕೆ ತಮಿಳುನಾಡಿಗೆ ಪ್ರತಿಕ್ರಿಯೆ ಸಲ್ಲಿಸಲು ಸುಪ್ರೀಂ ಕೋರ್ಟ್‌ 2 ವಾರ ಸಮಯವನ್ನು ನೀಡಿದೆ.