Asianet Suvarna News Asianet Suvarna News

ವೀರಪ್ಪನ್‌ನಿಂದ ಡಾ. ರಾಜಕುಮಾರ್‌ ಅಪಹರಣ ; ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ

ರಾಜಕೀಯ ಮುತ್ಸದ್ಧಿ, ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಅವರ ಜೀವನ ಚರಿತ್ರೆ 'ಸ್ಮೃತಿ ವಾಹಿನಿ' ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ದಶಕಗಳ ಹಿಂದಿನ ರಾಜಕೀಯ ವಿಚಾರದ ಬಗ್ಗೆ ಬರೆದುಕೊಂಡಿದ್ದಾರೆ.  ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಡಾ. ರಾಜ್- ವೀರಪ್ಪನ್ ಕಿಡ್ನಾಪ್ ಕೇಸ್‌ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಏನದು? ಇಲ್ಲಿದೆ ನೋಡಿ. 

SM Krishna reveals facts about Dr Raj - Veerappan Kidnap case in his Smriti Vahini book
Author
Bengaluru, First Published Jan 5, 2020, 11:07 AM IST
  • Facebook
  • Twitter
  • Whatsapp

ದಿನನಿತ್ಯದಂತೆ ವಿಧಾನಸೌಧದಿಂದ ಮನೆಗೆ ಬಂದೆ. ಸಂಜೆ 7:30. ಕಾಫಿ ಕುಡಿಯುತ್ತಿದ್ದೆ. ಪಾರ್ವತಮ್ಮ ರಾಜಕುಮಾರ್‌ ಮಾತನಾಡುತ್ತಾರೆ ಎನ್ನುತ್ತಾ ಪಿ.ಎ. ಫೋನ್‌ ಕೊಟ್ಟ. ಪಾರ್ವತಮ್ಮ, ‘ಅಣ್ಣಾ ರಾಜಕುಮಾರ್‌ ಅವರನ್ನು ವೀರಪ್ಪನ್‌ ಎತ್ತಿಕೊಂಡು ಹೋದ’ ಎಂದರು. ಗಾಬರಿಯಾಗಿ ‘ಏನು ಹೇಳುತ್ತಿದ್ದೀರಮ್ಮಾ’ ಅಂದೆ. ನನಗೆ ಒಮ್ಮೆಲೆ ಆಕಾಶ ಕಳಚಿ ಬಿದ್ದಂತಾಗಿ ಆತಂಕ ಶುರುವಾಯಿತು. ಪರಿಸ್ಥಿತಿ ಏನಾಗುತ್ತದೋ ಅಂತ ಮನಸ್ಸಿನಲ್ಲಿಯೇ ಲೆಕ್ಕ ಹಾಕಿದೆ.

ನನ್ನ ಅಳಿಯ ಸಿದ್ಧಾರ್ಥನನ್ನು ಕರೆಸಿದೆ. ಅವನ ಸೋದರ ಸಂಬಂಧಿ ಸೇನಾನಿ ಹಾಗೂ ಕೃಪಾಕರ ಅವರಿಬ್ಬರೂ ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಒಂದಷ್ಟುದಿವಸ ವೀರಪ್ಪನ್‌ನ ಸೆರೆಯಲ್ಲಿದ್ದರು. ಇಬ್ಬರೂ ವನ್ಯಜೀವಿ ಛಾಯಾಗ್ರಾಹಕರು. ಅವರಿಗೆ ವೀರಪ್ಪನ್‌ ಜೊತೆ ಮಾತನಾಡುವಷ್ಟುಸಂಪರ್ಕವಿರಬಹುದು ಎಂಬುದು ನನ್ನ ವಿಚಾರವಾಗಿತ್ತು. ಅಷ್ಟೊತ್ತಿಗೆ ಇಂಟೆಲಿಜೆನ್ಸ್‌ನ ಮುಖ್ಯಸ್ಥರು, ಡಿ.ಜಿ, ಗೃಹಮಂತ್ರಿ ಹಾಗೂ ಗೃಹ ಕಾರ‍್ಯದರ್ಶಿ, ಮುಖ್ಯ ಕಾರ‍್ಯದರ್ಶಿ ಎಲ್ಲಾ ಬಂದರು. ಪಾರ್ವತಮ್ಮ ರಾಜಕುಮಾರ್‌ ಕೂಡ ಬಂದರು. ಆಗ ರಾತ್ರಿ 1 ಗಂಟೆ.

