ಬೆಂಗಳೂರು(ನ.05) ಸೋಶಿಯಲ್ ಮೀಡಿಯಾದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ರಾಸಲೀಲೆಯ ಪೋಸ್ಟರ್ ಒಂದು ವೈರಲ್ ಆಗಿದೆ?

ಹೀಗಿದ್ದೊಂದು ಸುದ್ದಿ ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ, ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಇಂಥ ಯಾವುದೇ ಸುದ್ದಿ ಆ ಪತ್ರಿಕೆಯಲ್ಲಿ ಪ್ರಕಟವೂ ಆಗಿಲ್ಲ ಹಾಗೂ ಇದು ಸುಳ್ಳು ಸುದ್ದಿ ಎಂದು ಸಚಿವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಫೇಸ್ ಬುಕ್ ಮತ್ತು ಟ್ವಿಟರ್‌ನಲ್ಲಿ 'ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಸೂಕ್ತ ತನಿಖೆಯಾಗಬೇಕು,' ಎಂದು ಸದಾನಂದ ಗೌಡ ಸೈಬರ್ ಅಪರಾಧ ವಿಭಾಗದ ಡಿಸಿಪಿ ಗಿರೀಶ್ ಗೆ ದೂರು ನೀಡಿದ್ದಾರೆ.

'ನನ್ನ ವಿರುದ್ಧ ಸಮಾಜಿಕ ಜಾಲಾತಾಣದಲ್ಲಿ ಕೆಲ ಕಿಡಿಗೇಡಿಗಳು ಅಶ್ಲೀಲವಾಗಿ ಬಿಂಬಿಸುತ್ತಿದ್ದಾರೆ. ಸಮಾಜಿಕ ಜಾಲತಾಣದಲ್ಲಿ  ಟ್ರೋಲ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಸಮಾಜಿಕ ಜಾಲಾತಾಣದಲ್ಲಿ ನನ್ನ ತೇಜೊವಧೆ ಮಾಡಲಾಗುತ್ತಿದೆ,' ಎಂದು ಅವರು ಆರೋಪಿಸಿದ್ದಾರೆ.

ಪ್ರಮುಖ ದಿನ ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟವಾದ ರೀತಿಯಲ್ಲಿಯೇ ತಂತ್ರಜ್ಞಾನ ಬಳಸಿ ಪೇಪರ್ ಕಟಿಂಗ್ ವೊಂದನ್ನು ಸಿದ್ಧ ಮಾಡಿ ಹರಿಬಿಡಲಾಗಿದೆ. ವಿಚಾರಿಸಿದರೆ ದಿನಪತ್ರಿಕೆಯಲ್ಲಿ ಅಂಥ ಯಾವುದೇ ಸುದ್ದಿ ಪ್ರಕಟವಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದು ದೂರಿನಲ್ಲಿ ಹೇಳಲಾಗಿದೆ.