Asianet Suvarna News Asianet Suvarna News

ರಾಜ್ಯ ಸರ್ಕಾರಕ್ಕೆ 2 ವಾರಗಳ ಸಮಯ ನೀಡಿದ ಸುಪ್ರೀಂ

ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ವಾಗ್ದಾಳಿ ನಡೆಸಿದ್ದು, ಅಲ್ಲದೇ 2 ವಾರಗಳ ಸಮಯಾವಕಾಶವನ್ನು ನೀಡಿದೆ. ಪ್ರೊ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖಾ ಪ್ರಕ್ರಿಯೆಯು ಎಷ್ಟುದಿನದೊಳಗೆ ಮುಗಿಯಬಹುದು ಎಂದು ತಿಳಿಸಲು ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಸಮಯ ನೀಡಿದೆ. 

Supreme Court Slams Karnataka Govt About Kalburgi Murder Case
Author
Bengaluru, First Published Nov 27, 2018, 7:17 AM IST

ನವದೆಹಲಿ :  ಪ್ರೊ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖಾ ಪ್ರಕ್ರಿಯೆಯು ಎಷ್ಟುದಿನದೊಳಗೆ ಮುಗಿಯಬಹುದು ಎಂದು ತಿಳಿಸಲು ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಸಮಯ ನೀಡಿದೆ. ಒಂದು ವೇಳೆ ರಾಜ್ಯ ಸರ್ಕಾರವು ಸಮರ್ಪಕ ಉತ್ತರವನ್ನು ನೀಡದಿದ್ದರೆ ಸೂಕ್ತ ಆದೇಶ ಪ್ರಕಟಿಸುವುದಾಗಿಯೂ ನ್ಯಾಯಾಲಯ ಎಚ್ಚರಿಸಿದೆ. ಅಷ್ಟೇ ಅಲ್ಲದೆ ನರೇಂದ್ರ ದಾಬೋಲ್ಕರ್‌ ಮತ್ತು ಗೋವಿಂದ ಪಾನ್ಸರೆ ಅವರ ಹತ್ಯೆಯ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಾಂಬೆ ಹೈಕೋರ್ಟ್‌ಗೆ ಪ್ರಕರಣವನ್ನು ವರ್ಗಾಯಿಸುವ ಇಂಗಿತವನ್ನೂ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದೆ.

ಸೋಮವಾರವು ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ರೊಹಿಂಟನ್‌ ನಾರಿಮನ್‌ ಮತ್ತು ನ್ಯಾ.ನವೀನ್‌ ಸಿನ್ಹಾ ಅವರಿದ್ದ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಏನನ್ನೂ ಮಾಡಿಲ್ಲ. ನೀವು ಈವರೆಗೆ ಏನು ಮಾಡಿದ್ದೀರಿ ಹೇಳಿ? ನೀವು ಏನೂ ಮಾಡಿಲ್ಲ. ನೀವು ಮೂರ್ಖರನ್ನಾಗಿಸುತ್ತಿದ್ದೀರಿ. ನಿಮಗೆ ತನಿಖೆ ಮುಗಿಸಲು ಎಷ್ಟುಸಮಯ ಬೇಕು? ನೀವು ತನಿಖೆ ಮಾಡುತ್ತಿದ್ದೀರಿ. ಒಳ್ಳೆಯದು, ತನಿಖೆ ಮಾಡುತ್ತಲೇ ಇರಿ. ನಾವು ಆದೇಶ ಹೊರಡಿಸಬೇಕೇ? ಬೇರೆಡೆಗೆ ಪ್ರಕರಣವನ್ನು ವರ್ಗಾಯಿಸಬೇಕೇ? ಪ್ರಕರಣದ ತನಿಖೆಯ ಮೇಲ್ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ಗೆ ನೀಡಬೇಕೇ ಎಂದು ನ್ಯಾ. ರೊಹಿಂಟನ್‌ ನಾರಿಮನ್‌ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ರಾಜ್ಯ ಸರ್ಕಾರವು ಎರಡು ವಾರದೊಳಗೆ ತನಿಖೆಯ ಪ್ರಗತಿ ವರದಿಯನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

2015ರ ಆಗಸ್ಟ್‌ 30ರ ಬೆಳಗ್ಗೆ ಧಾರವಾಡದ ತಮ್ಮ ನಿವಾಸದಲ್ಲಿ ಕಲಬುರ್ಗಿ ಗುಂಡೇಟಿಗೆ ಬಲಿಯಾಗಿದ್ದರು. ಅವರ ಹತ್ಯೆಯ ಪ್ರಕರಣದ ತನಿಖೆಯನ್ನು ರಾಜ್ಯದ ಸಿಐಡಿ ನಡೆಸುತ್ತಿದೆ. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರದ ಹಿನ್ನೆಲೆಯಲ್ಲಿ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಸುಪ್ರೀಂ ಕೋರ್ಟ್‌ ಅಥವಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಉಸ್ತುವಾರಿಯಲ್ಲಿ ವಿಶೇಷ ತನಿಖಾ ದಳ (ಸಿಟ್‌) ರಚಿಸಿ ಕಲಬುರ್ಗಿ ಅವರ ಹಂತಕರನ್ನು ಪತ್ತೆ ಹಚ್ಚಬೇಕು ಎಂದು ಸುಪ್ರಿಂ ಕೋರ್ಟ್‌ ಮೊರೆ ಹೋಗಿದ್ದರು. ಈ ಪ್ರಕರಣವು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವ್ಯಾಪ್ತಿಯಲ್ಲಿ ಬರುವುದಿಲ್ಲ ಆದ್ದರಿಂದ ಎನ್‌ಐಎಯು ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಕಳೆದ ಮಾಚ್‌ರ್‍ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

Follow Us:
Download App:
  • android
  • ios