ನವದೆಹಲಿ[ಏ.20]: ಉತ್ತರ ಪ್ರದೇಶ ಮಾಜಿ ಸಿಎಂ ಎನ್‌.ಡಿ ತಿವಾರಿ ಅವರ ಪುತ್ರ ರೋಹಿತ್‌ ಶೇಖರ್‌ ಅವರು ಉಸಿರುಗಟ್ಟಿಸಾವನ್ನಪ್ಪಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಹತ್ಯೆ ಕೇಸ್‌ ದಾಖಲಿಸಿಕೊಳ್ಳಲಾಗಿದ್ದು, ಇದರ ತನಿಖೆಯನ್ನು ಅಪರಾಧ ವಿಭಾಗಕ್ಕೆ ರವಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ದೆಹಲಿಯ ಪ್ರತಿಷ್ಠಿತ ಏಮ್ಸ್‌ ಆಸ್ಪತ್ರೆಯ ಐವರು ಹಿರಿಯ ವೈದ್ಯರು ರೋಹಿತ್‌ ಅವರ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ್ದು, ಇದರಲ್ಲಿ ರೋಹಿತ್‌ ಅವರ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಇದೊಂದು ಅನೈಸರ್ಗಿಕ ಮತ್ತು ತತ್‌ಕ್ಷಣವೇ ಆಗಿರುವ ಸಾವು. ಇದು ಕೊಲೆಯ ವ್ಯಾಪ್ತಿಗೆ ಬರುತ್ತದೆ ಎಂದು ಏಮ್ಸ್‌ ಮರಣೋತ್ತರ ಪರೀಕ್ಷೆ ವಿಭಾಗದ ಮುಖ್ಯಸ್ಥ ಡಾ. ಸುಧೀರ್‌ ಗುಪ್ತಾ ತಿಳಿಸಿದರು.

ದೆಹಲಿಯ ಡಿಫೆನ್ಸ್‌ ಕಾಲೋನಿಯಲ್ಲಿರುವ ನಿವಾಸದಲ್ಲಿ ರೋಹಿತ್‌ ಶೇಖರ್‌ ಮಂಗಳವಾರ ನಿಗೂಢವಾಗಿ ಸಾವನ್ನಪ್ಪಿದ್ದರು. ಎನ್‌.ಡಿ ತಿವಾರಿ ಅವರೇ ತನ್ನ ತಂದೆ ಎಂಬುದನ್ನು ನಿರೂಪಿಸುವ ಸಲುವಾಗಿ ಕಳೆದ 6 ವರ್ಷಗಳಿಂದ ರೋಹಿತ್‌ ಅವರು ಕಾನೂನು ಸಮರ ಸಾರಿದ್ದರು. ಡಿಎನ್‌ಎ ಪರೀಕ್ಷೆಯಲ್ಲಿ ಶೇಖರ್‌, ತಿವಾರಿ ಅವರ ಅಕ್ರಮ ಸಂಬಂಧದಿಂದ ಜನಿಸಿದ ಮಗ ಎಂಬುದು ಸಾಬಿತಾಗಿತ್ತು. ಬಳಿಕ ಸ್ವತಃ ತಿವಾರಿ, ರೋಹಿತ್‌ರನ್ನು ತಮ್ಮ ಪುತ್ರ ಎಂದು ಒಪ್ಪಿಕೊಂಡಿದ್ದರು. ಕಳೆದ ವರ್ಷ ತಿವಾರಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.