ನವದೆಹಲಿ (ಜ. 15):  2016ರ ಫೆಬ್ರವರಿಯಲ್ಲಿ ದಿಲ್ಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಮೆರವಣಿಗೆಯೊಂದರ ವೇಳೆ ಕೇಳಿ ಬಂದಿದ್ದವು ಎನ್ನಲಾದ ದೇಶದ್ರೋಹಿ ಘೋಷಣೆಗಳಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ವಿದ್ಯಾರ್ಥಿ ಒಕ್ಕೂಟದ ಮುಖಂಡರಾಗಿದ್ದ ಕನ್ಹಯ್ಯಾ ಕುಮಾರ್‌ ಹಾಗೂ ಇತರ 36 ಜನರ ವಿರುದ್ಧ ಸೋಮವಾರ ಆರೋಪಪಟ್ಟಿಸಲ್ಲಿಸಿದ್ದಾರೆ. ಆರೋಪಪಟ್ಟಿಯಲ್ಲಿ ಈ ಎಲ್ಲರ ವಿರುದ್ಧ ದೇಶದ್ರೋಹ ಆಪಾದನೆ ಹೊರಿಸಲಾಗಿದೆ.

ಇದೇ ವೇಳೆ ಜೆಎನ್‌ಯುನ ಮಾಜಿ ವಿದ್ಯಾರ್ಥಿಗಳಾದ ಉಮರ್‌ ಖಾಲಿದ್‌, ಅನಿರ್ಬನ್‌ ಭಟ್ಟಾಚಾರ್ಯ ವಿರುದ್ಧ ಕೂಡ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯಕ್ಕೆ 1200 ಪುಟಗಳ ಆರೋಪಪಟ್ಟಿಸಲ್ಲಿಸಲಾಗಿದೆ. ಸಂಸತ್‌ ಭಯೋತ್ಪಾದಕ ದಾಳಿಯ ರೂವಾರಿ ಅಫ್ಜಲ್‌ ಗುರುವಿಗೆ ವಿಧಿಸಲಾದ ಗಲ್ಲು ಶಿಕ್ಷೆ ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇವರು ದೇಶದ್ರೋಹಿ ಘೋಷಣೆಗಳನ್ನು ಕೂಗಿದ ಆರೋಪ ಹೊರಿಸಲಾಗಿದೆ.

ಮೆರವಣಿಗೆಯದ್ದು ಎನ್ನಲಾದ ಕೆಲವು ವಿಡಿಯೋ ಕ್ಲಿಪ್‌ಗಳು ಪೊಲೀಸರಿಗೆ ಲಭ್ಯವಾಗಿದ್ದವು. ಇದರಲ್ಲಿ ಕನ್ಹಯ್ಯಾ ಹಾಗೂ ಇತರರು ದೇಶದ್ರೋಹಿ ಘೋಷಣೆಗಳನ್ನು ಕೂಗಿದ್ದು ಚಿತ್ರಿತವಾಗಿತ್ತು ಎನ್ನಲಾಗಿತ್ತು. ‘ಸಾಕ್ಷಿಗಳ ಹೇಳಿಕೆಗೂ, ವಿಡಿಯೋ ತುಣುಕಿನಲ್ಲಿನ ದೃಶ್ಯಗಳಿಗೂ ಸಾಮ್ಯತೆ ಇದೆ. ನೆರೆದಿದ್ದ ಜನರಿಗೆ ಕನ್ಹಯ್ಯಾ ಅವರು ದೇಶದ್ರೋಹಿ ಘೋಷಣೆ ಕೂಗುವಂತೆ ಪ್ರೇರೇಪಿಸಿದರು’ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

ಯಾವ ಆರೋಪಗಳು?:

ಆಪಾದಿತರ ಮೇಲೆ ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 124ಎ (ದೇಶದ್ರೋಹ), 323 (ಭಾವನೆಗಳಿಗೆ ಧಕ್ಕೆ ತರುವುದು), 465 (ಫೋರ್ಜರಿ), 471 (ತಿರುಚಿದ ವಿಡಿಯೋ ಪ್ರಸಾರ), 143 (ಅಕ್ರಮವಾಗಿ ಗುಂಪುಗೂಡುವಿಕೆ), 147 (ಗಲಭೆ ಸೃಷ್ಟಿ), 120ಬಿ (ಕ್ರಿಮಿನಲ್‌ ಸಂಚು) ಅಡಿ ಆರೋಪ ಹೊರಿಸಲಾಗಿದೆ.

ಶೆಹ್ಲಾ ರಶೀದ್‌ ಪಾರು:

ಇದೇ ವೇಳೆ ಸಾಕ್ಷ್ಯಾಧಾರ ಕೊರತೆ ಕಾರಣ ಸಿಪಿಐ ಮುಖಮಡ ಡಿ. ರಾಜಾ ಅವರ ಪುತ್ರಿ ಅಪರಾಜಿತಾ, ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್‌ ಸೇರಿದಂತೆ ಒಟ್ಟು 36 ಮಂದಿ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ದೇಶದ್ರೋಹ ಆರೋಪದಿಂದ ಬಚಾವಾಗಿದ್ದಾರೆ.

ಸುಳ್ಳು ಆರೋಪ: ಕನ್ಹಯ್ಯಾ

ನಮ್ಮ ವಿರುದ್ಧ ಹೊರಿಸಲಾದ ಆಪಾದನೆಗಳು ಸುಳ್ಳು. ಇವು ರಾಜಕೀಯ ಪ್ರೇರಿತ ಆರೋಪಗಳು. ಆದಾಗ್ಯೂ ಆರೋಪ ಹೊರಿಸಿದ್ದು ಒಳ್ಳೇದೇ ಆಯ್ತು. ಕೋರ್ಟ್‌ ವಿಚಾರಣೆ ವೇಳೆ, ನಮ್ಮ ವಿರುದ್ಧ ಪೊಲೀಸರು ಹಾಜರುಪಡಿಸಿದ ವಿಡಿಯೋಗಳ ಸಾಚಾತನವನ್ನು ನಾವು ಪ್ರಶ್ನಿಸುತ್ತೇವೆ. ತ್ವರಿತ ವಿಚಾರಣೆ ನಡೆದು, ಆರೋಪಮುಕ್ತರಾಗುವ ವಿಶ್ವಾಸವಿದೆ.

- ಕನ್ಹಯ್ಯಾ ಕುಮಾರ್‌, ವಿದ್ಯಾರ್ಥಿ ಮುಖಂಡ