ಬೆಂಗಳೂರು (ನ. 19): ಶೌಚಾಲಯ ಅತೀ ಮುಖ್ಯ. ಏಕೆಂದರೆ ಮನುಷ್ಯ ವಿಸರ್ಜಿಸುವ ಮಲ, ಸಾವು ತರಬಹುದಾದ ಕಾಯಿಲೆಗಳನ್ನು ಹರಡುತ್ತದೆ. ಹಾಗಾಗಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ವಿಶ್ವ ಸಂಸ್ಥೆಯೂ ಈ ನಿಟ್ಟಿನಲ್ಲಿ ಕಾರ‌್ಯ ನಿರ್ವಹಿಸುತ್ತಿದ್ದು, ಪ್ರತಿವರ್ಷ ನವೆಂಬರ್ ೧೯ನೇ ತಾರೀಕನ್ನು ವಿಶ್ವ ಶೌಚಾಲಯ ದಿನ ಎಂದು ಘೋಷಿಸಿದೆ. ಈ ನಿಟ್ಟಿನಲ್ಲಿ ವಿಶ್ವದಲ್ಲಿನ ಶೌಚಾಲಯಗಳ ಸ್ಥಿತಿಗತಿಗಳ ಒಂದು ನೋಟ ಇಲ್ಲಿದೆ.

ಬಯಲುಶೌಚಕ್ಕೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕುಖ್ಯಾತಿ ಪಡೆದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಶೌಚಾಲಯದ ಮಹತ್ವ, ಜಾಗೃತಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತದ ಸಾಧನೆ 2014 ರ ಬಳಿಕ ಪ್ರಶಂಸನೀಯವಾಗಿದೆ. ‘ಸ್ವಚ್ಛ ಭಾರತ ಅಭಿಯಾನ’ದಡಿ ಶೌಚಾಲಯದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಧನಸಹಾಯವನ್ನೂ ನೀಡುತ್ತಿದೆ. ಇದಕ್ಕಾಗಿ ಅಭಿಯಾನದ ಮೂಲಕ ಐದು ವರ್ಷಗಳಲ್ಲಿ 11.1 ಕೋಟಿ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ.

ಒಟ್ಟು 132 ಲಕ್ಷ ಕೋಟಿಯನ್ನು ಶೌಚಾಲಯ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಇದು ಜಗತ್ತಿನ ಯಾವುದೇ ದೇಶದಲ್ಲಿ ಯಾವುದೇ ಸರ್ಕಾರ ಐದು ವರ್ಷದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಹಾಕಿಕೊಂಡ ಅತಿದೊಡ್ಡ ಗುರಿ. ಆದ್ದರಿಂದ ಭಾರತದಲ್ಲಿ ಶೌಚಾಲಯ ಕ್ರಾಂತಿ ನಡೆಯುತ್ತಿದೆ ಎಂದು ಜಗತ್ತು ಗುರುತಿಸಿದೆ. 2019 ರ ಅಕ್ಟೋಬರ್ ಒಳಗೆ ಎಲ್ಲರಿಗೂ ಶೌಚಾಲಯ ಇರಬೇಕು ಎಂಬ ಗುರಿ ಸಾಧಿಸುವಲ್ಲಿ ಭಾರತ ನಿರೀಕ್ಷಿತ ಪ್ರಗತಿ ತೋರಿಸುತ್ತಿದೆ. ಒಂದು ವರದಿಯ ಪ್ರಕಾರ 2018 ರ ಡಿಸೆಂಬರ್ ಒಳಗೆ ಈ ಗುರಿ ಮುಟ್ಟುವ ಸಾಧ್ಯತೆಗಳು ಹೆಚ್ಚಿವೆ.

ಭಾರತದ ಗ್ರಾಮೀಣ ವ್ಯಾಪ್ತಿಯಲ್ಲಿ ಜನರಿಗೆ ಉದ್ಯೋಗ ನೀಡಲು ಆರಂಭಿಸಿದ್ದ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಿಸುವುದನ್ನೂ ಸೇರಿಸಿದ್ದು, ಹೆಚ್ಚು ಅನುಕೂಲವಾಗಿದೆ. ಭಾರತ ಸರ್ಕಾರ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸುವ ಆಂದೋಲನವನ್ನೇ ಮಾಡುತ್ತಿದೆ. ಶೌಚಾಲಯ ನಿರ್ಮಾಣದ ಬಗೆಗಿನ ಕಳಕಳಿ ಭಾರತದಲ್ಲಿ ಚಲನಚಿತ್ರಕ್ಕೂ ಸ್ಫೂರ್ತಿಯಾಗಿದೆ. ನಟ ಅಕ್ಷಯ್‌ಕುಮಾರ್ ಅಭಿನಯದ ‘ಟಾಯ್ಲೆಟ್- ಏಕ್ ಪ್ರೇಮ್ ಕಥಾ’ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು.

ಉತ್ತರಾಖಂಡ, ಮೇಘಾಲಯ, ಗುಜರಾತ್, ಮಿಜೋರಂ, ಪಶ್ಚಿಮ ಬಂಗಾಳ, ಪಂಜಾಬ್, ಗೋವಾ, ಸಿಕ್ಕಿಂ, ತ್ರಿಪುರ ರಾಜ್ಯಗಳು ಶೌಚಾಲಯ ನಿರ್ಮಾಣ ಕಾರ‌್ಯದಲ್ಲಿ ಮಂಚೂಣಿಯಲ್ಲಿವೆ. 2017 ರಲ್ಲಿ ನಮ್ಮ ದೇಶದಲ್ಲಿ 3.5 ಕೋಟಿ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. 

ಕರ್ನಾಟಕದಲ್ಲಿ ಶೌಚ ಪ್ರಗತಿ ಹೇಗಿದೆ? ಸುರಕ್ಷಿ ತ ಶೌಚಾಲಯ ನಮಗೆ ಏಕೆ ಬೇಕು?

ಸ್ವಚ್ಛ ಭಾರತ ಅಭಿಯಾನ ಕರ್ನಾಟಕದಲ್ಲೂ ಉತ್ತಮ ಪರಿಣಾಮ ಬೀರಿದೆ. 2001 ರಲ್ಲಿ ಶೇ.17.4 ರಷ್ಟಿದ್ದ ಶೌಚಾಲಯಗಳ ನಿರ್ಮಾಣ ಪ್ರಗತಿ ದರ 20111 ರಲ್ಲಿ ಶೇ.28.4 ಕ್ಕೆ ತಲುಪಿತ್ತು. ಬಳಿಕ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆ, ಮೈಸೂರು, ಕೊಪ್ಪಳ ಜಿಲ್ಲೆಗಳು ಸಂಪೂರ್ಣ ಬಯಲು ಶೌಚಮುಕ್ತ ಎಂದು ಘೋಷಿಸಲ್ಪಟ್ಟಿವೆ.

ಕಳೆದ ವರ್ಷವೊಂದರಲ್ಲೇ ರಾಜ್ಯದಲ್ಲಿ ಒಟ್ಟು 34 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ. 2017ರಲ್ಲಿ ಇದಕ್ಕಾಗಿ 2,100 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ಅಂಕಿ ಅಂಶ ನೀಡಿದೆ. ರಾಜ್ಯದಲ್ಲಿರುವ ಒಟ್ಟು 27,623 ಗ್ರಾಮಗಳ ಪೈಕಿ ಸದ್ಯ 6829 ಗ್ರಾಮಗಳು ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮಗಳಾಗಿವೆ. ಸುರಕ್ಷಿತ ಶೌಚಾಲಯ ಮನುಷ್ಯನ ಆರೋಗ್ಯಕ್ಕೆ ಪೂರಕ. ಬಯಲಿನಲ್ಲಿ ಶೌಚ ಮಾಡುವುದರಿಂದ ಮನುಷ್ಯನ ಮಲದಿಂದ ಹರಡುವ ಕಾಯಿಲೆಗಳು, ಜೀವವನ್ನೇ ಕಸಿದುಕೊಳ್ಳುವಷ್ಟು ಮಾರಕವಾಗಿರುತ್ತವೆ. ಇಷ್ಟೇ ಅಲ್ಲದೆ ಸಾಂಕ್ರಾಮಿಕ ಕಾಯಿಲೆಗಳು ಹರಡಲೂ ಕಾರಣವಾಗುತ್ತವೆ.

ಇದರಿಂದ ಒಂದು ಪ್ರದೇಶದ ಎಲ್ಲ ಜನರ ಆರೋಗ್ಯವೇ ಏರುಪೇರಾಗುತ್ತದೆ. ಮನುಷ್ಯನ ಆರೋಗ್ಯವಷ್ಟೇ ಅಲ್ಲದೇ ಸಾಮಾಜಿಕ ಬೆಳವಣಿಗೆ, ದೇಶದ ಶೈಕ್ಷಣಿಕ, ಆರ್ಥಿಕ ವ್ಯವಸ್ಥೆಯ ಮೇಲೂ ಹೊಡೆತ ಬೀಳುತ್ತದೆ. ಬಯಲು ಶೌಚದಿಂದ ಹರಡುವ ಕಾಯಿಲೆಯಿಂದ ಮಕ್ಕಳು ಹೆಚ್ಚು ಸಮಸ್ಯೆ ಎದುರಿಸುತ್ತಾರೆ.

ಬೇರೆ ದೇಶಗಳ ಪರಿಸ್ಥಿತಿ ಹೇಗಿದೆ?

ಇಥಿಯೋಪಿಯಾ- ವಿಶ್ವದಲ್ಲಿ ಅತೀ ಹೆಚ್ಚು ಶೌಚಾಲಯದ ಕೊರತೆ ಎದುರಿಸುತ್ತಿರುವ ದೇಶ. ನಂತರ ಛಾಡ್, ಮಡಗಾ ಸ್ಕರ್, ದಕ್ಷಿಣ ಸುಡಾನ್, ಎರಿಟ್ರಿಯಾ ದೇಶಗಳು ಕ್ರಮವಾಗಿ ೫ ಸ್ಥಾನಗಳಲ್ಲಿವೆ. ಉಗಾಂಡಾ, ಭಾರತ, ಭೂತಾನ್, ಬುರ‌್ಕಿನಾ ಫಾಸೋ, ಮಲವಿ ದೇಶಗಳು ಮಕ್ಕಳಿಗೆ ಅತ್ಯುತ್ತಮ, ಸುರಕ್ಷಿತ ಶೌಚಾಲಯಗಳನ್ನು ಇತ್ತೀಚಿನ ವರ್ಷಗಳಲ್ಲಿ ಒದಗಿಸುತ್ತಿರುವ ದೇಶಗಳಾಗಿವೆ. ಈ ನಿಟ್ಟಿನಲ್ಲಿ ಭಾರತವು ಜಗತ್ತಿನಲ್ಲೇ ಹೆಚ್ಚು ಪ್ರಗತಿ ಸಾಧಿಸುತ್ತಿದೆ.

ವಿಶ್ವ ಸಂಸ್ಥೆಯ ಗುರಿ

2030 ರ ವೇಳೆಗೆ ವಿಶ್ವದ ಎಲ್ಲ ವ್ಯಕ್ತಿಯೂ ಸುರಕ್ಷಿತ ಶೌಚಾಲಯ ಹೊಂದುವಂತೆ ಮಾಡುವುದು ವಿಶ್ವ ಸಂಸ್ಥೆಯ ಗುರಿ. ಇದಕ್ಕಾಗಿ ಸಮರ್ಥನೀಯ ಬೆಳವಣಿಗೆ ಗುರಿ - (ಎಸ್‌ಜಿಡಿ-೬) ಹಾಕಿಕೊಂಡಿದೆ. ತನ್ನ ಸದಸ್ಯ ರಾಷ್ಟ್ರಗಳಲ್ಲಿ ಶೌಚಾಲಯದ ಬಗ್ಗೆ ಅರಿವು ಮೂಡಿಸುವುದಕ್ಕೆಂದೇ ವಿಶ್ವಸಂಸ್ಥೆಯು ವಿಶ್ವ ಶೌಚಾಲಯ ದಿನ ಆಚರಿಸುತ್ತಿದೆ. ವಿಶ್ವ ಶೌಚಾಲಯ ದಿನ ಆಚರಣೆ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೌಚಾಲಯದ ಮಹತ್ವ, ಜಾಗೃತಿ, ಅರಿವು ಮೂಡಿಸುವ ಉದ್ದೇಶವಿದೆ.  2001 ರಲ್ಲಿ ವಿಶ್ವಸಂಸ್ಥೆಯಡಿ ವಿಶ್ವ ಶೌಚಾಲಯ ಸಂಸ್ಥೆ ಸ್ಥಾಪಿಸಲಾಯಿತು. ೨೦೧೩ರಲ್ಲಿ ವಿಶ್ವಸಂಸ್ಥೆಯು ಮಸೂದೆಯೊಂದನ್ನು ಮಂಡಿಸಿ, ನ.೧೯ನ್ನು ಅಂತಾರಾಷ್ಟ್ರೀಯ ಶೌಚಾಲಯ ದಿನವನ್ನಾಗಿ ಘೋಷಿಸಿತು.

ಪ್ರತಿದಿನ 5500 ಜನರ ಸಾವು!

ಶೌಚಾಲಯವಿಲ್ಲದ ಜನರು ನೇರವಾಗಿ ಬಯಲಿನಲ್ಲಿ ವಿಸರ್ಜನೆ ಮಾಡುತ್ತಾರೆ. ಅಲ್ಲದೇ ನೀರಿನ ಮೂಲಗಳಲ್ಲಿ ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಇದರಿಂದ ಅತಿಸಾರ, ಕಾಲರಾ, ಭೇದಿಯಂತಹ ಕಾಯಿಲೆಗಳು ಸಾಂಕ್ರಾಮಿಕವಾಗಿ ಹರಡುತ್ತವೆ. ಇದಿರಂದ ವಿಶ್ವದಲ್ಲಿ ಪ್ರತಿದಿನ 5,500 ಜನರು ಜೀವ ತೆರುತ್ತಿದ್ದಾರೆ. ಇದು ವಿಶ್ವ ಭಯಾನಕ ಕಾಯಿಲೆಗಳೆಂದು ಹೆಸರಾದ ಏಡ್ಸ್, ಮಲೇರಿಯಾ, ಕ್ಷಯದಿಂದ ಸಾಯುವವರ ಪ್ರಮಾಣಕ್ಕಿಂತ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ನಿತ್ಯ 800 ಮಕ್ಕಳ ಪ್ರಾಣಕ್ಕೆ ಕುತ್ತು

ಸುರಕ್ಷಿತ ಶೌಚಾಲಯವಿಲ್ಲದೆ ಪ್ರತಿದಿನ 800 ಮಕ್ಕಳು (ವರ್ಷದಲ್ಲಿ 2.92 ಲಕ್ಷ) ವಿಶ್ವದೆಲ್ಲೆಡೆ ಸಾವನ್ನಪ್ಪುತ್ತಿದ್ದಾರೆ. ಅತಿಸಾರ ಮತ್ತು ಕರುಳಿನ ಬೇನೆಯು ಪ್ರತಿವರ್ಷ ಅಂದಾಜು ೧.೪೦ ಲಕ್ಷ ಮಕ್ಕಳನ್ನು ಬಲಿ ಪಡೆಯುತ್ತಿದೆ.

 ಸ್ತ್ರೀಯರಿಗೆ ಸಮಸ್ಯೆ

ಶೌಚಾಲಯದ ಕೊರತೆ ಪುರುಷ ಮತ್ತು ಮಹಿಳೆಯರಿಗೆ ಸಮವಾಗಿ ಬಾಧಿಸುತ್ತದೆಯಾದರೂ ಮಹಿಳೆಯರು ಹೆಚ್ಚು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಗರ್ಭಿಣಿ ಮಹಿಳೆಯರ ಸ್ಥಿತಿ ಹೇಳತೀರದಾಗಿದೆ. ಸುರಕ್ಷಿತ ಶೌಚಾಲಯವಿಲ್ಲದೆ ಶೌಚಕ್ಕೆ ತೆರಳಲು ಮಹಿಳೆಯರು ಕತ್ತಲಾಗುವುದನ್ನೇ ಕಾಯುವಂತಾಗಿದೆ. ಇದು ಅವರ ಜೀವವನ್ನೇ ಸವಾಲಿಗೆ ಒಡ್ಡಿದಂತೆ. ರಾತ್ರಿ ವೇಳೆ ವಿಷ ಜಂತುಗಳ ದಾಳಿಯೂ ಮಹಿಳೆಯರಿಗೆ ಮಾರಕವಾಗಿದೆ.

ಜಾಗೃತಿ ಹೇಗಿದೆ?

ವಿಶ್ವದೆಲ್ಲೆಡೆ ಸುರಕ್ಷಿತ ಶೌಚಾಲಯದ ಬಗ್ಗೆ ಮೂಡಿಸುತ್ತಿರುವ ಜಾಗೃತಿ ಉತ್ತಮ ಫಲಿತಾಂಶ ನೀಡಲು ಆರಂಭಿಸಿದೆ. ಕಳೆದ 25 ವರ್ಷಗಳಲ್ಲಿ 210 ಕೋಟಿ ಜನರು ಶೌಚಾಲಯ ಕಟ್ಟಿಸಿಕೊಂಡಿದ್ದಾರೆ.