ಮೋಟಮ್ಮ ಮದ್ವೆಯಲ್ಲಿ ದಿಗ್ಗಜರ ಜೂಟಾಟ: SM ಕೃಷ್ಣ ಚರಿತ್ರೆಯಲ್ಲಿ ರಾಜಕೀಯ ರಹಸ್ಯ ಸ್ಫೋಟ

ನಾ ಎನ್ನಂಗೋ ಪಣ್ರದು ಎಂದ ಕರುಣಾ

ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿಯವರಿಗೆ ಫೋನ್‌ ಮಾಡಿದೆ. ಅವರು ‘ನಾ ಎನ್ನಂಗೋ ಪಣ್ರದು’ ಅಂತ ಕೇಳಿದರು. ನೀವೇನಾದರೂ ಮಾಡಲೇಬೇಕು, ನಾಳೆ ಬರುತ್ತೇನೆ ಅಂತ ಹೇಳಿದೆ. ಮಾರನೆ ದಿನ ಮದ್ರಾಸಿಗೆ ಹೋಗಿ ಕರುಣಾನಿಧಿ ಭೇಟಿ ಮಾಡಿದೆ. ಅವರು ಯೋಚನೆ ಮಾಡಿ, ಯಾರಾದರೂ ಒಬ್ಬರನ್ನು ವೀರಪ್ಪನ್‌ನ ಹತ್ತಿರ ಕಳುಹಿಸಬೇಕು ಎಂದರು.

ನಕ್ಕೀರನ್‌ ಗೋಪಾಲ್‌ ಅಂತ ಒಬ್ಬ ಪತ್ರಕರ್ತ ಇದ್ದಾನೆ, ಅವನು ಆಗಾಗ್ಗೆ ವೀರಪ್ಪನ್‌ ಭೇಟಿ ಮಾಡಿ ಅವನಿಗೆ ಸಂಬಂಧಪಟ್ಟಂತೆ ಸುದ್ದಿ ಕೂಡ ಪ್ರಕಟಿಸುತ್ತಾನೆ, ಅದು ತಮಿಳರಿಗೆ ತುಂಬಾ ಆಕರ್ಷಣೀಯವಾಗಿರುತ್ತದೆ ಎಂದರು. ನಕ್ಕೀರನ್‌ರನ್ನು ಕರೆಸಿದೆವು.

ಪ್ರಾರಂಭದಲ್ಲಿ ಆತ ಕಾಡಿಗೆ ಹೋಗಿ ವೀರಪ್ಪನ್‌ ನೋಡಲಿಕ್ಕೆ ಅಂಥ ಉತ್ಸಾಹವೇನೂ ತೋರಿಸಲಿಲ್ಲ. ನಾನೇ ಅವನಿಗೆ ಪ್ರಾರ್ಥಿಸಿ, ಏನಾದರೂ ಮಾಡಿ ವೀರಪ್ಪನ್‌ ಸಂಪರ್ಕ ಮಾಡಪ್ಪ ಅಂತ ಕೇಳಿಕೊಂಡು ಸಂಜೆ ಬೆಂಗಳೂರಿಗೆ ಬಂದೆ.

ಏರ್‌ಪೋರ್ಟ್‌ನಿಂದ ಮನೆಗೆ ಬರಬೇಕಾದರೆ ಬೆಂಗಳೂರಿನಲ್ಲಿ ಆಗಲೇ ಉಗ್ರ ಪ್ರತಿಭಟನೆಗಳು ಶುರುವಾಗಿದ್ದವು. ಅದನ್ನು ಕಂಟ್ರೋಲ್‌ ಮಾಡದೇ ಇದ್ದರೆ 1991ರಲ್ಲಿ ನಡೆದ ಕಾವೇರಿ ಜಲವಿವಾದ ಘಟನೆ ಮರುಕಳಿಸಬಹುದಿತ್ತು. ತಕ್ಷಣ ಡಿ.ಜಿ ಹಾಗೂ ಗೃಹ ಕಾರ‍್ಯದರ್ಶಿಗಳನ್ನು ಕರೆಸಿ, ಒಬ್ಬನೇ ಒಬ್ಬ ತಮಿಳನ ಪ್ರಾಣ ಅಥವಾ ಆಸ್ತಿ-ಪಾಸ್ತಿ ನಷ್ಟಆಗಬಾರದು ಎಂದು ಕಠಿಣ ನಿರ್ದೇಶನ ನೀಡಿದೆ.

