ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನವೊಲಿಕೆಗೆ ಹೈಕಮಾಂಡ್ ಶೀಘ್ರ ಮುಂದಾಗದಿದ್ದರೆ ಕಾಂಗ್ರೆಸ್‌ನಿಂದ 20 ಮಂದಿ ಬಿಜೆಪಿಗೆ ಹೋದರೂ ಹೋಗಬಹುದು, ಸಮ್ಮಿಶ್ರ ಸರ್ಕಾರ ಎರಡು ದಿನದಲ್ಲಿ ಉರಳಲೂಬಹುದು ಎಂದು ಸಹೋದರ ಲಖನ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಸಮ್ಮಿಶ್ರ ಸರ್ಕಾರದ ಸಂಪುಟದಿಂದ ಕೈಬಿಟ್ಟ ಬಳಿಕ ಅಸಮಾಧಾನಗೊಂಡಿರುವ ರಮೇಶ್ ಮನವೊಲಿಕೆಗೆ ಸಚಿವ ಸತೀಶ್ ಜಾರಕಿ ಹೊಳಿ ಅವರನ್ನೊಬ್ಬರನ್ನೇ ನಿಯೋಜಿಸಿದರೆ ಸಾಲದು, ಪಕ್ಷದ ಮುಖಂಡರೂ ಅವರ ಮನವೊಲಿಸುವ ಪ್ರಯತ್ನ ನಡೆಸಬೇಕು. 

ಸ್ವತಃ ಸಿದ್ದರಾಮಯ್ಯ,ದಿನೇಶ ಗುಂಡೂರಾವ್  ಅವರು ರಮೇಶ್ ಮನವೊಲಿಕೆಗೆ ಮುಂದಾಗಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಶೀಘ್ರ ಎಚ್ಚೆತ್ತು ಕೊಳ್ಳಬೇಕು. ಇಲ್ಲದಿದ್ದರೆ ರಮೇಶ್ ಅವರ ಜತೆಗೆ 20 ಮಂದಿ  ಬಿಜೆಪಿಗೆ ಹೋದರೂ ಹೋಗಬಹುದು, ಎರಡು ದಿನದಲ್ಲಿ ಸಮ್ಮಿಶ್ರ ಸರ್ಕಾರ ಉರುಳಲೂಬಹುದು ಎಂದು ಲಖನ್ ಜಾರಕಿಹೊಳಿ ತಿಳಿಸಿದರು. ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಲು ನಾವೂ ಪ್ರಯತ್ನಿಸುತ್ತಿದ್ದೇವೆ. 

ಅವರು ಗೋಕಾಕದಲ್ಲಿಲ್ಲ. ದೆಹಲಿಯಲ್ಲಿದ್ದಾರೆಂದು ಮಾಧ್ಯಮಗಳ ಮೂಲಕ ಕೇಳಿ ತಿಳಿದುಕೊಂಡಿದ್ದೇವೆ. ರಮೇಶ್ ಕಾಂಗ್ರೆಸ್‌ನಲ್ಲೇ ಇರಬೇಕೆಂಬ ಆಸೆ ನಮ್ಮದು. ಕಾಂಗ್ರೆಸ್ ನಾಯಕರು ಅವರ ಮನವೊಲಿಸಬೇಕು. ಅವರು ಪಕ್ಷದಲ್ಲಿ ಉಳಿಯುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗಲಿದೆ. ಅವರು ಇಪ್ಪತ್ತೈದು ವರ್ಷಗಳಿಂದ ಕಾಂಗ್ರೆಸ್‌ನ ಕಾರ್ಯಕರ್ತ ರಾಗಿದ್ದಾರೆ. ಕೂಡಲೇ ಪಕ್ಷದ ನಾಯಕರು ರಮೇಶ್ ಅವರ ಮನವೊಲಿಸಬೇಕು ಎಂದು ಲಖನ್ ಆಗ್ರಹಿಸಿದರು.