ನವದೆಹಲಿ/ಬೆರ್ನ್‌ (ಡಿ.03): ಹಣಕಾಸು ವಂಚನೆ ಆರೋಪ ಎದುರಿಸುತ್ತಿರುವ ಬೆಂಗಳೂರು ಮತ್ತು ಚೆನ್ನೈ ಮೂಲದ 2 ಕಂಪನಿಗಳು ಹಾಗೂ ಮೂವರು ವ್ಯಕ್ತಿಗಳ ಕುರಿತ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳಲು, ಸ್ವಿಜರ್ಲೆಂಡ್‌ ಸರ್ಕಾರ ಸಮ್ಮತಿಸಿದೆ.

ಭಾರತದಲ್ಲಿ ಈ ಎರಡೂ ಕಂಪನಿಗಳ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಕುರಿತಿ ಮಾಹಿತಿಯನ್ನು ಭಾರತೀಯ ಅಧಿಕಾರಿಗಳು ಕೋರಿದ್ದರು. ಇದಕ್ಕೆ ಸ್ವಿಜರ್ಲೆಂಡ್‌ನ ತೆರಿಗೆ ಅಧಿಕಾರಿಗಳು ಸಮ್ಮತಿಸಿದ್ದಾರೆ. ಇದು ಸ್ವಿಜರ್ಲೆಂಡ್‌ನಲ್ಲಿ ಕಪ್ಪುಹಣ ಇಡುವವರಿಗೆ ದೊಡ್ಡ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗಿದೆ.

ಬೆಂಗಳೂರು ಮೂಲದ ಜಿಯೋಡೆಸಿಕ್‌ ಮತ್ತು ಚೆನ್ನೈ ಮೂಲದ ಆಧಿ ಎಂಟರ್‌ಪ್ರೈಸಸ್‌ ಪ್ರೈವೇಟ್‌ ಲಿ. ಕಂಪನಿಗಳ ಮಾಹಿತಿ ಹಾಗೂ ಜಿಯೋಡೆಸಿಕ್‌ ಕಂಪನಿಯ ಮೂವರು ನಿರ್ದೇಶಕರಾದ ಪಂಕಜ್‌ಕುಮಾರ್‌ ಓಂಕಾರ್‌ ಶ್ರೀವಾತ್ಸವ, ಪ್ರಶಾಂತ್‌ ಶರದ್‌ ಮುಲೇಕರ್‌ ಮತ್ತು ಕಿರಣ್‌ ಕುಲಕರ್ಣಿ ಕುರಿತ ಆಡಳಿತಾತ್ಮಕ ಮಾಹಿತಿ ಬಹಿರಂಗಕ್ಕೆ ಸ್ವಿಜರ್ಲೆಂಡ್‌ನ ತೆರಿಗೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.