ಮೋದಿ ವಿರೋಧಿಸಿ ರಮ್ಯಾ ಎಡವಟ್ಟು!

First Published 12, Apr 2018, 11:18 PM IST
Ramy tweets against Kannadigas to oppose PM Modi
Highlights

- ಕಾವೇರಿ ಮಂಡಳಿ: ತಮಿಳರ ಪರ ಟ್ವೀಟ್‌

- ‘ಕನ್ನಡಿಗರ ವಿರುದ್ಧ’ ನಿಲುವಿನ ಕಳಂಕ

ಏನಿದು ವಿವಾದ?

- ಕಾವೇರಿ ಮಂಡಳಿಗಾಗಿ ತಮಿಳರಿಂದ ‘ಗೋ ಬ್ಯಾಕ್‌ ಮೋದಿ’ ಟ್ವೀಟ್‌ ಅಭಿಯಾನ

- ಇದನ್ನು ಬೆಂಬಲಿಸಿ ‘ಗಟ್ಟಿಮತ್ತು ಸ್ಪಷ್ಟವಾಗಿ’ ವಿರೋಧಿಸಿ ಎಂದು ರಮ್ಯಾ ಟ್ವೀಟ್‌

- ತಮಿಳರನ್ನು ಬೆಂಬಲಿಸಿ ಕನ್ನಡ ವಿರೋಧಿ ನಿಲುವು: ಪ್ರತಾಪ್‌ ಸಿಂಹ ಆಕ್ರೋಶ

ಮೈಸೂರು: ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮಾಡಿದ ಟ್ವೀಟ್‌ ಈಗ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಭೇಟಿ ವಿರೋಧಿಸಿ ತಮಿಳುನಾಡಿನಲ್ಲಿ ಗುರುವಾರ ನಡೆದ ‘ಗೋ ಬ್ಯಾಕ್‌ ಮೋದಿ’ ಹೋರಾಟ ಬೆಂಬಲಿಸಿ ಟ್ವೀಟ್‌ ಮಾಡುವ ಮೂಲಕ ‘ಕನ್ನಡಿಗ ವಿರೋಧಿ’ ನಿಲುವು ತಳೆದ ಆರೋಪಕ್ಕೆ ರಮ್ಯಾ ಗುರಿಯಾಗಿದ್ದಾರೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ಪ್ರತಾಪ್‌ ಸಿಂಹ, ಕಾಂಗ್ರೆಸ್‌ನಿಂದ ರಮ್ಯಾರನ್ನು ತಕ್ಷಣವೇ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಇದರ ನಡುವೆಯೇ ಪ್ರಧಾನಿ ಮೋದಿ ಅವರು ತಮಿಳುನಾಡಿಗೆ ಭೇಟಿ ನೀಡಿದ್ದರು. ಈ ವೇಳೆ ಕೆಲವರು ಕಪ್ಪು ಬಟ್ಟೆಪ್ರದರ್ಶಿಸಿ ‘ಗೋ ಬ್ಯಾಕ್‌ ಮೋದಿ’ ಎಂಬ ಘೋಷಣೆಯೊಂದಿಗೆ ಪ್ರತಿಭಟಿಸಿದ್ದರು. ಈ ಸುದ್ದಿಯನ್ನು ಮುಂದಿಟ್ಟುಕೊಂಡು ರಮ್ಯಾ ಅವರು ‘ಗೋ ಬ್ಯಾಕ್‌ ಮೋದಿ’ ಎಂಬ ಹ್ಯಾಷ್‌ ಟ್ಯಾಗ್‌ ಸೃಷ್ಟಿಸಿ ಗಟ್ಟಿಮತ್ತು ಸ್ಪಷ್ಟಧ್ವನಿಯಲ್ಲಿ ವಿರೋಧಿಸಿ ಎಂಬರ್ಥದಲ್ಲಿ ಟ್ವೀಟ್‌ ಮಾಡಿದ್ದರು. ಈ ಎಡವಟ್ಟಿನಿಂದಾಗಿ ಅವರೀಗ ಕಾವೇರಿ ಹೋರಾಟದಲ್ಲಿ ತಮಿಳುನಾಡು ಬೆಂಬಲಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಪ್ರತಾಪ್‌ ಕಿಡಿ: ಈ ಬಗ್ಗೆ ಟ್ವಿಟ್ಟರ್‌ನಲ್ಲೇ ಕಿಡಿಕಾರಿರುವ ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ ಸಿಂಹ, ‘ಕಾಂಗ್ರೆಸ್‌ನ ನಿಜ ಬಣ್ಣ ಈಗ ಬಯಲಾಗಿದೆ. ಕನ್ನಡಿಗರೇ, ಮಂಡ್ಯದ ಕಾವೇರಿ ತಾಯಿಯ ಮಕ್ಕಳೇ, ಕಾವೇರಿ ನಿರ್ವಹಣಾ ಮಂಡಳಿ ಬೇಕೆಂಬ ತಮಿಳರ ಹೋರಾಟಕ್ಕೆ ಬೆಂಬಲ ನೀಡಿದ ರಮ್ಯಾ ಮತ್ತು ಕಾಂಗ್ರೆಸ್‌ ನಮ್ಮ ರಾಜ್ಯಕ್ಕೆ ಬೇಕಾ’ ಎಂದು ಪ್ರಶ್ನಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನ್ನಡಿಗರ ಸ್ವಾಭಿಮಾನವನ್ನು ರಮ್ಯಾ ಕೆಣಕಿದ್ದಾರೆ. ಕಾಂಗ್ರೆಸ್‌ಗೆ ಸ್ವಲ್ಪವಾದರೂ ಕನ್ನಡ ಅಸ್ಮಿತೆ ಹಾಗೂ ಕನ್ನಡಿಗರ ಮೇಲೆ ಗೌರವವಿದ್ದರೆ ಕೂಡಲೇ ರಮ್ಯಾ ಅವರನ್ನು ಉಚ್ಚಾಟಿಸಬೇಕು’ ಎಂದು ಆಗ್ರಹಿಸಿದ್ದಾರೆ.

loader