ಕಾಂಗ್ರೆಸ್‌ ಸೇರಲು ಮುಂದಾಗಿದ್ದ ದೇವೇಗೌಡ!

50 ಕೋಟಿ ರು. ಕೇಳಿದ ದಂತಚೋರ

ಕರುಣಾನಿಧಿಯವರ ಪ್ರಯತ್ನದಿಂದಾಗಿ ನಕ್ಕೀರನ್‌ ಕಾಡಿಗೆ ಹೋದ. ವೀರಪ್ಪನ್‌ ಭೇಟಿ ಮಾಡಿ ರಾಜಕುಮಾರ್‌ ಆರೋಗ್ಯ ಚೆನ್ನಾಗಿದ್ದ ಬಗ್ಗೆ ಹಾಗೂ ವೀರಪ್ಪನ್‌ ನನಗೆ ಕಳುಹಿಸಿದ ಕ್ಯಾಸೆಟ್‌ವೊಂದನ್ನು ತಂದುಕೊಟ್ಟ. ರಾಜಕುಮಾರ್‌ ಆರೋಗ್ಯವಾಗಿದ್ದು ಪ್ರಾರ್ಥನೆ ಮಾಡುತ್ತಿದ್ದರು, ಯೋಗ ಮಾಡುತ್ತಿದ್ದರು, ಹಾಡು ಹೇಳುತ್ತಿದ್ದರು. ವೀರಪ್ಪನ್‌ ನನಗೆ ಕಳುಹಿಸಿದ ಕ್ಯಾಸೆಟ್‌ನಲ್ಲಿ 50 ಕೋಟಿ ಹಣವೂ ಸೇರಿದಂತೆ ಅನೇಕ ಡಿಮ್ಯಾಂಡ್‌ಗಳಿದ್ದವು.

ತನ್ನ ಸಹಚರರು ಬೆಂಗಳೂರಿನ ಜೈಲಿನಲ್ಲಿದ್ದಾರೆ ಅವರನ್ನು ಬಿಡಿ ಎಂಬ ಕಂಡೀಷನ್‌ ಹಾಕಿದ. 5 ಸಾರಿ ಚೆನ್ನೈಗೆ ಹೋಗಿ ಕರುಣಾನಿಧಿಯನ್ನು ಭೇಟಿ ಮಾಡಿದೆ. ಅವರೂ ಒಂದು ಸಾರಿ ಒಂದರೆ ಒಳ್ಳೆಯದು ಅಂತ ಹೇಳಿ ಅವರನ್ನು ಬೆಂಗಳೂರಿಗೆ ವಿಧಾನಸೌಧಕ್ಕೆ ಕರೆಸಿದೆ. ಅನಂತರ ಮತ್ತೆ ಗೋಪಾಲನ್‌ನನ್ನೇ ಕಾಡಿಗೆ ಕಳುಹಿಸಲಾಯಿತು.

ಕೊನೆಗೆ ವೀರಪ್ಪನ್‌ನೇ ಫೋನ್‌ ಮಾಡಿದ

ಈ ಮಧ್ಯೆ ಒಂದು ದಿನ ಬೆಂಗಳೂರಿನಲ್ಲಿ ಟೆನ್ನಿಸ್‌ ಮ್ಯಾಚ್‌ ನೋಡುತ್ತಿದ್ದೆ. ಆಗ ನನ್ನ ಜೊತೆಗಿದ್ದ ರಾಘವೇಂದ್ರ ಶಾಸ್ತ್ರಿ ಅವರ ಮೊಬೈಲ್‌ಗೆ ದೂರದ ಕಾಡಿನಿಂದ ಕರೆ. ನೋಡಿದರೆ ವೀರಪ್ಪನ್‌ ಮಾತು. ವಣಕ್ಕಂ ಅಂದೆ, ಆತನು ಕೂಡ ವಣಕ್ಕಂ ಅಂದ. ಮೇಲೆ ‘ರಾಜಕುಮಾರ್‌ ಉಟ್ಟಿಡಂಗೋ’ ಅಂತ ಕೇಳಿದೆ. ಅದಕ್ಕೆ ‘ಸಾಧ್ಯವಿಲ್ಲ. ನನ್ನ ಷರತ್ತು ಪಾಲಿಸಿದರೆ ಮಾತ್ರ ಬಿಡುಗಡೆ ಮಾಡುತ್ತೇನೆ. ಇಲ್ಲದಿದ್ದರೆ ಕೊಂದು ಹಾಕುತ್ತೇನೆ’ ಎಂದ. ಆಮೇಲೆ ಟೈಂ ಕೇಳಿದೆ.

