ಮೇಠಿ[ಮೇ.26]: ಭಾರೀ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, 300ಕ್ಕೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಸರ್ಕಾರ ರೂಪಿಸಲು ಸಜ್ಜಾಗಿದೆ. ಈ ನಡುವೆ ಅಮೇಥಿಯಲ್ಲಿ ಸ್ಮೃತಿ ಇರಾನಿ ಪರ ಪ್ರಚಾರ ನಡೆಸಿದ್ದ ಮುಖಂಡರೊಬ್ಬರು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ. 

ಉತ್ತರ ಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರ ರಾಹುಲ್ ಗಾಂಧಿಯನ್ನು ಸೋಲಿಸಿ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಆಪ್ತರೆನ್ನಲಾಗಿದ್ದ ಬರೌಲಿಯಾ ಹಳ್ಳಿಯ ಮಾಜಿ ಮುಖಂಡ ಸುರೇಂದ್ರ ಸಿಂಗ್ ರನ್ನು ದುಷ್ಕರ್ಮಿಗಳು ಗುಂಡು ಹೊಡೆದು ಹತ್ಯೆಗೈದಿದ್ದಾರೆ. ಶನಿವಾರ ರಾತ್ರಿ ಸುಮಾರು 11.30ಕ್ಕೆ ಘಟನೆ ನಡೆದಿದ್ದು, ಕೂಡಲೇ ಗಾಯಾಳು ಸುರೇಂದ್ರರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆಯ ಬಳಿಕ ಅಮೇಥಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ. 

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಶೂ ವಿತರಣೆಗೆ ಸಂಬಂಧಿಸಿದಂತೆ ಸುರೇಂದ್ರ ಸಿಂಗ್ ಸದ್ದು ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಮೃತಿ ಇರಾನಿ ವಿರುದ್ಧ ಕಿಡಿ ಕಾರಿದ್ದ ಪ್ರಿಯಾಂಕಾ ಗಾಂಧಿ, ಶೂ ವಿತರಿಸುವುದು ಜನರಿಗೆ ಮಾಡುತ್ತಿರುವ ಅವಮಾನ ಎಂದಿದ್ದರು.

ಅಮೇಠಿಯ ಬರೌಲಿಯಾ ಹಳ್ಳಿಯನ್ನು ಮಾಜಿ ರಕ್ಷಣಾ ಸಚಿವರಾಗಿದ್ದ ದಿವಂಗತಮನೋಹರ್ ಪರ್ರಿಕರ್ ಸಂಸದ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ದತ್ತು ಪಡೆದುಕೊಂಡಿದ್ದರು. ಲೋಕಸಭಾ ಚುನಾವಣೆ ವೇಳೆ ಸುರೇಂದ್ರ ಸಿಂಗ್ ಜಪ್ರತಿಯೊಬ್ಬರ ಮನೆಗೆ ತೆರಳಿ ಸ್ಮೃತಿ ಇರಾನಿ ಪರ ಪ್ರಚಾರ ನಡೆಸಿ ಮತ ಯಾಚಿಸಿದ್ದರು.