Asianet Suvarna News Asianet Suvarna News

ಬಿಜೆಪಿ ಸೇರಿದ್ದು ಯಾಕೆ.? ಎಸ್.ಎಂ ಕೃಷ್ಣ ಆತ್ಮಚರಿತ್ರೆಯಲ್ಲಿ ಕಾರಣ ಬಯಲು!

ಎಸ್.ಎಂ ಕೃಷ್ಣ ಅವರು ಬಿಜೆಪಿ ಸೇರ್ಪಡೆಯಾಗಿದ್ದು ಯಾಕೆ.? ಅದಕ್ಕೆ ಕಾರಣಗಳೇನು.? ಅವರ ವೈಯಕ್ತಿಕ ಬದುಕಿನ ಮಜಲುಗಳು ಸೇರಿದಂತೆ ವಿವಿಧ ವಿಚಾರಗಳು ಅವರ ಆತ್ಮಚರಿತ್ರೆಯಲ್ಲಿ ಅನಾವರಣವಾಗಲಿವೆ. ಶೀಘ್ರದಲ್ಲೇ ಆತ್ಮಚರಿತ್ರೆ ಜನರ ಕೈ ಸೇರಲಿದೆ. 

SM Krishna Biography Release Soon
Author
Bengaluru, First Published Aug 14, 2018, 11:47 AM IST

ಬೆಂಗಳೂರು :  ಮುತ್ಸದ್ದಿ ರಾಜಕಾರಣಿ ಎಂದೇ ಹೆಸರು ಗಳಿಸಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿನ ಎಲ್ಲ ಮಜಲುಗಳನ್ನು ಒಳಗೊಂಡ ಜೀವನ ಚರಿತ್ರೆ ಶೀಘ್ರದಲ್ಲಿಯೇ ಕೃತಿ ರೂಪದಲ್ಲಿ ಹೊರಬರಲಿದೆ.

ಬರುವ ಸೆಪ್ಟೆಂಬರ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಕೃಷ್ಣ ಅವರ ಜೀವನ ಚರಿತ್ರೆ ಬಿಡುಗಡೆಯಾಗುವುದು ಬಹುತೇಕ ನಿಶ್ಚಿತವಾಗಿದ್ದು, ಕನ್ನಡ ಮತ್ತು ಇಂಗ್ಲೀಷ್‌ ಭಾಷೆಗಳೆರಡರಲ್ಲೂ ಪ್ರಕಟವಾಗಲಿದೆ.

ಕಳೆದ ಐವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ತಾವು ಎದುರಿಸಿದ ಹತ್ತು ಹಲವು ಸಂಕಷ್ಟಹಾಗೂ ಸವಾಲುಗಳನ್ನೂ ಸೇರಿದಂತೆ ಎಲ್ಲ ಪ್ರಮುಖ ಬೆಳವಣಿಗೆಗಳನ್ನು ಈ ಕೃತಿಯಲ್ಲಿ ದಾಖಲಿಸಿರುವುದಾಗಿ ಖುದ್ದು ಕೃಷ್ಣ ಅವರೇ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ತಮ್ಮ ಒಂದು ಕಾಲದ ರಾಜಕೀಯ ಪ್ರತಿಸ್ಫರ್ಧಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಜೀವನ ಚರಿತ್ರೆ ಬಿಡುಗಡೆಯಾಗುವ ಮೊದಲೇ ಕೃಷ್ಣ ಅವರ ಜೀವನ ಚರಿತ್ರೆ ಸದ್ದಿಲ್ಲದೆ ಸಿದ್ಧಗೊಂಡಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ರಾಜ್ಯ ರಾಜಕಾರಣದಲ್ಲಿ ದಶಕಗಳ ಕಾಲ ಪ್ರಮುಖ ಪಾತ್ರ ನಿರ್ವಹಿಸಿ, ಸುದೀರ್ಘ ಹಾದಿ ಸವೆಸಿರುವ ಕೃಷ್ಣ ಅವರು ತಮ್ಮ ಜೀವನ ಚರಿತ್ರೆ ಮೂಲಕ ಯಾವೆಲ್ಲ ಸತ್ಯ ಸಂಗತಿಗಳನ್ನು ಹೊರಹಾಕುತ್ತಾರೆ? ಅದರಿಂದ ಯಾರಿಗೆಲ್ಲ ಮುಜುಗರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸುಮಾರು 600ರಿಂದ 700 ಪುಟಗಳಷ್ಟುಆಗಬಹುದಾದ ಈ ಪುಸ್ತಕ ಮುದ್ರಣ ಹಂತದಲ್ಲಿದ್ದು, ಕೊನೆಯ ಹಂತದ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ಕೃತಿಯ ಶೀರ್ಷಿಕೆ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ. ಕೃಷ್ಣ ಅವರ ಆಪ್ತ ಸ್ನೇಹಿತರೂ ಆಗಿರುವ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಮತ್ತಿತರರು ಈ ಜೀವನ ಚರಿತ್ರೆ ಪ್ರಕಟಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಅಂದ ಹಾಗೆ, ಕೃಷ್ಣ ಅವರ ಈ ಜೀವನ ಚರಿತ್ರೆ ಬರೆದಿರುವುದು ಹಿರಿಯ ವಿದ್ವಾಂಸ ಪಾವಗಡ ಪ್ರಕಾಶರಾವ್‌. ಇನ್ನೂ ಒಂದು ಅಚ್ಚರಿ ಸಂಗತಿ ಇದೆ. ಕೃತಿಗಾಗಿ ಕಳೆದ ಸುಮಾರು 12 ವರ್ಷಗಳಿಂದ ಸಿದ್ಧತೆ ನಡೆದಿದೆ. ಕೃಷ್ಣ ಅವರು ರಾಜ್ಯ ರಾಜಕಾರಣದಿಂದ ನಿರ್ಗಮಿಸಿ ಮಹಾರಾಷ್ಟ್ರದ ರಾಜ್ಯಪಾಲರಾದ ಬಳಿಕ ಜೀವನ ಚರಿತ್ರೆಯ ಸಿದ್ಧತೆ ಆರಂಭಿಸಲಾಗಿದೆ. ಇದಕ್ಕಾಗಿ ಪಾವಗಡ ಪ್ರಕಾಶ್‌ರಾವ್‌ ಅವರು ಆ ವೇಳೆಯಲ್ಲೇ ಹಲವು ಬಾರಿ ಮುಂಬೈಗೆ ತೆರಳಿ ರಾಜ್ಯಪಾಲರಾಗಿದ್ದ ಕೃಷ್ಣ ಅವರನ್ನು ಮಾತನಾಡಿಸಿ ಅವರ ಜೀವನದ ಬೆಳವಣಿಗೆಗಳನ್ನು ಹೆಕ್ಕಿ ತೆಗೆಯುವ ಪ್ರಯತ್ನ ನಡೆಸಿದ್ದರು.