ನೆಡುಮಾರನ್‌ ಅಂತ ತೀವ್ರ ತಮಿಳುತನದ ಪ್ರತಿಪಾದಕರು. ರಾಜೀವ್‌ ಗಾಂಧಿ ಹತ್ಯೆ ಸಂದರ್ಭದಲ್ಲಿ ಅವರ ಹೆಸರು ಕೇಳಿಬರುತ್ತಿತ್ತು. ಕಾಂಗ್ರೆಸ್‌ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ ವ್ಯಕ್ತಿಯ ಜೊತೆ ನಾನು ಮಾತನಾಡಲೇಬೇಕಾಯಿತು. ವೀರಪ್ಪನ್‌ಗೆ ಅವರ ಬಗ್ಗೆ ತುಂಬಾ ಗೌರವ ಇದೆ ಎಂದು ಗೊತ್ತಾಯಿತು. ಅವರನ್ನು ಭೇಟಿಯಾಗಿ ಏನಾದರೂ ಸಹಾಯ ಮಾಡಿ ಎಂದು ಹೇಳಿದೆ. ಅದಕ್ಕೆ ಅವರು ‘ಬಹಳ ಕಷ್ಟವಿದೆ. ಅವನು ಸುಲಭವಾಗಿ ಯಾವುದಕ್ಕೂ ಸಿಗುವವನಲ್ಲ. ಆದರೂ ಪ್ರಯತ್ನ ಮಾಡುತ್ತೇನೆ. ಲೆಟರ್‌ ಕಳುಹಿಸುತ್ತೇನೆ’ ಅಂದರು. ವೀರಪ್ಪನ್‌ ಅತ್ಯುತ್ತಮವಾದ ಸಂಪರ್ಕ ಜಾಲ ಇಟ್ಟುಕೊಂಡಿದ್ದ.

ಈ ಮಧ್ಯೆ ನಮ್ಮ ಪೊಲೀಸರು ನಾಗಪ್ಪ ಮಾರಡಗಿಯನ್ನು ಹಿಡಿದುಕೊಂಡು ಬಂದರು. ರಾಜಕುಮಾರ್‌ ಕರೆದುಕೊಂಡು ಹೋಗಿದ್ದ ಇಬ್ಬರಲ್ಲಿ ಅವನೊಬ್ಬ, ಸಹಾಯಕ ನಿರ್ದೇಶಕ. ವೀರಪ್ಪನ್‌ ಜೊತೆಗೆ ಜಗಳ ಮಾಡಿ, ರಾತ್ರೋರಾತ್ರಿ ತಪ್ಪಿಸಿಕೊಂಡು ಬಂದುಬಿಟ್ಟಿದ್ದ. ಅವನು ಪ್ರತಿನಿತ್ಯ ವೀರಪ್ಪನ್‌ ತನ್ನ ತಾಣ ಬದಲಾಯಿಸುತ್ತಾನೆ, ಮಾಂಸಾಹಾರ ಬಿಟ್ಟು ಏನೂ ಊಟಕ್ಕೆ ದೊರೆಯುವುದಿಲ್ಲ. ವಯಸ್ಸಾದವರು ಅವನ ಜೊತೆಗಿರುವುದು ಕಷ್ಟಎಂದೆಲ್ಲಾ ಹೇಳಿದ.

