ಬೆಂಗಳೂರು :  ನಾಲ್ಕು ದಿನಗಳ ಹಿಂದೆ ವಿಧಾನಸೌಧದ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿಅವರ ಆಪ್ತ ಸಹಾಯಕ ಮೋಹನ್‌ ಬಳಿ ಪತ್ತೆಯಾದ 25.76 ಲಕ್ಷ ನಗದು ಸಚಿವರಿಗೆ ಗುತ್ತಿಗೆದಾರರ ಮೂಲಕ ಸಂದಾಯವಾಗಲಿದ್ದ ‘ಕಮಿಷನ್‌ ಹಣ’ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಈ ಪ್ರಕರಣದ ವಿಚಾರಣೆ ವೇಳೆ ಸಚಿವರಿಗೆ ಗುತ್ತಿಗೆದಾರರ ಪರವಾಗಿ ಹಣ ತಲುಪಿಸಲು ತೆರಳುವಾಗ ಸಿಕ್ಕಿಬಿದ್ದಿದ್ದಾಗಿ ಮೋಹನ್‌ ಸ್ಫೋಟಕ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ. ಇನ್ನೊಂದೆಡೆ ಲಂಚದ ಹಣ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳವು ತನಿಖೆ ಕೈಗೆತ್ತಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಈ ಹಣವನ್ನು ಸಚಿವರ ಸ್ವಕ್ಷೇತ್ರವಾದ ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ನಡೆದಿದ್ದ ಒಳಚರಂಡಿ ಮತ್ತು ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ನೀಡಿದ್ದು, ಕಾಮಗಾರಿಗೆ ಪ್ರತಿಯಾಗಿ ಸಚಿವರಿಗೆ ಕಮಿಷನ್‌ ಕೊಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಮೋಹನ್‌ ಹೇಳಿಕೆ ವಿವರ :  ಕಳೆದ 12 ವರ್ಷಗಳಿಂದ ನಾನು ಸಚಿವಾಲಯದಲ್ಲಿ ಹೊರ ಗುತ್ತಿಗೆ ನೌಕರನಾಗಿದ್ದು, ಪ್ರಸ್ತುತ ಹಿಂದುಳಿದ ವರ್ಗಗಳ ಕಲ್ಯಾಣ ಮಂತ್ರಿ ಪುಟ್ಟರಂಗಶೆಟ್ಟಿಅವರ ಕಚೇರಿಯಲ್ಲಿ ಟೈಪಿಸ್ಟ್‌ ಕಮ್‌ ಆಪ್ತ ಸಹಾಯಕನಾಗಿದ್ದೇನೆ. ನನ್ನ ಕುಟುಂಬದ ಜತೆ ವೈಯಾಲಿಕಾವಲ್‌ ಸಮೀಪದ ಸ್ವಿಮ್ಮಿಂಗ್‌ ಫೂಲ್ ಬಡಾವಣೆಯಲ್ಲಿ ನೆಲೆಸಿದ್ದೇನೆ. ಎಂದಿನಂತೆ ಗುರುವಾರ (ಜ.3) ವಿಧಾನಸೌಧದಲ್ಲಿರುವ ಕಚೇರಿಗೆ ಕೆಲಸಕ್ಕೆ ಬಂದಿದ್ದೆ. ಆಗ ಗುತ್ತಿಗೆದಾರರ ಪರವಾಗಿ ಅನಂತು ಎಂಬಾತ 3.60 ಲಕ್ಷವನ್ನು ವಿಧಾನಸೌಧದ ಕೊಠಡಿ ಸಂಖ್ಯೆ 339ರ ಮುಂಭಾಗದ ಕಾರಿಡಾರ್‌ನಲ್ಲಿ ಭೇಟಿಯಾಗಿ ನನಗೆ ಕೊಟ್ಟು ಹೋಗಿದ್ದ. ಅಂದು ಆ ಹಣವನ್ನು ಕಚೇರಿಯಲ್ಲೇ ಗೌಪ್ಯವಾಗಿಟ್ಟು ಸಂಜೆ ಮನೆಗೆ ಒಯ್ದಿದ್ದೆ ಎಂದು ಮೋಹನ್‌ ಹೇಳಿರುವುದಾಗಿ ಗೊತ್ತಾಗಿದೆ.

ಮರು ದಿನ (ಜ.4 ರಂದು ಶುಕ್ರವಾರ) ನಾನು ಕಚೇರಿಗೆ ಬಂದಾಗ ಬೆಳಗ್ಗೆ 10ರ ಸುಮಾರಿಗೆ ಮೊಬೈಲ್‌ಗೆ ನಂದು ಎಂಬಾತನಿಂದ ಕರೆ ಬಂದಿತು. ಆತ ನನಗೆ ಶಾಸಕರ ಭವನ ಗೇಟ್‌ ಬಳಿ ಬರುವಂತೆ ಹೇಳಿದ್ದ. ಬಳಿಕ ಅಲ್ಲಿ ನಂದು, ನನಗೆ 15.9 ಲಕ್ಷ ಕೊಟ್ಟಿದ್ದ. ಸಂಜೆ ನನ್ನ ಭೇಟಿಯಾದ ಸ್ನೇಹಿತ ಮಂಜು, ತನ್ನ ಸಂಬಂಧಿ ಶ್ರೀನಿಧಿ ಅವರಿಂದ ಹೈಕೋರ್ಟ್‌ ಮುಂಭಾಗದ ಅಂಬೇಡ್ಕರ್‌ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ 2 ಲಕ್ಷ ಕೊಡಿಸಿದ್ದ. ಅದೇ ದಿನ ಕೃಷ್ಣಮೂರ್ತಿ ಎಂಬಾತ ಸಹ ವಿಧಾನಸೌಧ ಕೊಠಡಿ ಸಂಖ್ಯೆ 339ರ ಕಾರಿಡಾರ್‌ ಬಳಿ 4.26 ಲಕ್ಷ ಕೊಟ್ಟಿದ್ದ. ಅವರ ಹಣವನ್ನೆಲ್ಲ ಕಚೇರಿಗೆ ತೆಗೆದುಕೊಂಡು ಬಂದಿದ್ದೆ ಎಂದು ಮೋಹನ್‌ ವಿವರಿಸಿದ್ದಾನೆ.

ಬಳಿಕ ಪ್ಲಾಸ್ಟಿಕ್‌ ಕವರ್‌ ಹಾಗೂ ಸಚಿವರಿಗೆ ಹೊಸ ವರ್ಷದ ಶುಭಾಶಯ ಕೋರಿ ಬಂದಿದ್ದ ಗ್ರೀಟಿಂಗ್‌ ಕವರ್‌ನಲ್ಲಿ ಆ ಹಣವನ್ನೆಲ್ಲ ಹಾಕಿ ಬ್ಯಾಗ್‌ನಲ್ಲಿಟ್ಟುಕೊಂಡಿದ್ದೆ. ಈ ಹಣವನು ಸಚಿವ ಪುಟ್ಟರಂಗಶೆಟ್ಟಿಅವರಿಗೆ ಲಂಚವಾಗಿ ನೀಡಿ, ಗುತ್ತಿಗೆದಾರರ ಕೆಲಸಗಳನ್ನು ಮಾಡಿಕೊಡುವಂತೆ ಪ್ರೇರೇಪಿಸುವ ಸಲುವಾಗಿ ಅವರ ಬಳಿಗೆ ತೆಗೆದುಕೊಂಡು ಹೊರಟಿದ್ದೆ. ವಿಧಾನಸೌಧ ಗೇಟ್‌ನಲ್ಲಿ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದೆ ಎಂದು ಮೋಹನ್‌ ಹೇಳಿಕೆ ಕೊಟ್ಟಿರುವುದಾಗಿ ಗೊತ್ತಾಗಿದೆ.