ಲಕ್ನೋ(ಜು.17): ಭೂವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಹತ್ತು ಮಂದಿಯನ್ನು ಗುಂಡಿಕ್ಕಿ ಕೊಂದಿರುವ ಘೋರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಸೋನಭದ್ರಾ ಜಿಲ್ಲೆಯ ಘೋರಾವಾಲ್’ನ ಉಬಾ ಗ್ರಾಮದಲ್ಲಿ ಯೋಗಾ ದತ್ತಾ ಎಂಬಾತ 36 ಎಕರೆ ಭೂಮಿ ಖರೀದಿಸಿದ್ದ. ಇಂದು ತನ್ನ ಜಾಗವನ್ನು ಪಡೆಯಲು ಆತ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದರಿಂದ ಕುಪಿತಗೊಂಡ ದತ್ತಾ ಬೆಂಬಲಿಗರು, ಗ್ರಾಮಸ್ಥರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ವೇಳೆ 10 ಜನ ಮೃತಪಟ್ಟು 24 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ಕುರಿತು ಮಾಹಿತಿ ಪಡೆದಿರುವ ಸಿಎಂ ಯೋಗಿ ಆದಿತ್ಯನಾಥ್, ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಆದೇಶ ನೀಡಿದ್ದಾರೆ.