ಮಾರ್ವಾಡಿ ಕಿಡ್ನಾಪ್‌ - ಸೋನಿಯಾ ಗರಂ

ಈ ಮಧ್ಯೆ ಒಂದು ಪ್ರಸಂಗ ನಡೆಯಿತು. ಬೆಂಗಳೂರಿನಿಂದ ಯಾವುದೋ ಮಾರ್ವಾಡಿಯನ್ನು ಯಾರೋ ಕಿಡ್ನಾಪ್‌ ಮಾಡಿದರು. ತಕ್ಷಣ ಅದೊಂದು ದೊಡ್ಡ ಸುದ್ದಿಯಾಯಿತು. ರಾತ್ರಿ ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಫೋನ್‌ ಮಾಡಿ, ‘ಏನು ಕರ್ನಾಟಕದಲ್ಲಿ ಲಾ ಅಂಡ್‌ ಆರ್ಡರ್‌ಗೆ ಅಷ್ಟೊಂದು ಸಮಸ್ಯೆ ಬಂದಿದೆಯಲ್ಲ. ಮಾರ್ವಾಡಿಯನ್ನ ಹಾಡಹಗಲೇ ಎಲ್ಲರೆದುರು ಎತ್ತಿಕೊಂಡು ಹೋಗಬೇಕಾದರೆ, ನೀವೇನು ಕೆಲಸ ಮಾಡುತ್ತಿದ್ದೀರಾ’ ಎಂದು ತುಂಬಾ ನಿಷ್ಠುರವಾಗಿ ಮಾತನಾಡಿದರು. ಸೋನಿಯಾ ಗಾಂಧಿಯವರು ಮಾರ್ವಾಡಿಯನ್ನು ವೀರಪ್ಪನ್‌ ಎತ್ತಿಕೊಂಡು ಹೋಗಿದ್ದಾನೆ ಎಂದು ಭಾವಿಸಿದ್ದರು. ಎರಡು ದಿನದಲ್ಲಿ ಮಾರ್ವಾಡಿಯನ್ನು ಕರೆದುಕೊಂಡು ಬರಲಾಯಿತು. ಅದನ್ನು ಅವರಿಗೆ ತಿಳಿಸಿದೆ.

ಡಾ. ರಾಜ್‌ಗೆ ಮೊದಲೇ ಎಚ್ಚರಿಸಿದ್ದೆವು

ರಾಜಕುಮಾರ್‌ ಊರು ಗಾಜನೂರು, ತಮಿಳುನಾಡು ವ್ಯಾಪ್ತಿಗೆ ಬರುತ್ತದೆ. ರಾಜಕುಮಾರ್‌ ಅವರಿಗೆ 2 ತಿಂಗಳ ಮುಂಚೆ ನಮ್ಮ ಗೃಹ ಇಲಾಖೆ, ‘ನೀವು ಊರಿಗೆ ಹೋಗಬೇಕಾದರೆ ತಿಳಿಸಬೇಕು’ ಎಂಬ ಸೂಚನೆ ಕೊಟ್ಟಿತ್ತು. ಆದರೆ ಅವರು ಅದನ್ನು ತಾತ್ಸಾರ ಮಾಡಿ, ‘ನನಗೇನು ಮಾಡುತ್ತಾರೆ’ ಅಂದುಕೊಂಡಿದ್ದರು. ರಾಜಕುಮಾರ್‌ ಅಪಹರಣ ಕೇಸು ತಮಿಳುನಾಡಿನಲ್ಲಿ ನೋಂದಣಿಯಾಗಿದ್ದರೂ, ಕರುಣಾನಿಧಿ ಅವರನ್ನು ಬಿಟ್ಟು ಬೇರೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.

ಕರ್ನಾಟಕಕ್ಕೆ ಈ ಅಪಹರಣ ತುಂಬಾ ಪ್ರಮುಖವಾದ ವಿಚಾರ. ಹಾಗಾಗಿ ಸುದ್ದಿವಾಹಿನಿಗಳು, ವಿರೋಧಪಕ್ಷವರು ಎಲ್ಲರನ್ನೂ ಹ್ಯಾಂಡಲ್‌ ಮಾಡಬೇಕಿತ್ತು. ಹೀಗಾಗಿ ಐದು ಸಾರಿ ವಿರೋಧಪಕ್ಷದ ನಾಯಕರ ಸಭೆ ಕರೆದೆ. ಅವರ ಅಭಿಪ್ರಾಯ ಪಡೆದೇ ಮುನ್ನಡೆದೆ. ನನ್ನ ವ್ಯಕ್ತಿತ್ವದ ಭಾಗವಾಗಿರುವ ಸಂಯಮ, ಮೌನ, ತಾಳ್ಮೆ ಹಾಗೆಯೇ ನೋವನ್ನು ನುಂಗಿಕೊಳ್ಳುವುದು ಈ ಸಂದರ್ಭದಲ್ಲಿ ನನ್ನನ್ನು ಕಾಪಾಡಿದವು. ಎಂತಹುದೇ ಮಾತಿಗೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ.

