ವಾಷಿಂಗ್ಟನ್(ಆ.12): ಇಡೀ ಸೌರಮಂಡಲದ ಉಗಮಕ್ಕೆ ಕಾರಣವಾಗಿರುವ ಸೂರ್ಯನನ್ನೇ ಅಧ್ಯಯನ ಮಾಡಲು ಉತ್ಸುಕವಾಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನಾಸಾ, ಸೂರ್ಯನ ಒಡಲು ಪ್ರವೇಶಿಸಬಲ್ಲ ನೌಕೆ ಸೋಲಾರ್ ಪಾರ್ಕರ್ ಪ್ರೋಬ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ನಿನ್ನೆಯ ತಾಂತ್ರಿಕ ದೋಷದಿಂದ ಮುಂದೂಡಲಾಗಿದ್ದ ಉಡಾವಣೆಯನ್ನು ನಾಸಾ ಇಂದು ಯಶಶ್ವಿಯಾಗಿ ಪೂರೈಸಿದೆ. ಸೌರಮಂಡಲ ಮತ್ತು ಭೂಮಿ ಸೇರಿದಂತೆ ಇತರೆ ಗ್ರಹಗಳ ಉಗಮಕ್ಕೆ ಕಾರಣವಾಗಿರುವ ಮತ್ತು ಅಸಂಖ್ಯಾತ ರಹಸ್ಯಗಳನ್ನು ತನ್ನ ಉರಿಯೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಸೌರಮಂಡಲದ ಕೇಂದ್ರ ಬಿಂದು ಸೂರ್ಯನ ನಿಕಟ ಅಧ್ಯಯನಕ್ಕೆ ಮಾನವ ಇತಿಹಾಸದಲ್ಲೇ ಮೊದಲ ಸಾಹಸವೊಂದಕ್ಕೆ ನಾಸಾ ಕೈ ಹಾಕಿದೆ.

ನಾಸಾ ನಿರ್ಮಿಸಿರುವ ಅತ್ಯಾಧುನಿಕ ಮತ್ತು ಪ್ರಬಲ ಪಾರ್ಕರ್ ಸೋಲಾರ್ ಪ್ರೋಬ್ ಎಂಬ ಗಗನನೌಕೆ, ಕೇಪ್‌ ಕೆನವೆರಲ್ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಕಂಡಿತು. ಈ ನೌಕೆ ಸೂರ್ಯನ ಅಗಾಧ ಶಾಖವನ್ನು ತಡೆದುಕೊಂಡು ಸೂರ್ಯನ ಅತ್ಯಂತ ಸಮೀಪಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.

ಪಾರ್ಕರ್ ಸೋಲಾರ್ ಪ್ರೋಬ್ ಅನ್ನು ಹೊತ್ತ ಡೆಲ್ಟಾ-4 ಬೃಹತ್‌ ರಾಕೆಟ್‌ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ್ದು, ಈ ಐತಿಹಾಸಿಕ ವಿದ್ಯಮಾನಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. 


ಪಾರ್ಕರ್ ಸೋಲಾರ್ ಪ್ರೋಬ್ ವೈಶಿಷ್ಟ್ಯತೆಗಳು:

ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯು ನಾಸಾ ನಿರ್ಮಿತ ಅತ್ಯಂತ ಪ್ರಬಲ ನೌಕೆಯಾಗಿದ್ದು, ಸೂರ್ಯ ನಾಭಿಯಿಂದ 61 ಲಕ್ಷ ಕಿ.ಮೀ.ನಷ್ಟು ಸಮೀಪ ಸಾಗಲಿದೆ. ಈ ನೌಕೆ ಸೂರ್ಯನ ಬಳಿ ತಲುಪಿದ ಬಳಿಕ 7 ವರ್ಷದಲ್ಲಿ 24 ಬಾರಿ ಅದರ ವಾತಾವರಣವನ್ನು ಸುತ್ತಲಿದೆ. ಈ ಸೌರ ಅಧ್ಯಯನ ಯೋಜನೆಗೆ ಅಮೆರಿಕ ಸರ್ಕಾರ ಅಂದಾಜು 10 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ.  

ಸೂರ್ಯನ ಸಮೀಪಕ್ಕೆ ಹೋಗುತ್ತಿದ್ದಂತೇ ನೌಕೆ  ಗಂಟೆಗೆ 7 ಲಕ್ಷ ಕಿ.ಮೀ ವೇಗದಲ್ಲಿ ಚಲಿಸಲಿದೆ. ಆ ಮೂಲಕ ಇಡೀ ವಿಶ್ವದಲ್ಲಿಯೇ ಅತ್ಯಂತ ವೇಗದ ಮಾನವ ನಿರ್ಮಿತ ನೌಕೆ ಎಂಬ ಕೀರ್ತಿಗೂ ಪಾರ್ಕರ್ ಸೋಲಾರ್ ಪ್ರೋಬ್ ಪಾತ್ರವಾಗಲಿದೆ. 

ಈ ನೌಕೆಯ ಮತ್ತೊಂದು ವಿಶೇಷವೆಂದರೆ ಅಗಾಧ ತಾಪಮಾನ ತಡೆಯು ಸಾಮರ್ಥ್ಯ. ಏಕೆಂದರೆ ಸೂರ್ಯನ ಅಗಾಧ ಪ್ರಮಾಣದ ತಾಪಮಾನ ತಡೆದುಕೊಂಡು ಪಾರ್ಕರ್ ಅಧ್ಯಯನ ನಡೆಸಲಿದೆ. ಸೂರ್ಯನ ಹೊರವಲಯದಲ್ಲಿ (ಕೊರೋನಾ) 1 ಕೋಟಿ ಡಿಗ್ರಿ ಸೆಲ್ಸಿಯಸ್ ವರೆಗೆ ಶಾಖವಿದ್ದು, ಈ ಅಗಾಧ ಉಷ್ಣತೆ ತಡೆಯುವಂತೆ ನಾಸಾ ಈ ನೌಕೆಯನ್ನು ಅಭಿವೃದ್ಧಿಪಡಿಸಿದೆ.


ಅಧ್ಯಯನದ ಪ್ರಮುಖ ಗುರಿ: 

ಸೂರ್ಯನಿಂದ ಆಗಾಗ ಭೂಮಿಯತ್ತ ಧಾವಿಸುವ ಉಷ್ಣಗಾಳಿ ಕುರಿತು ಅಧ್ಯಯನ ನಡೆಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಆ ಮೂಲಕ ಸಂಭಾವ್ಯ  ಸೂರ್ಯ ರಶ್ಮಿ ಮತ್ತು ಸೂರ್ಯ ಉಷ್ಣಗಾಳಿ ವಿಕೋಪವನ್ನು ತಡೆಯುವುದು ಈ ಅಧ್ಯಯನದಿಂದ ಸಾಧ್ಯವಾಗುತ್ತದೆ.