ನವದೆಹಲಿ(ನ.4): ಏನೇ ಆಗಲಿ ಇದೇ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಯೇ ಸಿದ್ಧ ಎಂದು ವಿಶ್ವ ಹಿಂದೂ ಪರಿಷತ್ ನ ಸಾಧ್ವಿ ಪ್ರಾಚಿ ಘೋಷಿಸಿದ್ದಾರೆ.

ಸುಪ್ರೀಂ ಕೋರ್ಟ್ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದಾಧ್ವಿ ಪ್ರಾಚಿ, ಇದು ನ್ಯಾಯಾಲಯದಿಂದ ಬಗೆಹರಿಯುವ ವಿವಾದ ಅಲ್ಲ ಎಂಬುದು ನಮಗೆ ಮನವರಿಕೆಯಾಗಿದೆ ಎಂದು ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ಯಾರ ನೆರವೂ ಬೇಡ ಎಂದಿರುವ ಸಾಧ್ವಿ ಪ್ರಾಚಿ,  ಪ್ರಭು ಶ್ರೀರಾಮಚಂದ್ರರ ಮಂದಿರವನ್ನು ಧಾಂ ಧೂಂ ಎಂದು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮುಂದಿನ ತಿಂಗಳ 6ರಂದು ನಾವು ಶಿಲಾನ್ಯಾಸ ಮಾಡಲಿದ್ದೇವೆ. ಹಿಂದೂಸ್ಥಾನದಲ್ಲಿರುವ ಹಿಂದೂಗಳು ಅಂದು ಅಯೋಧ್ಯೆಗೆ ಬರಬೇಕು, ರಾಮಮಂದಿರ ನಿರ್ಮಾಣ  ಅಂದೇ ಘೋಷಣೆಯಾಗಲಿದೆ ಎಂದು ಸಾಧ್ವಿ ಘೋಷಿಸಿದರು. 

ಅಗತ್ಯ ಬಿದ್ದಲ್ಲಿ 1992ರ ಶೈಲಿಯಲ್ಲಿ ಇನ್ನೊಂದು ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಆರ್ಎಸ್ಎಸ್ ನ ಮಹಾ ಕಾರ್ಯದರ್ಶಿ ಭಯ್ಯಾಜಿ ಜೋಶಿ ಹೇಳಿದ ಬೆನ್ನಲ್ಲೇ ಪ್ರಾಚಿ ಈ ಹೇಳಿಕೆ ನೀಡಿದ್ದಾರೆ.