ವೀರಪ್ಪನ್‌ಗೆ ಹಣ ಕೊಟ್ಟಿರೋದು ಸುಳ್ಳು

ಆಮೇಲೆ ನನ್ನಿಂದ ಉಪಕೃತರಾದ ನಿವೃತ್ತ ಡಿಐಜಿಯೊಬ್ಬ ಪುಸ್ತಕ ಬರೆದು ರಾಜಕುಮಾರ್‌ ಅಪಹರಣದಲ್ಲಿ ಕೃಷ್ಣರವರು ಅಳಿಯನ ಮೂಲಕ ವೀರಪ್ಪನ್‌ಗೆ ಹಣ ಕಳುಹಿಸಿದ್ದಾರೆ ಎಂದೆಲ್ಲಾ ಪ್ರಚಾರ ಮಾಡಿದರು. ಈ ಬಗ್ಗೆ ಅವನ ವಿರುದ್ಧ ಮಾನನಷ್ಟಮೊಕದ್ದಮೆ ಹೂಡಿದ್ದೇನೆ. ಕೋಟ್ಯಂತರ ರು.ಗಳನ್ನು ಕಾಡಿಗೆ ಕಳುಹಿಸಲು ಹೇಗೆ ಸಾಧ್ಯ ಎಂಬ ಸಾಮಾನ್ಯ ಜ್ಞಾನ ಕೂಡ ಹಿರಿಯ ಐಪಿಎಸ್‌ ಅಧಿಕಾರಿಗೆ ಇಲ್ಲದಿದ್ದರೆ ಏನು ಮಾಡುವುದು.

ವೀರಪ್ಪನ್‌ನ ಮನವೊಲಿಸಿದ್ದು ಡಾ ಶುಭಾ

ವೀರಪ್ಪನ್‌ ಸ್ಥಳೀಯ ಜನರಿಗೆ ಅಂದರೆ ಗೋಪಿನಾಥಂ ಮೊದಲಾದ ಸ್ಥಳಗಳ ಜನರಿಗೆ ಒಂದಿಷ್ಟುಸಹಾಯ ಮಾಡಿ, ಅವರುಗಳನ್ನು ಒಲಿಸಿಕೊಂಡುಬಿಟ್ಟಿದ್ದ. ಹೀಗಾಗಿ ಅವನನ್ನು ಹಿಡಿಯುವುದು ಕಷ್ಟವಿತ್ತು. ಕರ್ನಾಟಕದಲ್ಲಿ ಪೊಲೀಸರಿಂದ ಇನ್ವೆಸ್ಟಿಗೇಶನ್‌ ವೇಗ ಹೆಚ್ಚಾದರೆ ತಮಿಳುನಾಡಿಗೆ ಹೋಗುತ್ತಿದ್ದ, ತಮಿಳುನಾಡಿನಲ್ಲಿ ಇನ್ವೆಸ್ಟಿಗೇಶನ್‌ ವೇಗ ಹೆಚ್ಚಾದರೆ ಕರ್ನಾಟಕಕ್ಕೆ ಬರುತ್ತಿದ್ದ. ಈ ಸಂದರ್ಭದಲ್ಲಿ ಡಾ.ಶುಭಾ, ವೀರಪ್ಪನ್‌ ಸಂಪರ್ಕ ಸಾಧಿಸಿ ರಾಜಕುಮಾರ್‌ ಅವರನ್ನು ಬಿಡುಗಡೆಗೊಳಿಸಲು ಒಪ್ಪಿಸಿದ್ದಳು.

ಆಕೆ ಡಾಕ್ಟರ್‌ ಆಗಿ ಆತನಿಗೆ ಚಿಕಿತ್ಸೆ ಕೊಟ್ಟಿರಬಹುದು. ನಿರ್ದಿಷ್ಟಸ್ಥಳವೊಂದರಲ್ಲಿ ರಾಜಕುಮಾರ್‌ ಅವರನ್ನು ವೀರಪ್ಪನ್‌ ನಮಗೆ ಒಪ್ಪಿಸುವುದಾಗಿ ಕೊಳತ್ತೂರು ಮಣಿ ನನಗೆ ಸಂದೇಶ ಕಳುಹಿಸಿದರು. ನಾವು ಅಲ್ಲಿಗೆ ಹೆಲಿಕಾಪ್ಟರ್‌ ಕಳುಹಿಸಿದೆವು. ರಾಜಕುಮಾರ್‌ ಬಂದರು.

