ಕೊಚ್ಚಿ:  ಶತಮಾನದಲ್ಲೇ ಅತ್ಯಂತ ಭೀಕರ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿರುವ ಕೇರಳ ಸಹಜಸ್ಥಿತಿಗೆ ಮರಳಲು ಹಲವು ವರ್ಷಗಳೇ ಬೇಕಾಗಬಹುದು ಎಂದು ಹೇಳಲಾಗಿದೆ. ನೈಸರ್ಗಿಕ ವಿಕೋಪದಿಂದ 10 ಸಾವಿರ ಕಿ.ಮೀ. ಉದ್ದದ ಹೆದ್ದಾರಿ ಹಾಗೂ ರಸ್ತೆಗಳು ನಾಶವಾಗಿವೆ. ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ನಾಗರಿಕರ ಮನೆಗಳೂ ಸೇರಿದಂತೆ 1 ಲಕ್ಷ ಕಟ್ಟಡಗಳಿಗೆ ಹಾನಿಯಾಗಿದೆ. ಲಕ್ಷಾಂತರ ಹೆಕ್ಟೇರ್‌ನಲ್ಲಿ ಬೆಳೆದು ನಿಂತಿದ್ದ ಬೆಳೆ ಸರ್ವನಾಶವಾಗಿದೆ.

ಕೇರಳದಲ್ಲಿ ಪ್ರವಾಹ ಇಳಿಮುಖವಾಗಿದ್ದು, ಜನರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಆದರೆ, ಮನೆಗಳಲ್ಲಿ ವಿಷಕಾರಿ ನಾಗರಹಾವುಗಳು, ಮೊಸಳೆ ಮರಿಗಳು, ವೈಪರ್ ಹಾವುಗಳು, ಕ್ರಿಮಿಕೀಟಗಳು ಕಪಾಟು ಹಾಗೂ ವಾಷ್‌ಬೇಸಿನ್‌ಗಳಲ್ಲಿ ಸೇರಿಕೊಂಡಿವೆ. ಹಲವೆಡೆ ಹಾವು ಕಡಿತದ ಘಟನೆಗಳು ವರದಿಯಾಗಿದ್ದು, ಜನರು ಮನೆಗಳಿಗೆ ಮರಳಲು ಹೆದರುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ವನ್ಯಜೀವಿ ತಜ್ಞರ ನೆರವು ಪಡೆದಿದ್ದಾರೆ.