ಶ್ರೀನಗರ[ಜೂ.06]: ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಜಮ್ಮು ಮತ್ತು ಕಾಶ್ಮೀರದ ಕಲ್ಲು ತೂರಾಟಗಾರರು, ರಮ್ಜಾನ್‌ನ ಹಬ್ಬದ ದಿನವಾದ ಬುಧವಾರ ರಾಜ್ಯದ ಹಲವು ಕಡೆ ಹಿಂಸಾಚಾರ ನಡೆಸಿದ್ದಾರೆ. ಅಲ್ಲದೆ ಹಲವೆಡೆ ಪಾಕಿಸ್ತಾನ ಮತ್ತು ಐಸಿಸ್‌ ಉಗ್ರ ಸಂಘಟನೆಗಳಿಗೆ ಸೇರಿದ ಧ್ವಜ ಹಾಗೂ ಉಗ್ರರ ಭಾವಚಿತ್ರ ಪ್ರದರ್ಶಿಸುವ ಮೂಲಕ ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ.

ರಮ್ಜಾನ್‌ ದಿನವಾದ ಬುಧವಾರ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಯುವಕರ ಗುಂಪು, ಬಳಿಕ ಬೀದಿಗೆ ಇಳಿದು, ಭಾರೀ ಪ್ರಮಾಣದಲ್ಲಿ ಹಿಂಸಾಚಾರ ನಡೆಸಿದೆ. ಭದ್ರತಾ ಸಿಬ್ಬಂದಿ ಮತ್ತು ಅವರ ವಾಹನಗಳ ಮೇಲೆ ದುಷ್ಕರ್ಮಿಗಳ ಗುಂಪು ಕಲ್ಲು ತೂರಾಟ ನಡೆಸಿದೆ.

ಉತ್ತರ ಕಾಶ್ಮೀರದ ಸೋಪೋರ್‌, ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌, ಶ್ರೀನಗರ ಪಟ್ಟಣ ಸೇರಿದಂತೆ ಹಲವೆಡೆ ಕಲ್ಲು ತೂರಾಟ ನಡೆಸಲಾಗಿದೆ. ಇನ್ನು ಶ್ರೀನಗರದ ನೌಹಟ್ಟಾಪ್ರದೇಶದಲ್ಲಿ ಗುಂಪೊಂದು ನಿಷೇಧಿತ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ನಾಯಕ ಮಸೂದ್‌ ಅಜರ್‌ ಮತ್ತು ಸೇನೆಗೆ ಗುಂಡಿಗೆ ಬಲಿಯಾಧ ಝಾಕಿರ್‌ ಮೂಸಾನ ಫೋಟೋ ಪ್ರದರ್ಶಿಸಿದೆ. ಅಲ್ಲದೆ ಪಾಕಿಸ್ತಾನ ಮತ್ತು ಐಸಿಸ್‌ ಉಗ್ರ ಸಂಘಟನೆಗಳ ಧ್ವಜಗಳನ್ನೂ ಪ್ರದರ್ಶಿಸಲಾಗಿದೆ.