ಅತ್ಯಾಚಾರ ಪ್ರಕರಣ: ವಿಚಾರಣೆ ರದ್ದು ಕೋರಿದ್ದ ನಿತ್ಯಾನಂದ ಅರ್ಜಿ ವಜಾ

Supreme Court dismisses discharge petition plea of Nityananda
Highlights

 ಭಕ್ತೆಯ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ರದ್ದು ಪಡಿಸುವಂತೆ ಕೋರಿ ಬಿಡದಿಯ ನಿತ್ಯಾನಂದ ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.  

ನವದೆಹಲಿ (ಜೂ. 02):  ಭಕ್ತೆಯ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ರದ್ದು ಪಡಿಸುವಂತೆ ಕೋರಿ ಬಿಡದಿಯ ನಿತ್ಯಾನಂದ ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. 

ಈ ಮೂಲಕ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಜಿಲ್ಲಾ 3 ನೇ ಹೆಚ್ಚುವರಿ ನ್ಯಾಯಾಲಯ ಈ ಹಿಂದೆ ನಿತ್ಯಾನಂದ ಸೇರಿ ಹಲವರ ವಿರುದ್ಧ ಆರೋಪ ನಿಗದಿಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ನಿತ್ಯಾನಂದ ಸ್ವಾಮಿ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮೇ 16 ರಂದು ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ನಿತ್ಯಾನಂದ ಸ್ವಾಮಿ ಸುಪ್ರೀಂಕೋರ್ಟ್ ಕದ ಬಡಿದಿದ್ದರು. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ನ ರಜಾ ಕಾಲದ ಪೀಠದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಹಾಗೂ ನ್ಯಾ. ಮೋಹನ ಶಾಂತನಗೌಡರ್  ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಪ್ರಕರಣಕ್ಕೆ ಸಂಬಂಧಿಸಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿತು.

ನಿತ್ಯಾನಂದ ಪರ ವಾದಿಸಿದ ಹಿರಿಯ ವಕೀಲರಾದ ಗೋಪಾಲ ಸುಬ್ರಹ್ಮಣ್ಯಂ ಹಾಗೂ ರಂಜಿತ್ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿ ೪೮ ಸಾಕ್ಷ್ಯಗಳ ವಿಚಾರಣೆ ನಡೆಸಲಾಗಿದೆ. ಆದರೆ, ಯಾವುದೇ ಸಾಕ್ಷ್ಯಗಳು ಆರೋಪ ಸಾಬೀತುಪಡಿಸಿಲ್ಲ. ಅತ್ಯಾಚಾರಗೈಯಲಾಗಿದೆ ಎಂದು ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಲಾಗಿಲ್ಲ. ಪತ್ರಿಕೆಯೊಂದರಲ್ಲಿ ಬಂದ ಸುದ್ದಿಯ ಆಧಾರದಲ್ಲಿ ಇಬ್ಬರು ವ್ಯಕ್ತಿಗಳು ಅತ್ಯಾಚಾರದ ಆರೋಪ
ಹೊರಿಸಿದ್ದಾರೆ ಎಂದು ವಾದಿಸಿದರು. ಬಿಡದಿಯಲ್ಲಿರುವ ಆಶ್ರಮದಲ್ಲಿ ನಡೆದಿದೆ ಎನ್ನಲಾದ ಈ ಅತ್ಯಾಚಾರ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿ ಆರೋಪಿಯಾಗಿದ್ದು, 2010  ರ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. 

loader