Asianet Suvarna News Asianet Suvarna News

ಕಾಂಗ್ರೆಸ್ ಹೊಗಳಿದ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್

RSS 3 ದಿನಗಳ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದ ಮೋಹನ್ ಭಾಗ್ವತ್ ಅವರು ಕಾಂಗ್ರೆಸ್ ಅನ್ನು ಹೊಗಳಿದ್ದಾರೆ.  ‘ಭವಿಷ್ಯದ ಭಾರತ’ ವಿಷಯವಾಗಿ ಮಾತನಾಡಿದ ಭಾಗವತ್‌, ‘ಕಾಂಗ್ರೆಸ್‌ ರೂಪದಲ್ಲಿ ದೇಶದಲ್ಲಿ ಒಂದು ದೊಡ್ಡ ಆಂದೋಲನ (ಸ್ವಾತಂತ್ರ್ಯ ಹೋರಾಟ) ಸಂಘಟಿತವಾಯಿತು. ಅನೇಕ ಮಹಾಪುರುಷ ಸರ್ವಸ್ವ ತ್ಯಾಗಿಗಳನ್ನು ದೇಶಕ್ಕೆ ಅದು ನೀಡಿತು ಎಂದರು. 

RSS  Chief Mohan Bhagwat Praises Congress
Author
Bengaluru, First Published Sep 18, 2018, 9:11 AM IST

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್‌) ಪ್ರಮುಖ ಮೋಹನ್‌ ಭಾಗವತ್‌ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ ವಹಿಸಿದ ಪಾತ್ರ ಅತ್ಯಂತ ಅವಿಸ್ಮರಣೀಯವಾದದ್ದು ಎಂದು ಬಣ್ಣಿಸಿದ್ದಾರೆ. ಅಲ್ಲದೆ, ದೇಶಕ್ಕೆ ಕಾಂಗ್ರೆಸ್‌ ದೊಡ್ಡ ದೊಡ್ಡ ಮಹಾಪುರುಷರನ್ನು ಕೊಟ್ಟಿದೆ ಎಂದು ಸ್ಮರಿಸಿದ್ದಾರೆ.

ಇಲ್ಲಿನ ವಿಜ್ಞಾನ ಭವನದಲ್ಲಿ ಸೋಮವಾರ ಆರಂಭವಾದ ಸಂಘದ 3 ದಿನಗಳ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ‘ಭವಿಷ್ಯದ ಭಾರತ’ ವಿಷಯವಾಗಿ ಮಾತನಾಡಿದ ಭಾಗವತ್‌, ‘ಕಾಂಗ್ರೆಸ್‌ ರೂಪದಲ್ಲಿ ದೇಶದಲ್ಲಿ ಒಂದು ದೊಡ್ಡ ಆಂದೋಲನ (ಸ್ವಾತಂತ್ರ್ಯ ಹೋರಾಟ) ಸಂಘಟಿತವಾಯಿತು. ಅನೇಕ ಮಹಾಪುರುಷ ಸರ್ವಸ್ವ ತ್ಯಾಗಿಗಳನ್ನು ದೇಶಕ್ಕೆ ಅದು ನೀಡಿತು. ಈಗಲೂ ಈ ಮಹಾಪುರುಷರ ಪ್ರೇರಣೆ ನಮಗೆ ದಾರಿದೀಪವಾಗಿ ಕೆಲಸ ಮಾಡುತ್ತಿದೆ’ ಎಂದು ಪ್ರಶಂಸಿಸಿದರು. ಇದೇ ವೇಳೆ, ಭಾರತದಲ್ಲಿನ ವೈವಿಧ್ಯತೆಯನ್ನು ನಾವು ಗೌರವಿಸಬೇಕು. ಅದನ್ನುಆಚರಿಸಬೇಕು. ಸಮಾಜದ ವಿಘಟನೆಗೆ ಎಂದಿಗೂ ಅದು ಕಾರಣವಾಗಬಾರದು ಎಂದು ಅವರು ಕಳಕಳಿಯ ಮನವಿ ಮಾಡಿದರು.

ಸುಮಾರು 80 ನಿಮಿಷ ಭಾಷಣ ಮಾಡಿದ ಭಾಗವತ್‌ ಅವರು ಆರೆಸ್ಸೆಸ್‌ ಸ್ಥಾಪನೆಯಿಂದ ಹಿಡಿದು ಸ್ವಾತಂತ್ರ್ಯ ಸಂಗ್ರಾಮ ಹಾಗೂ ಪ್ರಸಕ್ತ ಸ್ಥಿತಿಯವರೆಗೂ ಮಾತನಾಡಿದರು. ಸಂಘವನ್ನು ಕಾಂಗ್ರೆಸ್‌ನ ಟೀಕಾಕಾರ ಎನ್ನಲಾಗುತ್ತದೆಯಾದರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಕಾಂಗ್ರೆಸ್‌ ಪಾತ್ರವನ್ನು ಭಾಗವತ್‌ ಶ್ಲಾಘಿಸಿದ್ದು ವಿಶೇಷವಾಗಿತ್ತು.

ಆರೆಸ್ಸೆಸ್‌ನ ಬಗ್ಗೆ ತಿಳಿವಳಿಕೆ ಮೂಡಿಸುವುದು ವಿಚಾರ ಸಂಕಿರಣದ ಧ್ಯೇಯ. ಸಮಾಜದ ಓರೆಕೋರೆಗಳನ್ನು ತಿದ್ದಿ ಸುಧಾರಣೆ ತರುವುದೇ ಸಂಘದ ಉದ್ದೇಶ. ಇಡೀ ಸಮಾಜವನ್ನೇ ತನ್ನದು ಎಂದು ಸಂಘದ ಕಾರ್ಯಕರ್ತ ಭಾವಿಸುತ್ತಾನೆ ಎಂದು ಅವರು ಹೇಳಿದರು.

ಪ್ರಮುಖರು ಗೈರು

ಕಾಂಗ್ರೆಸ್‌ ಸೇರಿದಂತೆ ಅನೇಕ ಪ್ರತಿಪಕ್ಷಗಳ ಮುಖಂಡರಿಗೆ ಆರೆಸ್ಸೆಸ್‌ ಆಹ್ವಾನ ನೀಡಿತ್ತಾದರೂ ವಿಚಾರ ಸಂಕಿರಣಕ್ಕೆ ಅವರಾರೂ ಬರಲಿಲ್ಲ. ಸಮಾಜವಾದಿ ಪಕ್ಷದ ಅಮರ್‌ ಸಿಂಗ್‌, ಮಾಜಿ ಬಿಜೆಡಿ ಸಂಸದ ಬೈಜಯಂತ ಜೈ ಪಾಂಡಾ ಮಾತ್ರ ಪ್ರತಿಪಕ್ಷಗಳಿಗೆ ಸೇರಿದವರಾಗಿದ್ದರು. ಇನ್ನು ಮನಿಶಾ ಕೊಯಿರಾಲಾ. ಅನು ಮಲಿಕ್‌, ನವಾಜುದ್ದೀನ್‌ ಸಿದ್ದಿಕಿ, ಭಾಗ್ಯಶ್ರೀ, ಹಂಸರಾಜ ಹಂಸ, ಮಧುರ್‌ ಭಂಡಾರ್ಕರ್‌ ಸೇರಿದಂತೆ ಅನೇಕ ತಾರಾಮಣಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Follow Us:
Download App:
  • android
  • ios