ಕಲ್ಲಿಕೋಟೆ[ಅ.13]:  ಕೇರಳದ ಕಲ್ಲಿಕೋಟೆಯ ಕುಟುಂಬವೊಂದರಲ್ಲಿ ಕಳೆದ 2 ದಶಕಗಳಲ್ಲಿ ಒಂದೇ ರೀತಿಯ ನಿಗೂಢ ಸಾವುಗಳು ಸಂಭವಿಸಿದ್ದ ಪ್ರಕರಣವನ್ನು ಸೈನೈಡ್‌ ಕಿಲ್ಲರ್‌ ಒಬ್ಬಳನ್ನು ಬಂಧಿಸುವ ಮೂಲಕ ಪೊಲೀಸರು ಭೇದಿಸಿದ್ದರು.

ಜೋಲಿ ಅಮ್ಮ ಜೋಸೆಫ್‌ (47) ಎಂಬ ಈ ಹಂತಕಿ ತನ್ನದೇ 6 ಬಂಧುಗಳನ್ನು ಕೊಂದಿದ್ದು ಸೈನೈಡ್‌ ವಿಷವನ್ನು ಗೌಪ್ಯವಾಗಿ ವಿವಿಧ ತಿನಿಸು ಹಾಗೂ ಪಾನೀಯಗಳಲ್ಲಿ ಬೆರೆಸುವ ಮೂಲಕ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ಜಾಲಿ ತನ್ನ ಅತ್ತೆ ಅಣ್ಣಮ್ಮ ಥಾಮಸ್‌ಳನ್ನು 2002ರಲ್ಲಿ ಮಟನ್‌ ಸೂಪ್‌ನಲ್ಲಿ ಸೈನೈಡ್‌ ಬೆರೆಸಿ ಕೊಂದಿದ್ದಳು. ನಂತರ ಜಾಲಿ ತನ್ನ ಮಾವ ಟಾಮ್‌ ಥಾಮಸ್‌ನನ್ನು ಇದೇ ರೀತಿ ಆಹಾರದಲ್ಲಿ ಸೈನೈಡ್‌ ಬೆರೆಸಿ 2008ರಲ್ಲಿ ಸಾಯಿಸಿದಳು. 2011ರಲ್ಲಿ ತನ್ನ ಗಂಡ ರಾಯ್‌ ಥಾಮಸ್‌ನನ್ನು ಸೈನೈಡನ್ನು ಆಹಾರದಲ್ಲಿ ಸೇರಿಸಿ ಕೊಲೆ ಮಾಡಿದಳು.

2014ರಲ್ಲಿ ತನ್ನ ಮೇಲೆ ಕೊಲೆ ಗುಮಾನಿ ವ್ಯಕ್ತಪಡಿಸಿದ್ದ ಚಿಕ್ಕಪ್ಪ ಮ್ಯಾಥ್ಯೂನನ್ನು ಕಾಫಿಯಲ್ಲಿ ಸೈನೈಡ್‌ ಬೆರೆಸಿ ಕೊಂದು ಹಾಕಿದಳು. ಅದೇ ವರ್ಷ ಅಲ್ಪೈನ್‌ ಶಾಜು ಎಂಬ ಹಸುಳೆಯನ್ನು ಆಹಾರದಲ್ಲಿ ಸೈನೈಡ್‌ ಬೆರೆಸಿ ಹಾಗೂ ಶಾಜುವಿನ ತಾಯಿ ಅಲ್ಪೈನ್‌ಗೆ ನೀರಿನಲ್ಲಿ ಸೈನೈಡ್‌ ಬೆರೆಸಿ ಕೊಂದು ಹಾಕಿದ್ದಳು ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.