ನವದೆಹಲಿ[ಸೆ.18]: ತಮಿಳುನಾಡಿನ ಅವಳಿ ಕೊಲೆ ದೋಷಿಯೊಬ್ಬನಿಗೆ ಶುಕ್ರವಾರ ನಿಗದಿಯಾಗಿದ್ದ ಮರಣ ದಂಡನೆ ಶಿಕ್ಷೆ ಜಾರಿಗೆ ಸುಪ್ರೀಂಕೋರ್ಟ್‌ ತಡೆ ನೀಡಿದೆ. ವಿಚಾರಣಾ ನ್ಯಾಯಾಲಯದಲ್ಲಿ ದೋಷಿ ಪರವಾಗಿ ನಾನಾ ಕಾರಣಗಳಿಂದ 7 ಜನ ವಕೀಲರು ವಾದ ಮಂಡಿಸಿದ್ದರು. ಹೀಗಾಗಿ ಆ ಕುರಿತ ದಾಖಲೆ ಪತ್ರಗಳನ್ನು ತಾನು ನೋಡಬೇಕು ಎಂದು ದೋಷಿ ಪರ ವಕೀಲರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೋರ್ಟ್‌, ಶಿಕ್ಷೆ ಜಾರಿಗೆ ತಡೆ ನೀಡಿದೆ. ಅಲ್ಲದೆ ಕಡೆಯ ಬಾರಿಗೆ ಇಂಥ ಅವಕಾಶ ನೀಡಲಾಗುತ್ತಿದೆ.

ಅ.16ರಂದು ಮತ್ತೆ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ನ್ಯಾಯಪೀಠ ದೋಷಿ ಪರ ವಕೀಲರಿಗೆ ಸೂಚಿಸಿತು. ಮನೋಹರ್‌ ಮತ್ತು ಮೋಹನಕೃಷ್ಣ ಎಂಬಿಬ್ಬರು 2010ರಲ್ಲಿ ಕೊಯಮತ್ತೂರಿನಲ್ಲಿ 10 ವರ್ಷದ ಬಾಲಕಿ ಮತ್ತು ಆಕೆಯ ಸೋದರನನ್ನು ಅಪಹರಿಸಿತ್ತು.

ಳಿಕ ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಬಾಲಕನಿಗೆ ಹಾಲಿನಲ್ಲಿ ವಿಷ ಹಾಕಿ ಕುಡಿಸಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ವೇಳೆಯ ಪೊಲೀಸರ ಜೊತೆ ನಡೆದ ಎನ್‌ಕೌಂಟರ್‌ನಲ್ಲಿ ಮೋಹನಕೃಷ್ಣ ಸಾವನ್ನಪ್ಪಿದ್ದ. ಮನೋಹರ್‌ಗೆ ವಿಚಾರಣಾ ಕೋರ್ಟ್‌ ಗಲ್ಲು ಶಿಕ್ಷೆ ನೀಡಿತ್ತು. ಬಳಿಕ ಮೇಲಿನ ಹಂತದ ನ್ಯಾಯಾಲಯಗಳೂ ಕೂಡಾ ಶಿಕ್ಷೆಯನ್ನು ಕಾಯಂಗೊಳಿಸಿದ್ದವು.