ರಾಜಕುಮಾರ್‌ ನನ್ನನ್ನು ನೆನಪಿಸಿಕೊಳ್ಳಲಿಲ್ಲ

ವಿಧಾನಸೌಧದಲ್ಲಿ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಅದರಲ್ಲಿ ಮರೆತು ಕೂಡ ಅವರು ನನ್ನ ಹೆಸರನ್ನು ತೆಗೆದುಕೊಳ್ಳಲಿಲ್ಲ. ಅದು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದೋ ಅಥವಾ ಮರೆತರೋ ಗೊತ್ತಿಲ್ಲ. ರಾಜಕುಮಾರ್‌ ಬಿಡುಗಡೆಯಾಗಿ ಬಂದ ಮೇಲೆ ನ್ಯಾಷನಲ್‌ ಕಾಲೇಜ್‌ ಆವರಣದಲ್ಲಿ ಬೃಹತ್‌ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ನಾನೂ ಅಲ್ಲಿಗೆ ಹೋಗಿದ್ದೆ. ಕಾರ‍್ಯಕ್ರಮದ ಅಧ್ಯಕ್ಷರಾದ ತಲ್ಲಂ ನಂಜುಂಡಶೆಟ್ಟಿಅವರು ಮಾತನಾಡುತ್ತಾ, ‘ಎಸ್‌.ಎಂ. ಕೃಷ್ಣ ಅವರು ಬಿಡುಗಡೆಗೆ ಮಾಡಿದ ಶ್ರಮ, ತ್ಯಾಗ ಇವೆಲ್ಲವುಗಳನ್ನು ರಾಜಕುಮಾರ್‌ ಮನೆತನದವರು ಜನ್ಮಜನ್ಮಾಂತರಕ್ಕೂ ನೆನಪಿಸಿಕೊಳ್ಳಬೇಕು’ ಎಂದು ಹೇಳಿದರು.

ರಾಜಕುಮಾರ್‌ ಅವರನ್ನು ಅಪಹರಣ ಮಾಡಿದ ನೂರಾ ಎಂಟು ದಿನಗಳ ಕಾಲ ನಾನು ನಿದ್ದೆ ಮಾಡಿರಲಿಲ್ಲ. ಒಟ್ಟಾರೆ ರಾಜಕುಮಾರ್‌ ಅವರನ್ನು ವೀರಪ್ಪನ್‌ ಬಿಡುಗಡೆ ಮಾಡಿದಾಗ ದೊಡ್ಡ ನಿಟ್ಟುಸಿರು ಬಿಟ್ಟೆ.

ನಂತರ ಮಾಜಿ ಸಚಿವ ನಾಗಪ್ಪ ಅವರನ್ನು ವೀರಪ್ಪನ್‌ ಅಪಹರಿಸಿದ. ಅವರನ್ನು ಬಿಡುಗಡೆ ಮಾಡಿಸಲು ಸಿದ್ಧತೆ ಮಾಡಿಕೊಳ್ಳುವುದಕ್ಕೂ ಮುಂಚೆಯೇ ದುರಂತ ನಡೆದುಹೋಯಿತು. ರಾಜಕುಮಾರ್‌ ಅವರನ್ನು ಬಿಡಿಸಿಕೊಂಡು ಬರಲು ಮಾಡಿದ ಗಂಭೀರ ಪ್ರಯತ್ನವನ್ನು ಕೃಷ್ಣ ಅವರು ನಾಗಪ್ಪನವರನ್ನು ಬಿಡಿಸಿಕೊಂಡು ಬರಲು ಮಾಡಲಿಲ್ಲವೆಂಬ ಆಪಾದನೆ ಬಂತು. ಹಾಗಂತ ರಾಜಕುಮಾರ್‌ರನ್ನು ಬಿಡಿಸಿಕೊಂಡು ಬರಲು ಮಾಡಿದ ಪ್ರಯತ್ನಕ್ಕೆ ಕ್ರೆಡಿಟ್‌ ಏನೂ ಬರಲಿಲ್ಲ.

- ನಿನ್ನೆ ಬಿಡುಗಡೆಯಾದ ಎಸ್‌.ಎಂ ಕೃಷ್ಣ ಅವರ ‘ಸ್ಮೃತಿ ವಾಹಿನಿ’ ಕೃತಿಯಲ್ಲಿರುವ ಒಂದು ಲೇಖನ

Follow Us:
Download App:
  • android
  • ios