ಬುಧವಾರ ಬೆಂಗಳೂರಿನಲ್ಲಿ ನಡೆದ ಚೆಕ್‌ ವಿತರಣಾ ಕಾರ್ಯಕ್ರಮದಲ್ಲಿ ಮೌನರಾಗ ಧಾರವಾಹಿ ತಂಡ ಹಾಗೂ ಕ್ರೈ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸ್ಟಾರ್‌ ಸುವರ್ಣದ ಬ್ಯುಸಿನೆಸ್‌ ಹೆಡ್‌ ಸಾಯಿ ಪ್ರಸಾದ್‌ ಆರು ಲಕ್ಷದ ಚೆಕ್‌ ಅನ್ನು ಕ್ರೈ ಸಂಸ್ಥೆಗೆ ಹಸ್ತಾಂತರಿಸಿದರು. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಮೌನರಾಗ ಧಾರಾವಾಹಿಯೂ ಹೆಣ್ಣು ಮಕ್ಕಳ ದೌರ್ಜನ್ಯ ವಿರೋಧಿ ವಿಷಯವನ್ನಾಧರಿಸಿದ ಧಾರಾವಾಹಿ. ಹೀಗಾಗಿ ಕ್ರೈ ಸಂಸ್ಥೆಯೊಡನೆ ಸ್ಟಾರ್‌ ಸುವರ್ಣ ವಾಹಿನಿ ಕೈ ಜೋಡಿಸಿದೆ.

ನಿರ್ದೇಶಕ ತಿಲಕ್‌ ಮೌನರಾಗ ಧಾರಾವಾಹಿಯ ನಿರ್ದೇಶಕ. ಈ ಧಾರಾವಾಹಿಯಲ್ಲಿ ಸ್ನೇಹಾ ಈಶ್ವರ್‌ ಮತ್ತು ಚಿತ್ರಶ್ರೀ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ರವಿ. ಆರ್‌.ಗರಣಿ ಧಾರಾವಾಹಿ ನಿರ್ಮಿಸಿದ್ದಾರೆ. ಇದು ಗರ್ಭದಲ್ಲಿರುವ ಮಗು ಹೆಣ್ಣು ಎಂದು ತಿಳಿದು ಅದನ್ನು ಕೊಲ್ಲಲು ಮುಂದಾಗುವ ಕ್ರೂರ ಮನಸ್ಥಿತಿ ವಿರುದ್ಧದ ಹೋರಾಟದ ಕಥೆಯಾಗಿದೆ.

ಸಂದರ್ಭದಲ್ಲಿ ಹಾಜರಿದ್ದ ನಟಿ ಸ್ನೇಹಾ ಈಶ್ವರ್‌, ‘ಹೆಣ್ಣಿನಿಂದಲೇ ಈ ಜಗತ್ತು, ಆಕೆಯಿಂದಲೇ ನಾವೆಲ್ಲ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ಜನತೆಯ ಆಲೋಚನೆ ಬದಲಾದರೆ ಇಂಥಹ ಕೆಟ್ಟಆಚರಣೆಗಳು ತೆಗೆದುಹಾಕಲು ಸಾಧ್ಯ. ಕ್ರೈ ಸಂಸ್ಥೆ ಇನ್ನಷ್ಟುಉತ್ತಮ ಕಾರ್ಯ ಮಾಡಲಿ’ ಎಂದರು.

1979ರಲ್ಲಿ ಆರಂಭವಾದ ಕ್ರೈ ಸಂಸ್ಥೆ ಸುಮಾರು 20 ರಾಜ್ಯಗಳಲ್ಲಿ 250 ಸಂಸ್ಥೆಗಳ ಜೊತೆಗೆ ಹೆಣ್ಣಿಗಾಗುವ ಅನ್ಯಾಯದ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಪ್ರಸ್ತುತ ಜಾಲತಾಣಗಳಲ್ಲಿ #letherlive (ಬದುಕಲು ಬಿಡಿ) ಎಂದು ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮವನ್ನು ಕ್ರೈ ಪ್ರಾರಂಭಿಸಿದೆ.