ನವದೆಹಲಿ[ಮೇ.08]: ಮೈಸೂರು ಹುಲಿ ಖ್ಯಾತಿ ಟಿಪ್ಪು ಸುಲ್ತಾನ್‌ ಪುಣ್ಯಸ್ಮರಣೆ ದಿನವಾದ ಮೇ 4ರಂದು ಅವರನ್ನು ನೆನೆಸಿಕೊಂಡ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೊಗಳಿದ್ದಾರೆ. ಇದೇ ವೇಳೆ ಭಾರತದ ಅತ್ಯುತ್ತಮ ನಾಯಕನನ್ನು ಓರ್ವ ಪಾಕಿಸ್ತಾನಿ ನಾಯಕ ನೆನೆಪಿಸಿಕೊಳ್ಳಬೇಕಾಗಿ ಬಂದಿರುವುದು ನಿರಾಶಾದಾಯ ಸಂಗತಿ ಎಂದು ಪರೋಕ್ಷವಾಗಿ ಭಾರತೀಯರನ್ನು ದೂಷಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ತರೂರ್‌, ‘ಇಮ್ರಾನ್‌ ಖಾನ್‌ ಬಗ್ಗೆ ನನಗೆ ವೈಯಕ್ತಿಕವಾಗಿ ಗೊತ್ತಿರುವ ಒಂದು ವಿಷಯವೆಂದರೆ ಭಾರತೀಯ ಉಪಖಂಡದ ಇತಿಹಾಸದ ಕುರಿತ ಅವರ ಆಸಕ್ತಿ ಮತ್ತು ಆ ವಿಷಯ ಕುರಿತ ಅವರ ದೂರಾಲೋಚನೆ. ಇಮ್ರಾನ್‌ ಭಾರತೀಯ ಉಪಖಂಡದ ಇತಿಹಾಸವನ್ನು ಓದುತ್ತಾರೆ ಮತ್ತು ಅದರ ಬಗ್ಗೆ ಕಳಕಳಿ ಹೊಂದಿದ್ದಾರೆ.’ ಎಂದು ಹೇಳಿದ್ದಾರೆ.

ಮೇ 4ರಂದು ಟ್ವೀಟ್‌ ಮಾಡಿದ್ದ ಇಮ್ರಾನ್‌ ಖಾನ್‌, ‘18ನೇ ಶತಮಾನದಲ್ಲಿ ಮೈಸೂರು ಸಂಸ್ಥಾನದ ದೊರೆಯಾಗಿದ್ದ ಟಿಪ್ಪು ಸುಲ್ತಾನ್‌ ಅವರ ಪುಣ್ಯಸ್ಮರಣೆ ಇಂದು. ಗುಲಾಮಗಿರಿಗಿಂತ, ಹೋರಾಡುತ್ತಲೇ ಜೀವ ಬಿಡುವುದೇ ಲೇಸು ಎಂದು ನಂಬಿದ ಅವರ ಚಿಂತನೆಗಳಿಂದಾಗಿ ನಾನು ಅವರನ್ನು ಮೆಚ್ಚಿಕೊಳ್ಳುತ್ತೇನೆ’ ಎಂದು ಸ್ಮರಿಸಿದ್ದರು.