ನವದೆಹಲಿ (ಜ. 12):  ರೈಲ್ವೆಯಲ್ಲಿ ಚಾಲಕರು, ಕೂಲಿ ಆಳು, ಕಾವಲುಗಾರ ಹಾಗೂ ಗ್ಯಾಂಗ್‌ಮನ್‌ (ರೈಲ್ವೆ ಹಳಿಗಳ ಮೇಲ್ವಿಚಾರಕರು) ಹುದ್ದೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣ ಇಲ್ಲದೇ ಇರುವುದರಿಂದ ಈ ಹುದ್ದೆಗಳಿಗೆ ಪುರುಷರನ್ನು ಮಾತ್ರ ನೇಮಿಸುವಂತೆ ರೈಲ್ವೆ ಇಲಾಖೆ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯಕ್ಕೆ ಪತ್ರ ಬರೆದಿದೆ.

ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ಮಹಿಳೆಯರಿಗೆ ಸುರಕ್ಷಿತವಲ್ಲ ಹಾಗೂ ಕೆಲವು ವಲಯಗಳಲ್ಲಿ ಉದ್ಯೋಗ ನಿರ್ವಹಿಸುವುದು ಮಹಿಳೆಯರಿಗೆ ತೀರಾ ಕಷ್ಟಕರ ಎಂಬ ದೂರುಗಳು ಮಹಿಳಾ ಸಿಬ್ಬಂದಿ ನಿಯೋಗದಿಂದಲೇ ಬಂದಿದ್ದವು. ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ.

ಈ ಹಿನ್ನೆಲೆಯಲ್ಲಿ ಕೆಲವು ಉದ್ಯೋಗಗಳಲ್ಲಿ ಮಹಿಳೆಯರನ್ನು ಹೊರಗಿಡುವಂತೆ ಸಿಬ್ಬಂದಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆಯ ಸದಸ್ಯ ಎಸ್‌.ಎನ್‌. ಅಗರ್ವಾಲ್‌ ಹೇಳಿದ್ದಾರೆ. ರೈಲ್ವೆಯಲ್ಲಿರುವ 13 ಲಕ್ಷ ಉದ್ಯೋಗಿಗಳಲ್ಲಿ ಶೇ.2 ರಿಂದ 3ರಷ್ಟುಮಾತ್ರ ಮಹಿಳೆಯರಾಗಿದ್ದು, ಅವರಲ್ಲಿ ಬಹುತೇಕ ಮಂದಿ ಕಚೇರಿಯಲ್ಲೇ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ.

ಲೋಕೋ ಪೈಲಟರ್‌ಗಳೆಂದು ಕರೆಸಿಕೊಳ್ಳುವ ರೈಲು ಚಾಲಕರು (ಒಂದು ರೈಲಿನಲ್ಲಿ ಸಾಮಾನ್ಯವಾಗಿ ಇಬ್ಬರು) ಹಾಗೂ ಗಾರ್ಡ್‌ಗಳು ಸಿಗ್ನಲ್‌ ನೀಡುವ ಉದ್ದೇಶದಿಂದ ರೈಲಿನ ಕೊನೆಯ ಬೋಗಿಯಲ್ಲಿ ಇರಬೇಕಾಗುತ್ತದೆ. ಕೂಲಿಗಳು ರೈಲ್ವೆ ನಿಲ್ದಾಣಗಳಲ್ಲಿ ಕೆಲವೊಮ್ಮೆ ಅತಿ ಭಾರದ ಸರಕುಗಳನ್ನು ಹೊರಬೇಕಾಗುತ್ತದೆ. ಗ್ಯಾಂಗ್‌ಮನ್‌ಗಳು ಪ್ರತಿನಿತ್ಯ ರೈಲ್ವೆ ಹಳಿ ತಪಾಸಣೆಗೆ ನೂರಾರು ಕಿ.ಮೀ. ದೂರದ ರೈಲ್ವೆ ಹಳಿಗಳನ್ನು ತಪಾಸಣೆ ನಡೆಸಬೇಕಾಗುತ್ತದೆ. ಹೀಗಾಗಿ ಈ ಹುದ್ದೆಗಳು ಮಹಿಳೆಯರಿಗೆ ಕಷ್ಟಕರ ಹಾಗೂ ಅಸುರಕ್ಷಿತ ಎಂದು ಪರಿಗಣಿಸಲಾಗಿದೆ.