ನವದೆಹಲಿ (ಏ. 16):  ಮದುವೆ ಆಗುವುದಾಗಿ ನಂಬಿಸಿ ಮಹಿಳೆ ಜೊತೆ ನಡೆಸುವ ಒಪ್ಪಿತ ಲೈಂಗಿಕ ಲೈಂಗಿಕ ಕ್ರಿಯೆಯೂ ಅತ್ಯಾಚಾರವಾಗಲಿದೆ ಎಂದು ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿದೆ.

‘ಅತ್ಯಾಚಾರ ಎಂಬುದು ಸಮಾಜದಲ್ಲಿ ನೈತಿಕ ಮತ್ತು ದೇಹದ ಮೇಲೆ ನಡೆಸುವ ಹೇಯ ಕೃತ್ಯವಾಗಿದೆ. ಸಂತ್ರಸ್ತೆಯ ದೇಹ, ಸ್ಮರಣೆ ಮತ್ತು ಆಕೆಯ ಖಾಸಗಿತನದ ಮೇಲಿನ ದೌರ್ಜನ್ಯವಾಗಿದೆ. ಕೊಲೆಯು ಸಂತ್ರಸ್ತರನ್ನು ದೈಹಿಕವಾಗಿ ನಾಶ ಮಾಡುವುದಾಗಿದ್ದರೆ, ಅತ್ಯಾಚಾರಿಯು ಅಸಹಾಯಕ ಮಹಿಳೆಯ ಮನಸ್ಸಿನ ಮೇಲೆ ಕೆಟ್ಟಪರಿಣಾಮ ಬೀರುತ್ತಾನೆ. ಅತ್ಯಾಚಾರವು ಮಹಿಳೆಯ ಸ್ಥಾನಮಾನವನ್ನು ಪ್ರಾಣಿಗೆ ಕುಂದಿಸುತ್ತದೆ. ಆಕೆಯ ಜೀವನವನ್ನೇ ಅಲುಗಾಡಿಸುತ್ತದೆ,’ ಎಂದು ಹೇಳಿತು. ಅಲ್ಲದೆ, ಇಂಥ ಕೃತ್ಯ ಎಸಗುವ ಯಾವುದೇ ಅತ್ಯಾಚಾರಿಯು ಅದರ ಪರಿಣಾಮ ಎದುರಿಸಲೇಬೇಕು ಎಂದು ಹೇಳಿದೆ.

ಅಷ್ಟಕ್ಕೂ ಆಗಿದ್ದೇನು?

ಛತ್ತೀಸ್‌ಗಢ ಮೂಲದ ವೈದ್ಯರೊಬ್ಬರಿಗೆ 2009 ರಲ್ಲಿ ಬಿಲಾಸ್‌ಪುರದ ಕೋಣಿ ಮೂಲದ ಮಹಿಳೆಯೊಬ್ಬರ ಜೊತೆ ಸ್ನೇಹ ಬೆಳೆದಿತ್ತು. ಈ ಸ್ನೇಹವು 2013ರ ಹೊತ್ತಿಗೆ ಪ್ರೀತಿಯಾಗಿ ಬದಲಾಗಿದ್ದು, ಈ ವೇಳೆ ವೈದ್ಯ, ತನ್ನನ್ನು ಮದುವೆಯಾಗುವುದಾಗಿ ಹೇಳಿ ಮಹಿಳೆ ಜೊತೆ ಸಂಭೋಗ ನಡೆಸಿದ್ದ.

ಏತನ್ಮಧ್ಯೆ, ವೈದ್ಯನು ಮತ್ತೋರ್ವ ಮಹಿಳೆಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ. ಅಲ್ಲದೆ, ಮೊದಲಿನ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯು ದೂರು ಸಲ್ಲಿಸಿದ್ದರು.