ತಿರುವನಂತಪುರ : ಕೇರಳದಲ್ಲಿ ಭಾರಿ ಸದ್ದು ಮಾಡಿದ್ದ ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಪಾದನೆ ಮೇಲೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ವಿರುದ್ಧ ಅಪರಾಧ ವಿಭಾಗದ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಇಬ್ಬರೂ ನಾಯಕರ ವಿರುದ್ಧ ತನಿಖೆ ನಡೆಸಲು ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಕರೀಂ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ವೊಂದನ್ನು ರಚನೆ ಮಾಡಲಾಗಿದೆ. 

"

ಇದರಿಂದಾಗಿ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಕಸಿವಿಸಿ ಅನುಭವಿಸುವಂತಾಗಿದೆ. ಸರಿತಾ ನಾಯರ್ ನೀಡಿದ್ದ ದೂರಿನ ಮೇರೆಗೆ ಇಬ್ಬರೂ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾನೂನು ಕ್ರಮ ಕೈಗೊಳ್ಳಲು ಬಿಡಿ ಎಂದು ಕೇರಳ ಡಿಜಿಪಿ ಲೋಕನಾಥ್ ಬೆಹರಾ ತಿಳಿಸಿದ್ದಾರೆ. 

ವೇಣುಗೋಪಾಲ್ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 354 (ಮಹಿಳೆ ಮೇಲೆ ಹಲ್ಲೆ) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಚಾಂಡಿ ವಿರುದ್ಧ ಸೆಕ್ಷನ್377 (ಅನೈಸರ್ಗಿಕ ಲೈಂಗಿಕ ಕ್ರಿಯೆ), 420 (ವಂಚನೆ) ಪ್ರಕರಣ ದಾಖಲು ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚಾಂಡಿ, ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ಶಬರಿಮಲೆ ಅಯ್ಯಪ್ಪ ದೇಗುಲ ವಿವಾದದಿಂದ ಜನರ ಗಮನ ಬೇರೆಡೆ ಸೆಳೆಯಲು ಎಡರಂಗದ ಸರ್ಕಾರ ಈ ಪ್ರಯತ್ನ ನಡೆಸಿದೆ ಎಂದು ದೂರಿದ್ದಾರೆ.