ತನ್ನದೇ ಸಚಿವ ಸಿಧು ತಪ್ಪಿತಸ್ಥ ಎಂದ ಪಂಜಾಬ್‌ ಸರ್ಕಾರ!

First Published 13, Apr 2018, 7:16 AM IST
Sidhu guilty accepts punjab government
Highlights

ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಒಪ್ಪಿದ ಸರ್ಕಾರ

ಸಚಿವ ಸಿಧುಗೆ ಕಂಟಕವಾಗಲಿದೆಯೇ 1988ರಲ್ಲಿ ನಡೆದ ಪ್ರಕರಣ?

ನವದೆಹಲಿ: ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣದಲ್ಲಿ ಸಚಿವ ನವಜೋತ್‌ ಸಿಂಗ್‌ ಸಿಧು ಅವರನ್ನು ತಪ್ಪಿತಸ್ಥ ಎಂಬ ಪಂಜಾಬ್‌ ಮತ್ತು ಹರ್ಯಾಣ ನ್ಯಾಯಾಲಯದ ತೀರ್ಪು ಸಮಂಜಸವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಪಂಜಾಬ್‌ ಸರ್ಕಾರ ಹೇಳಿದೆ. ಈ ಮೂಲಕ ಸಿಎಂ ಅಮರೀಂದರ್‌ ಸಿಂಗ್‌ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನದಲ್ಲಿರುವ ಸಿಧು ಅವರು ತಪ್ಪಿತಸ್ಥ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ.

ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ್‌ ಮತ್ತು ಸಂಜಯ್‌ ಕೌಲ್‌ ಅವರಿದ್ದ ಪೀಠಕ್ಕೆ ಮಾಹಿತಿ ನೀಡಿದ ಪಂಜಾಬ್‌ ಸರ್ಕಾರದ ಪರ ವಕೀಲ, ‘1988ರಲ್ಲಿ ಪಟಿಯಾಲ ನಿವಾಸಿಯಾದ ಗುರ್ನಾಮ್‌ ಸಿಂಗ್‌ ಅವರ ಸಾವಿಗೆ, ಸಿಧು ಅವರು ಬಿಗಿಮುಷ್ಟಿಯಿಂದ ಗುದ್ದಿರುವುದೇ ಕಾರಣ,’ ಎಂದು ಹೇಳಿದೆ. ಅಲ್ಲದೆ, ‘ಗುರ್ನಾಮ್‌ ಎಂಬುವರ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂಬುದಕ್ಕೆ ಯಾವುದೇ ಒಂದು ಪುರಾವೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಸಿಧು ತಪ್ಪಿತಸ್ಥ ಎಂಬ ಹೈಕೋರ್ಟ್‌ ಆದೇಶ ಸರಿಯಾಗಿಯೇ ಇದೆ,’ ಎಂದು ಹೇಳಿದೆ.

ಇದೇ ಪ್ರಕರಣ ಸಂಬಂಧ ಸಿಧು ಅವರು ತಪ್ಪಿತಸ್ಥ ಎಂಬ ಆದೇಶವನ್ನು ಅಮಾನತಿನಲ್ಲಿಟ್ಟಿದ್ದ ಸುಪ್ರೀಂ, ಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿತ್ತು. ಅಲ್ಲದೆ, ಇದಕ್ಕೂ ಮುನ್ನ ವಿಚಾರಣಾಧೀನಾ ನ್ಯಾಯಾಲಯದಿಂದ ಸಿಧು ಖುಲಾಸೆಯಾಗಿದ್ದರು. ಆದರೆ, ಪಂಜಾಬ್‌ ಹೈಕೋರ್ಟ್‌ ಸಿಧುರನ್ನು ದೋಷಿಯಾಗಿಸಿತ್ತು.

ಇನ್ನು ಕಾರ್ಯ ನಿಮಿತ್ತ ಹೈದರಾಬಾದ್‌ನಲ್ಲಿರುವ ಸಚಿವ ಸಿಧು, ಈ ಬಗ್ಗೆ ನಾನೇನೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಮತ್ತು ಅಡ್ವೋಕೇಟ್‌ ಜನರಲ್‌ ಉತ್ತರಿಸಬೇಕು ಎಂದು ಹೇಳಿದ್ದಾರೆ.

loader