ಭೋಪಾಲ್[ಜು.02]: ಸಾವಿರ ಹೆಣ್ಮಕ್ಕಳ ಕೈಯ್ಯಲ್ಲಿ ರಕ್ಷಾ ಬಂಧನ ಕಟ್ಟಿಸಿಕೊಂಡು, ಇವರೆಲ್ಲರಿಗೂ ತಾನೇ ಅಣ್ಣ ಎಂದು ಹೇಳಿಕೊಂಡು ಜಂಭ ಕೊಚ್ಚಿಕೊಳ್ಳುತ್ತಿದ್ದ ಮಧ್ಯ ಪ್ರದೇಶದ ಝಾಕಿರ್ ಹುಸೇನ್ ವಾರ್ಡ್‌ ಕಾರ್ಪೋರೇಟರ್, ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಕಂಬಿ ಎಣಿಸುತ್ತಿದ್ದಾನೆ. 

ಹೌದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಿ, ಸಾವಿರಕ್ಕೂ ಅಧಿಕ ಮಂದಿ ಹೆಣ್ಮಕ್ಕಳಿಂದ ರಾಖಿ ಕಟ್ಟಿಸಿಕೊಂಡಿದ್ದ ಮಧ್ಯ ಪ್ರದೇಶದ ಪಕ್ಷೇತರ ಕಾರ್ಪೊರೇಟರ್ ರಾಜೇಂದ್ರ ಸಿಂಗ್‌, ಬಿತುಲ್‌ ನ 11 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಜೈಲು ಪಾಲಾಗಿದ್ದಾನೆ. ಅನಾಮಧೇಯ ಪತ್ರವೊಂದು ಈ ಕಾಮುಕ ಕಾರ್ಪೊರೇಟರ್ ಬಣ್ಣ ಬಯಲು ಮಾಡಿದೆ.

ಇಲ್ಲಿನ ಪೊಲೀಸ್ ಠಾಣೆಗೆ ರಾಜೇಂದ್ರ ಸಿಂಗ್‌ ಅಸಲಿಯತ್ತು ಏನೆಂದು ವಿವರಿಸಿದ್ದ ಅನಾಮಧೇಯ ಪತ್ರವೊಂದು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬೆತುಲ್‌ಗಂಜ್ ಸ್ಟೇಷನ್ ಹೌಸ್ ಆಫೀಸರ್ ಕುಷ್ವಾಹ ಈ ಕುರಿತು ತನಿಖೆ ಆರಂಭಿಸಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸ್ ಅಧಿಕಾರಿ ಸಂತ್ರಸ್ತ ಬಾಲಕಿಯನ್ನು ಪತ್ತೆ ಹಚ್ಚಿ ನಡೆದ ಘಟನೆ ವಿವರಿಸುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ಬಾಲಕಿಯ ಕುಟುಂಬಕ್ಕೆ ಭದ್ರತೆ ನೀಡುವುದಾಗಿ ಭರವಸೆಯನ್ನೂ ನೀಡಿದ್ದಾರೆ.

ಅತ್ಯಾಚಾರಗೈದ ವಿಚಾರವನ್ನು ಬಾಯ್ಬಿಡದಂತೆ ಕಾರ್ಪೋರೇಟರ್ ಬೆದರಿಕೆಯೊಂಡಿದ್ದರಿಂದ ಆರಂಭದಲ್ಲಿ ಬಾಲಕಿ ಏನೂ ಮಾಹಿತಿ ನೀಡಿಲ್ಲವಾದರೂ, ಪೊಲೀಸ್ ಅಧಿಕಾರಿಯ ಭರವಸೆ ಮೇರೆಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಆದರೆ ಅಷ್ಟರಲ್ಲಾಗಲೇ ತನಿಖೆ ನಡೆಯುತ್ತಿರುವ ಮಾಹಿತಿ ಪಡೆದ ಕಾರ್ಪೊರೇಟರ್ ರಾಜೇಂದ್ರ ಸಿಂಗ್‌ ಖುದ್ದು ಪೊಲೀಸ್ ಠಾಣೆಗೆ ಹಾಜರಾಗಿ ಶರಣಾಗಿದ್ದಾನೆ. 

ಕಾರ್ಪೊರೇಟರ್ ರಾಜೇಂದ್ರ ಸಿಂಗ್‌ ಕಳೆದೊಂದು ವರ್ಷದಿಂದ ಬಾಲಕಿ ಮೇಲೆ ಅತ್ಯಾಚಾರವೆಸಗುತ್ತಿದ್ದನಂತೆ. ಈ ವಿಚಾರ ತಾಯಿಯ ಗಮನಕ್ಕೆ ಬಂದಾಗ ಈ ಸಾವಿರ ತಂಗಿಯರ ಸೋ ಕಾಲ್ಡ್ 'ಅಣ್ಣ' ಆಕೆಯೂ ಬೆದರಿಕೆಯೊಡ್ಡಿ ಬಾಲಕಿ ಮೇಲಿನ ಅತ್ಯಾಚಾರ ಮುಂದುವರೆಸಿದ್ದ.

ಒಟ್ಟಾರೆಯಾಗಿ ಸಾವಿರ ಕಾರ್ಯಕ್ರಮ ಆಯೋಜಿಸಿ ಹೆಣ್ಮಕ್ಕಳಿಂದ ರಾಖಿ ಕಟ್ಟಿಸಿಕೊಂಡರೆ ಅಣ್ಣನಾಗಲು ಸಾಧ್ಯವಿಲ್ಲ, ಬದಲಾಗಿ ಮನಸ್ಸಲ್ಲಿ ಹೆಣ್ಮಕ್ಕಳ ಮೇಲೆ ಗೌರವ, ಅಣ್ಣನಾಗಿ ಅವರಿಗೆ ರಕ್ಷಣೆ ನೀಡುವ ಕರ್ತವ್ಯ ಇರಬೇಕು ಎನ್ನುವುದು ಉಲ್ಲೇಖನೀಯ.