ಸಿದ್ದಾಪುರ[ಮಾ.14]: ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಯೋಧನೊಬ್ಬ ಅತ್ಯಾಚಾರ ಮಾಡಿರುವ ಘಟನೆ ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ.

ಕೇರಳ ರಾಜ್ಯದ ವಯನಾಡುವಿನ ನಿವಾಸಿ, ಪ್ರಸ್ತುತ ತ್ರಿಪುರದಲ್ಲಿ ಯೋಧನಾಗಿರುವ ನಿತಿನ್‌ ಎಂಬಾತನೇ ಅತ್ಯಾಚಾರ ನಡೆಸಿದ ಆರೋಪಿ. ವಿರಾಜಪೇಟೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಮಂಗಳವಾರ ತನ್ನ ಮನೆಯಲ್ಲಿ ಒಂಟಿಯಾಗಿದ್ದಾಗ ಆರೋಪಿ ಈ ಕೃತ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈತನ ಪತ್ನಿ ಹೆರಿಗೆಯಾಗಿ ಅಜ್ಜನ ಮನೆಯಲ್ಲಿ ಇದ್ದರು. ಆಕೆಯನ್ನು ನೋಡಲು ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ.

ಪತ್ನಿಯ ಅಜ್ಜನ ನೆರೆಮನೆಯಲ್ಲಿ ವಾಸವಿರುವ ಕುಟುಂಬದ ಬಾಲಕಿ ಒಬ್ಬಳೇ ಇದ್ದಾಗ ಏಕಾಏಕಿ ಮನೆಯೊಳಗೆ ಪ್ರವೇಶಿಸಿ ಬಾಲಕಿಯ ಮೇಲೆ ಮುಗಿಬಿದ್ದು ಅತ್ಯಾಚಾರ ನಡೆಸಿದ್ದಾನೆ. ಬಾಲಕಿಯ ಚೀರಾಟ ಕೇಳಿ ಓಡಿಬಂದ ಸ್ಥಳೀಯರು ಆರೋಪಿಗೆ ಗೂಸಾ ನೀಡಿ, ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಯ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.