ಮುಂದೆ ಯುಪಿಎ ಸರ್ಕಾರದಲ್ಲಿ ಕೇಂದ್ರ ವಿದೇಶಾಂಗ ಸಚಿವರಾದ ಸಂದರ್ಭ ಹೆಚ್ಚು ಸಮಯಾವಕಾಶ ಸಿಗದೇ ಇದ್ದುದರಿಂದ ನೆನೆಗುದಿಗೆ ಬಿದ್ದಿತ್ತು. ಆ ಹುದ್ದೆಯಿಂದ ಕೆಳಗಿಳಿದ ನಂತರ ಕೃಷ್ಣ ಅವರು ತಮ್ಮ ಜೀವನದ ಸಂಗತಿಗಳನ್ನು ವಿವರಿಸುತ್ತ ಹೋದಂತೆಲ್ಲ ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಕಾಡುಗಳ್ಳ ವೀರಪ್ಪನ್‌ನಿಂದ ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರ ಅಪಹರಣ, ಮುಖ್ಯಮಂತ್ರಿಯಾಗಿದ್ದ ವೇಳೆ ಎದುರಿಸಿದ ಬರಗಾಲ, ರಾಜಕೀಯ ಸಂಕಷ್ಟ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದು, ನಂತರ ಕೇಂದ್ರ ವಿದೇಶಾಂಗ ಸಚಿವರಾಗಿದ್ದು, ಆ ಸಂದರ್ಭದಲ್ಲಿ ಕೇಳಿಬಂದ ಟೀಕೆಗಳ ಬಗ್ಗೆಯೂ ಸೇರಿದಂತೆ ಮಂಡ್ಯದ ಮದ್ದೂರಿನಿಂದ ದೆಹಲಿವರೆಗೆ ನಡೆದು ಬಂದ ಹಾದಿಯ ಎಲ್ಲ ಪ್ರಮುಖ ಬೆಳವಣಿಗೆಗಳನ್ನೂ ಕೃಷ್ಣ ಅವರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸೇರಿದ ಬಗ್ಗೆಯೂ ಪ್ರಸ್ತಾಪ :  ತಮ್ಮ ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಬಗ್ಗೆ ಕೃಷ್ಣ ಅವರ ವಿರುದ್ಧ ಹಲವಾರು ಟೀಕೆ ಟಿಪ್ಪಣಿ ಕೇಳಿ ಬಂದಿತ್ತು. ಅದೆಲ್ಲದಕ್ಕೂ ಕೃಷ್ಣ ಅವರು ಈ ಕೃತಿಯಲ್ಲಿ ಉತ್ತರ ನೀಡುವ ಸಾಧ್ಯತೆಯಿದೆ. ಬಿಜೆಪಿ ಸೇರ್ಪಡೆಯಾಗಲು ಕಾರಣವೇನು ಎಂಬುದನ್ನು ವಿವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯ್‌ ಮಲಗಿಹಾಳ

Follow Us:
Download App:
  • android
  • ios