ನವದೆಹಲಿ : ಪುಲ್ವಾಮಾದಲ್ಲಿ ಭೀಕರ ಉಗ್ರರ ದಾಳಿ ನಡೆದು 44 ಯೋಧರು ಹುತಾತ್ಮರಾದ ಬೆನ್ನಲ್ಲೇ ಭದ್ರತಾ ಪಡೆಗಳು ಮೊದಲ ಪ್ರತೀಕಾರ ತೀರಿಸಿಕೊಂಡಿವೆ. 

ಭಾರತೀಯ ಸೇನೆ ನಾಲ್ವರು ಜೈಶ್ ಎ ಮೊಹಮ್ಮದ್ ಉಗ್ರರನ್ನು ಸದೆ ಬಡಿದಿದ್ದು, ಇದೆ ವೇಳೆ ಉಗ್ರರಿಗೆ  ಭಾರತೀಯ ಸೇನೆ ಖಡಕ್ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ.  ಯಾರು ಗನ್ ಎತ್ತಿ ಭಾರತದ ವಿರುದ್ಧ ನಿಲ್ಲುತ್ತಾರೋ ಅಂಥವರು ಶರಣಾಗಿ ಇಲ್ಲವಾದಲ್ಲಿ ನಿಮ್ಮ ಅಂತ್ಯ ಖಚಿತ ಎಂದು ಎಚ್ಚರಿಸಿದೆ. 

ಯಾರು ಕಾಶ್ಮೀರ ಗಡಿಯನ್ನು ದಾಟುತ್ತಾರೋ ಅವರೆಂದಿಗೂ ಮರಳಿ ಜೀವಂತ ಹೋಗಲು ಸಾಧ್ಯವಿಲ್ಲ. ಭಾರತೀಯ ಸೇನೆ ಈ ನಿಟ್ಟಿನಲ್ಲಿ ಸದಾ ಎಚ್ಚರಿಕೆಯಿಂದ ಮುನ್ನಡೆಯುತ್ತಿದೆ.  ಉಗ್ರರ ದಮನಕ್ಕೆ ಬೇಕಾದ ಎಲ್ಲಾ ರೀತಿಯ ಯೋಜನೆಗಳು ಸೇನೆಯಿಂದ ರೂಪುಗೊಂಡಿವೆ ಎಂದು ಹೇಳಿದೆ. 

ಉಗ್ರ ದಾಳಿ ಪ್ರಕರಣ ಸಂಬಂಧ ಪುಲ್ವಾಮಾ ದಾಳಿ ಹಿಂದಿನ ‘ಮಾಸ್ಟರ್ ಮೈಂಡ್’, ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಕಮಾಂಡರ್ ಅಬ್ದುಲ್ ರಶೀದ್ ಗಾಜಿ ಅಲಿಯಾಸ್ ಕಮ್ರಾನ್ ಸೇರಿ ಮೂವರು ಭಯೋತ್ಪಾದಕರನ್ನು 16 ತಾಸಿನ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದೆ. ಅಲ್ಲದೇ ಇದೇ ಬೆನ್ನಲ್ಲೇ  ಭಾರತದ ಮೇಲೆ ಕಣ್ಣಿಟ್ಟಿರುವ ಇತರೆ ಉಗ್ರಗಾಮಿಗಳಿಗೆ ಎಚ್ಚರಿಸಿದೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರ ಆದಿಲ್ ಮಹಮ್ಮದ್ ದಾರ್  ಫೆ. 14 ರಂದು ಭಾರೀ ಪ್ರಮಾಣದಲ್ಲಿ ಸ್ಫೋಟಕ ತುಂಬಿದ ಕಾರನ್ನು ಸೇನಾ ಪಡೆ ಯೋಧರು ತೆರಳುತ್ತಿದ್ದ ಬಸ್‌ಗೆ ಡಿಕ್ಕಿಯಾಗಿಸಿ 44 ಯೋಧರು ಹುತಾತ್ಮರಾಗಿದ್ದರು.  ಈ ಘಟನೆಯ ಬಳಿಕ ಭಾರತೀಯ ಸೇನೆ ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿ ತಕ್ಕ ಉತ್ತರ ನೀಡಿದೆ.