ಬೆಂಗಳೂರು :  ನಗರದ ಮೈಸೂರು ರಸ್ತೆಯ ಸಿರ್ಸಿ ಫ್ಲೈಓವರ್‌ ಗುಂಡಿ ಮುಕ್ತಗೊಳಿಸುವುದಕ್ಕೆ ಡಿ.26ರಿಂದ ನಾಲ್ಕು ತಿಂಗಳು ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ.

ಬೆಂಗಳೂರಿನ ಪ್ರಥಮ ಮೇಲ್ಸೇತುವೆ ಎಂಬ ಹೆಗ್ಗಳಿಕೆಯ ಸಿರ್ಸಿ ಮೇಲ್ಸೇತುವೆಯಲ್ಲಿ ಗುಂಡಿ ಉಂಟಾಗಿ ವಾಹನಗಳ ಸಂಚಾರಕ್ಕೆ ತೀವ್ರತೊಂದರೆ ಉಂಟಾಗುತ್ತಿದೆ. ಮರು ಡಾಂಬರಿಕರಣ ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಕಳೆದ ನಾಲ್ಕು ವರ್ಷದ ಹಿಂದೆ ಫ್ಲೈಓವರ್‌ ಮೇಲೆ ಡಾಂಬಾರಿಕರಣ ಮಾಡಲಾಗಿತ್ತು. ಫ್ಲೈಓವರ್‌ ಕೆಲವು ಕಡೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದವು. ಹಾಗಾಗಿ, .4.30 ಕೋಟಿ ವೆಚ್ಚದಲ್ಲಿ ಮರು ಡಾಂಬರಿಕರಣ ಮಾಡಲಾಗುತ್ತಿದೆ.

ಟಿಕ್ಕಿಟಾರ್‌ ಶೀಟ್‌ ಬಳಕೆ:

ಕೇವಲ ನಾಲ್ಕು ವರ್ಷದ ಹಿಂದೆಯಷ್ಟೇ ಮಾಡಿದ ಡಾಂಬರಿಕರಣ ಬಾಳಿಕೆ ಬರದ ಕಾರಣ ಈ ವರ್ಷ ಈ ಬಾರಿ ಅತ್ಯಾಧುನಿಕ ತಂತ್ರಜ್ಞಾನದ ಟಿಕ್ಕಿಟಾರ್‌ ಶೀಟ್‌ ಬಳಕೆ ಮಾಡಲಾಗುತ್ತದೆ. ಅದಕ್ಕೂ ಮುನ್ನ ಫ್ಲೈಓವರ್‌ ಮೇಲ್ಭಾಗದಲ್ಲಿ ಹಾಕಲಾಗಿರುವ ಡಾಂಬಾರ್‌ ಪದರವನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಬಳಿಕ ಫ್ಲೈಓವರ್‌ ಕಾಂಕ್ರೀಟ್‌ ಮೇಲೆ ಟಿಕ್ಕಿಟಾರ್‌ ಶೀಟ್‌ ಹಾಕಿ ಬಿಸಿ ಮಾಡಿ ಡಾಂಬಾರ್‌ ಹಾಕಲಾಗುತ್ತದೆ. ಕಾಂಕ್ರಿಟ್‌ ಪದರ ಹಾಗೂ ಡಾಂಬಾರ್‌ (ಬಿಟಮಿನ್‌) ಹಿಡಿದಿಡಲು ಟಿಕ್ಕಿಟಾರ್‌ ಹೊದಿಕೆ ಹಾಕಲಾಗುತ್ತದೆ. ಇದರಿಂದ ಡಾಂಬಾರ್‌ ಪದರ ಬೇಗ ಹಾಳಾಗುವುದಿಲ್ಲ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ತಿಳಿಸಿದ್ದಾರೆ.

ಡಾಂಬರ್‌ ಶೀಟ್‌:

ಮೂರು ಮಿಲಿ ಮೀಟರ್‌ ಗಾತ್ರದ ಸಣ್ಣ ಡಾಂಬಾರ್‌ ಶೀಟ್‌ ಆಗಿದ್ದು, ಕಾಂಕ್ರಿಟ್‌ ಮೇಲ್ಭಾಗದಲ್ಲಿ ಡಾಂಬಾರಿಕರಣ ಮಾಡುವಾಗ ಇದನ್ನು ಬಳಕೆ ಮಾಡಲಾಗುತ್ತಿದೆ. ಟಿಕ್ಕಿಟಾರ್‌ ಶೀಟ್‌ಗಳನ್ನು ಮುಂಬೈನಿಂದ ತರಿಸಲಾಗುತ್ತಿದೆ. ಹಾಗಾಗಿ, ಕಾಮಗಾರಿ ವಿಳಂಬವಾಗುತ್ತಿದೆ. ಡಿ.26ರಿಂದ ಕಾಮಗಾರಿ ಆರಂಭವಾಗಲಿದ್ದು, ಮೇಲ್ಸೇತುವೆಯ ಒಂದು ಭಾಗದಲ್ಲಿ ಸಂಚಾರ ನಿಷೇಧಿಸಲಾಗುವುದು ಎಂದು ನಾಗರಾಜ್‌ ತಿಳಿಸಿದ್ದಾರೆ.

ನಾಲ್ಕು ತಿಂಗಳು ಅಗತ್ಯ:

ಕೆ.ಆರ್‌.ಮಾರುಕಟ್ಟೆ, ರಾಯನ್‌ ವೃತ್ತ, ಚಾಮರಾಜಪೇಟೆ ಸೇರಿ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಸಂಚಾರ ಬದಲಾವಣೆ ಮಾಡಲಾಗುತ್ತದೆ. ಎರಡು ಬದಿಯ ನಾಲ್ಕು ಪಥದ 2.65 ಕಿಲೋ ಮೀಟರ್‌ ರಸ್ತೆಗೆ ಟಿಕ್ಕಿಟಾರ್‌ ಶೀಟ್‌ ಹಾಕುವುದಕ್ಕೆ ಕನಿಷ್ಠ ನಾಲ್ಕು ತಿಂಗಳು ಬೇಕಾಗಲಿದೆ. ಸಿರ್ಸಿ ಫ್ಲೈಓವರ್‌ ಬಳಕೆ ಮಾಡುವ ವಾಹನ ಸವಾರರು ನಾಲ್ಕು ತಿಂಗಳು ತೀವ್ರ ಸಂಚಾರ ದಟ್ಟಣೆ ಆಗಲಿದೆ.

ಕೆ.ಆರ್‌.ಮಾರುಕಟ್ಟೆಕಾಮಗಾರಿ

ಕೆ.ಆರ್‌.ಮಾರುಕಟ್ಟೆಯಿಂದ ಮೈಸೂರು ರಸ್ತೆಯ ಕಡೆಗೆ ಹೋಗುವ ಮಾರ್ಗದಲ್ಲಿ ಮೊದಲು ದುರಸ್ತಿ ನಡೆಯಲಿದೆ. ಅದರಂತೆ ರಾಯನ್‌ ವೃತ್ತದವರೆಗಿನ ಮೇಲ್ಸೇತುವೆಯ ಸಂಚಾರಕ್ಕೆ ಅವಕಾಶಕ್ಕೆ ಮಾಡಿಕೊಟ್ಟು, ನಂತರದಲ್ಲಿ ಮುಚ್ಚಲಾಗುತ್ತದೆ. ಎರಡನೇ ಹಂತದಲ್ಲಿ ಮೈಸೂರು ರಸ್ತೆಯಿಂದ ನಗರಕ್ಕೆ ಬರುವ ಮಾರ್ಗದಲ್ಲಿ ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿ ನಡೆಸಲಿದ್ದಾರೆ. ಹೀಗಾಗಿ ಮೊದಲ ಹಂತದ ಕಾಮಗಾರಿ ನಡೆಯುವ ವೇಳೆ ಮೇಲ್ಸೇತುವೆಯಲ್ಲಿ ಎಡಕ್ಕೆ ತಿರುಗಿ ರಾಯನ್‌ ವೃತ್ತ ಮೂಲಕ ಮೈಸೂರು ರಸ್ತೆಗೆ ತಲುಪಬೇಕಾಗುತ್ತದೆ.

ಮೇಲ್ಸೇತುವೆಯ ಎರಡು ಬದಿಯ ರಸ್ತೆಯ ಕಾಮಗಾರಿಗೆ ನವೆಂಬರ್‌ ತಿಂಗಳಲ್ಲಿಯೇ ನಗರ ಸಂಚಾರ ಪೊಲೀಸರು ಅನುಮತಿ ನೀಡಿದ್ದು, ಪಾಲಿಕೆಯಿಂದ ಕಾರ್ಯಾದೇಶ ಸಹ ನೀಡಲಾಗಿದೆ. ಡಿ.26 ರಿಂದ ಆರಂಭವಾಗಲಿದೆ.

-ಕೆ.ಟಿ.ನಾಗರಾಜ್‌, ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌.