ಬೀದರ್‌ :  ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಬಹುಕಾಲ ಮುರ್ಖರನ್ನಾಗಿಸಲು ಸಾಧ್ಯವಿಲ್ಲ, ಇನ್ನು ಅವರೇ ಮೂರ್ಖರಾಗುವ ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಕಾಂಗ್ರೆಸ್‌ ಆಯೋಜಿಸಿದ್ದ ಜನಧ್ವನಿ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯ ಸಾಧನೆ ಶೂನ್ಯ, ಬಾಯಿ ಬಡಾಯಿ ಅಷ್ಟೇ. ಅವರು ಕೊಟ್ಟಭರವಸೆಗಳೆಲ್ಲ ಸುಳ್ಳಾಗಿವೆ. ಎಲ್ಲ ರಂಗಗಳಲ್ಲೂ ಮೋದಿ ಸರ್ಕಾರ ವಿಫಲವಾಗಿದೆ. ಅವಿಶ್ವಾಸ ಮಂಡನೆ ಸಂದರ್ಭ ರಾಹುಲ್‌ ಗಾಂಧಿ ಅವರು ಮೋದಿ ಸರ್ಕಾರದ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಬೆತ್ತಲೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಳೆದ ಚುನಾವಣೆಯಲ್ಲಿ ಅನೇಕ ಸುಳ್ಳುಗಳನ್ನು ಹೇಳಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈ ಬಾರಿ ಯುವಕರಾದ ದಿನೇಶ ಗುಂಡೂರಾವ್‌ ಹಾಗೂ ಈಶ್ವರ ಖಂಡ್ರೆ ಅವರ ಕೈಗೆ ಕೆಪಿಸಿಸಿಯನ್ನು ನೀಡಿದ್ದರಿಂದ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಬಿಜೆಪಿಯಿಂದ ಗಿಮಿಕ್‌:

ದಲಿತರ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸುವಂಥ ತೀರ್ಪು ಸುಪ್ರೀಂ ಕೋರ್ಟ್‌ನಿಂದ ಹೊರಬಿದ್ದಾಗ ಬಾಯಿ ಬಿಚ್ಚದ ಮೋದಿ ಸರ್ಕಾರ ಇದೀಗ ಚುನಾವಣಾ ಗಿಮಿಕ್‌ ಎಂಬಂತೆ ದಲಿತರ ಮೂಗಿಗೆ ತುಪ್ಪ ಹಚ್ಚುವಲ್ಲಿ ತೊಡಗಿದ್ದನ್ನು ಶೋಷಿತರು ಅರ್ಥ ಮಾಡಿಕೊಳ್ಳಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು.

ಕೇಂದ್ರದ ಕುತಂತ್ರಗಳನ್ನು ಶೋಷಿತ ಸಮುದಾಯದವರು ತಿಳಿದುಕೊಂಡು ಎಚ್ಚೆತ್ತುಕೊಳ್ಳುವ ಕಾಲ ಬಂದೊದಗಿದೆ. ಕೇಂದ್ರ ಸರ್ಕಾರಕ್ಕೆ ಬಡವರು, ಶೋಷಿತರ ನಿಜ ಕಾಳಜಿ ಇದ್ದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿ, ಎಸ್‌ಸಿಪಿ, ಟಿಎಸ್‌ಪಿ ಅಡಿ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಅತೀ ಹೆಚ್ಚು ಅನುದಾನ ನೀಡಿದ ದೇಶದ ಎರಡನೇ ರಾಜ್ಯ ಕರ್ನಾಟಕ ಎಂದು ಸಿದ್ದರಾಮಯ್ಯ ತಿಳಿಸಿದರು.

ಮೋಸಗಾರ ಪ್ರಧಾನಿ :  ದೇಶಕ್ಕೆ ನರೇಂದ್ರ ಮೋದಿಯಂಥ ಮೋಸಗಾರರೊಬ್ಬರು ಪ್ರಧಾನಿಯಾಗಿರುವುದು ನಮ್ಮ ದುರಂತ. ಪ್ರಧಾನಿ ಮೋದಿಯವರ ಸ್ನೇಹಿರತೆಲ್ಲರೂ ದೇಶವನ್ನು ಲೂಟಿ ಮಾಡುವವರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಹಣವನ್ನು ಪ್ರಧಾನಿ ಮೋದಿ ಸ್ನೇಹಿತರು ಲೂಟಿ ಮಾಡಿಕೊಂಡು ವಿದೇಶಗಳಿಗೆ ಹಾರಿ ಹೋಗಿದ್ದಾರೆ. ಇದರ ಬಗ್ಗೆ ಮಾತನಾಡುವ ಬದಲು ಪ್ರಧಾನಿ ಅವರು ಕೇವಲ ‘ಮನ್‌ ಕಿ ಬಾತ್‌’ ಎನ್ನುತ್ತಿದ್ದಾರೆ. ಈ ‘ಮನ್‌ ಕಿ ಬಾತ್‌’ ಕೇಳಿಸಿಕೊಂಡವರು ಯಾರೂ ಉದ್ಧಾರವಾಗಿಲ್ಲ. ಕೇಂದ್ರ ಸರ್ಕಾರ ಬರೀ ಸುಳ್ಳು ಹೇಳುವ, ವಂಚನೆ ಮಾಡುವ ಸರ್ಕಾರವಾಗಿದೆ. ಸುಳ್ಳು ಹೇಳಿ ಜನರನ್ನು ಮೋಸ ಮಾಡುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗುರಿಯಾಗಿದೆ ಎಂದರು.