Asianet Suvarna News Asianet Suvarna News

ಮಂಡ್ಯ ಲೋಕಸಭೆ ಚುನಾವಣೆ ವೇಳೆ ಇಬ್ಬರು ಸ್ಟಾರ್ ನಟರ ಫೋನ್ ಕದ್ದಾಲಿಕೆ?

ಫೋನ್‌ ಕದ್ದಾಲಿಕೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಉಂಟು ಮಾಡಿರುವ ಬೆನ್ನಲ್ಲೇ, ಸ್ಟಾರ್ ನಟರಿಬ್ಬರ ಫೋನ್ ಕೂಡ ಕದ್ದಾಲಿಕೆ ಮಾಡಲಾಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ. 

Sandalwood stars Darshan and Yash phones were trapped during Loksabha Election 2019
Author
Bengaluru, First Published Aug 16, 2019, 10:57 AM IST

ಬೆಂಗಳೂರು [ಆ.16]:  ಪೊಲೀಸ್‌ ಅಧಿಕಾರಿಗಳು, ರಾಜಕಾರಣಿಗಳ ಫೋನ್‌ ಕದ್ದಾಲಿಕೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಉಂಟು ಮಾಡಿರುವ ಬೆನ್ನಲ್ಲೇ, ಇದೀಗ ‘ಸ್ಯಾಂಡಲ್‌ವುಡ್‌’ನ ಖ್ಯಾತ ನಟರು, ನಿರ್ಮಾಪಕರ ದೂರವಾಣಿ ಕರೆಗಳಿಗೂ ಕಳ್ಳಗಿವಿ ಇಡಲಾಗಿತ್ತು ಎಂದು ಹೇಳಲಾಗುತ್ತಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸುಮಲತಾ ಅಂಬರೀಷ್‌ ಅವರ ಬೆಂಬಲಕ್ಕೆ ನಿಂತಿದ್ದ ಬಹುತೇಕ ಮಂದಿಯ ಫೋನ್‌ ಕದ್ದಾಲಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ತಮ್ಮ ಫೋನ್‌ ಕದ್ದಾಲಿಕೆ ಮಾಡಲಾಗುತ್ತಿದ್ದು, ಗೂಢಚರ್ಯೆ ನಡೆಯುತ್ತಿದೆ ಎಂದು ಈ ಹಿಂದೆ ಚುನಾವಣಾ ಪ್ರಚಾರದ ವೇಳೆ ಸುಮಲತಾ ಆರೋಪಿಸಿದ್ದರು. ಅಲ್ಲದೆ, ಚುನಾವಣೆ ಆಯೋಗಕ್ಕೆ ದೂರು ನೀಡಿದ್ದರು. ಇದೀಗ ಪೋನ್‌ ಕದ್ದಾಲಿಕೆ ಪ್ರಕರಣ ಸುಮಲತಾ ಅವರ ಆರೋಪಕ್ಕೆ ಪುಷ್ಟಿನೀಡಿದಂತಾಗಿದೆ.

28 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯದಲ್ಲೇ ಗಮನಸೆಳೆದಿತ್ತು. ಕಣದಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರೆ, ಸ್ವಾಭಿಮಾನದ ಹೆಸರಿನಲ್ಲಿ ಸುಮಲತಾ ಅಂಬರೀಷ್‌ ಕಣದಲ್ಲಿದ್ದರು. ಸುಮಲತಾ ಅವರ ಬೆಂಬಲಕ್ಕೆ ಖ್ಯಾತ ನಟರಾದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ನಿಂತಿದ್ದರು. ಇಬ್ಬರು ನಟರು ಪಕ್ಷೇತರ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದದ್ದು, ಕುಮಾರಸ್ವಾಮಿ ಅವರ ನಿದ್ದೆಗೆಡಿಸಿತ್ತು. ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಆದಿಯಾಗಿ ಹಲವು ಮುಖಂಡರು ನೇರವಾಗಿ ದರ್ಶನ್‌ ಮತ್ತು ಯಶ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಸ್ವ ಕ್ಷೇತ್ರದಲ್ಲಿ ಬೀಡು ಬಿಟ್ಟ ಸಂಸದೆ ಸುಮಲತಾ

ಇದನ್ನೇ ಅಸ್ತ್ರವಾಗಿ ಮಾಡಿಕೊಂಡು ಸುಮಲತಾ ಹಾಗೂ ಬೆಂಬಲಿಗರು ಪ್ರಚಾರ ನಡೆಸಿದ್ದರು. ಇತ್ತ ದರ್ಶನ್‌, ಯಶ್‌ ಹೋದಲೆಲ್ಲಾ ಸಾವಿರಾರು ಜನ ಸೇರುತ್ತಿದ್ದದ್ದು ಎದುರಾಳಿ ಅಭ್ಯರ್ಥಿಯ ನಿದ್ದೆಗೆಡಿಸಿತ್ತು. ಶತಾಯಗತಾಯ ಪುತ್ರನನ್ನು ಗೆಲ್ಲಿಸಬೇಕೆಂದು ಪಣತೊಟ್ಟಿದ್ದ ಕುಮಾರಸ್ವಾಮಿ ಅವರು ಸುಮಾರು 21 ದಿನಗಳ ಕಾಲ ಸುಮಲತಾ, ದರ್ಶನ್‌, ಯಶ್‌, ಅಭಿಷೇಕ್‌ ಅಂಬರೀಷ್‌ ಸೇರಿದಂತೆ ಹಲವರ ಫೋನ್‌ ಟ್ಯಾಪಿಂಗ್‌ ಮಾಡಿಸಿದ್ದರು ಎನ್ನಲಾಗುತ್ತಿದೆ.

ಅಲ್ಲದೆ, ಚುನಾವಣೆ ವೇಳೆ ಸುಮಲತಾ ಅವರ ಪರ ಚುನಾವಣಾ ವೆಚ್ಚ ನೋಡಿಕೊಳ್ಳುತ್ತಿದ್ದರು ಎನ್ನಲಾದ ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ವಿಜಯ್‌ ಕಿರಗಂದೂರು, ಮಾಜಿ ಸಚಿವ ಚೆಲುವರಾಯಸ್ವಾಮಿ, ಸಚ್ಚಿದಾನಂದ, ನರೇಂದ್ರ ಸ್ವಾಮಿ, ಮಾಜಿ ಶಾಸಕ ಸೋಮಶೇಖರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಮಳವಳ್ಳಿ ಶಿವಣ್ಣ, ಸುಮಲತಾ ಅವರ ಚುನಾವಣೆ ಏಜೆಂಟ್‌ ಮದನ್‌ ಫೋನ್‌ ಕದ್ದಾಲಿಕೆ ಆಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್‌ ಅವರು ಗೆಲುವು ಸಾಧಿಸುವ ಮೂಲಕ ಇತಿಹಾಸಕ್ಕೆ ನಾಂದಿ ಹಾಡಿದ್ದರು.

Follow Us:
Download App:
  • android
  • ios