ಪುಣೆ(ಜ.27): ಪ್ರಧಾನಿ ನರೇಂದ್ರ ಮೋದಿ ಅವರ ಜ.29ರಂದು ನಿಗದಿಯಾಗಿರುವ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮವನ್ನು ಎಲ್ಲ ಮಹಾರಾಷ್ಟ್ರದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ರಾಜ್ಯದ ಶಿಕ್ಷಣ ಸಚಿವಾಲಯ ಆದೇಶ ನೀಡಿದೆ.

ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮವನ್ನು ವೀಕ್ಷಿಸುವ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳ ಕಾರ್ಯಕ್ರಮ ವೀಕ್ಷಣೆ ಮಾಡಿದ ವಿವರವಿರುವ ವರದಿಯನ್ನು ಎಲ್ಲ ಶಾಲೆಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಜಿಲ್ಲೆಯ ಅಧಿಕಾರಿಗಳಿಗೆ ಸಲ್ಲಿಸಬೇಕು. ಒಂದು ವೇಳೆ ಶಿಕ್ಷಣ ಇಲಾಖೆಯ ಸೂಚನೆ ಪಾಲಿಸುವಲ್ಲಿ ಯಾವುದೇ ಶಾಲೆಯು ವಿಫಲವಾದಲ್ಲಿ, ಶಿಕ್ಷಣಾಧಿಕಾರಿಗಳೇ ಅದರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಜ.21ರಂದು ಮಹಾರಾಷ್ಟ್ರ ರಾಜ್ಯ ಶಿಕ್ಷಣ ಸಂಶೋಧನೆಯ ಕೌನ್ಸಿಲ್‌ ಮತ್ತು ತರಬೇತಿ ಹೊರಡಿಸಿದ ಅಧಿಸೂಚನೆಯಲ್ಲಿ ಎಚ್ಚರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಲ್ಕತೋರಾ ಕ್ರೀಡಾಂಗಣದಲ್ಲಿ ಜ.29ರಂದು ಬೆಳಗ್ಗೆ 11 ಗಂಟೆಯಿಂದ 1 ಗಂಟೆವರೆಗೂ 9ರಿಂದ 12ನೇ ತರಗತಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮವು ಟೀವಿಯಲ್ಲಿ ನೇರ ಪ್ರಸಾರ, ಯೂಟ್ಯೂಬ್‌ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಹಾಗೂ ರೇಡಿಯೋಗಳಲ್ಲಿ ಪ್ರಸಾರವಾಗುತ್ತದೆ. ಈ ಕಾರ್ಯಕ್ರಮವನ್ನು ರಾಜ್ಯದ ಶಾಲಾ ಮಕ್ಕಳಿಗೂ ತೋರಿಸಬೇಕು ಎಂಬುದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸರ್ಕಾರದ ಕಾಳಜಿಯಾಗಿದೆ.