ಬೆಂಗಳೂರು[ನ.20]  ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಪ್ರಭಾಕರ ಭಟ್, ನಳೀನ್ ಕುಮಾರ್, ಸಂಜೀವ ಮಠಂದೂರು, ಮುರಳಿಕೃಷ್ಣ ಹಸಂತಡ್ಕ ಮೇಲಿನ ಪ್ರಕರಣವನ್ನು ಹೈಕೋರ್ಟ್ ವಜಾ ಮಾಡಿದೆ.

ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದ ಶರತ್ ಹತ್ಯೆಗೆ ಸಂಬಂಧಿಸಿ ಮಹಮದ್ ಷರೀಫ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.  2017ರ ಜುಲೈ 4ರಂದು ಬಂಟ್ವಾಳದ ಬಿಸಿ ರೋಡ್ ಬಳಿ ತನ್ನ ಲಾಂಡ್ರಿ ಅಂಗಡಿಯಲ್ಲಿದ್ದ ಶರತ್ ಮಡಿವಾಳ  ಅವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶರತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಈ ಪ್ರಕರಣ  ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿತ್ತು. ಹತ್ಯೆ ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಈ ಸಂದರ್ಭ ಬಿಜೆಪಿ ಜನಪ್ರತಿನಿಧಿಗಳ ಮೇಲೆ ಪ್ರಕರಣದ ದಾಖಲಾಗಿತ್ತು.