ನವದೆಹಲಿ(ಆ.01): ಉನ್ನಾವ್ ಅತ್ಯಾಚಾರಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಉತ್ತರ ಪ್ರದೇಶ ಸಿಬಿಐ ಕೋರ್ಟ್’ನಿಂದ ದೆಹಲಿ ಸಿಬಿಐ ಕೋರ್ಟ್’ಗೆ ಸುಪ್ರೀಂಕೋರ್ಟ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಪ್ರಕರಣದ ಸಂತ್ರಸ್ಥೆ ಮತ್ತು ಆಕೆಯ ಕುಟುಂಬಸ್ಥರಿಗೆ ಜೀವ ಬೆದರಿಕೆ ಮತ್ತು ಇತ್ತಿಚೀಗೆ ನಡೆದ ಅಪಘಾತವನ್ನು ಪರಿಗಣಿಸಿ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಪ್ರಕರಣದ ವರ್ಗಾವಣೆಗೆ ಆದೇಶ ನೀಡಿದೆ.

ಈ ಪೈಕಿ ಸಂತ್ರಸ್ಥೆಯ ಮೇಲಿನ ಅಪಘಾತದ ಬಳಿಕ ದಾಖಲಾಗಿದ್ದ 9 ಕೊಲೆ ಪ್ರಕರಣ, ಅತ್ಯಾಚಾರ ಪ್ರಕರಣದ ಸಾಕ್ಷ್ಯನಾಶ ಪ್ರಕರಣ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಪ್ರಕರಣ ಕೂಡ ಸೇರಿದೆ ಎನ್ನಲಾಗಿದೆ. ಅಲ್ಲದೆ ಎಲ್ಲಾ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ನ್ಯಾಯಪೀಠ ಅಂತಿಮ ಗುಡುವು ಕೂಡ ನೀಡಿದ್ದು, 45 ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ಆದೇಶಿಸಿದೆ.

ಇದೇ ವೇಳೆ ಉನ್ನಾವ್ ಅತ್ಯಾಚಾರ ಸಂತ್ರಸ್ಥ ಯುವತಿಗೆ ಪರಿಹಾರ ನೀಡುವಂತೆಯೂ ಸುಪ್ರೀಂಕೋರ್ಟ್ ಆದೇಶಿಸಿದ್ದು, ಸಂತ್ರಸ್ಥ ಕುಟುಂಬದ ಪ್ರತೀಯೊಬ್ಬರಿಗೂ ರಕ್ಷಣೆ ಒದಗಿಸಬೇಕು ಎಂದು ಹೇಳಿದೆ. ಸಂತ್ರಸ್ಥೆಯ ಪರ ವಕೀಲರಿಗೂ ರಕ್ಷಣೆ ನೀಡುವಂತೆ ಮತ್ತು ಮಧ್ಯಂತರ ಪರಿಹಾರವಾಗಿ 25 ಲಕ್ಷ ರೂ. ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಹೇಳಿದೆ.